×
Ad

ಅಸ್ಸಾಮಿನಲ್ಲಿ ಪ್ರತಿಭಟನಾಕಾರರಿಗೆ ಪ್ರಿಯವಾಗಿರುವ ಭೂಪೇನ್ ಹಝಾರಿಕಾ,ಝುಬಿನ್ ಗರ್ಗ್ ಗೀತೆಗಳು

Update: 2019-12-30 20:52 IST

ಗುವಾಹಟಿ,ಡಿ.30: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಬೀದಿಗಿಳಿದಿರುವ ಅಸ್ಸಾಮಿನ ಸಹಸ್ರಾರು ಪ್ರತಿಭಟನಾಕಾರರಿಗೆ ರಾಜ್ಯದ ಖ್ಯಾತ ಸಂಗೀತಗಾರ ದಿ.ಭೂಪೇನ್ ಹಝಾರಿಕಾ ಮತ್ತು ಹಾಲಿ ಜನಪ್ರಿಯ ಗಾಯಕ-ಸಂಗೀತಕಾರ ಝುಬಿನ್ ಗರ್ಗ್ ಅವರ ಗೀತೆಗಳು ಭಾರೀ ಸ್ಫೂರ್ತಿಯನ್ನು ನೀಡುತ್ತಿವೆ.

ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ ಜನರು ಹಾಡುತ್ತಿರುವ ಹಝಾರಿಕಾ ಅವರ ‘ಬಿಸ್ವ ಬಿಜೊಯೀ ನೌಜವಾನ್’ ಮತ್ತು ‘ಜೈ ಆಯಿ ಅಶೋಮ್’ ಗೀತೆಗಳು ಆಂದೋಲನದ ಕೂಗು ಆಗಿ ಪರಿಣಮಿಸಿವೆ.

ಪ್ರತಿಭಟನಾಕಾರರನ್ನು ಆಕರ್ಷಿಸುವಲ್ಲಿ ಗರ್ಗ್ ಕೂಡ ಹಿಂದೆ ಬಿದ್ದಿಲ್ಲ. ಜನರು ಎಲ್ಲೆಂದರಲ್ಲಿ ತಮ್ಮ ಮೊಬೈಲ್‌ ಗಳಲ್ಲಿ ‘ಮಾಯಾ’ ಅಥವಾ ‘ಪೊಲಿಟಿಕ್ಸ್ ನೊಕರಿಬಾ ಬಂಧು’ವಿನಂತಹ ಗರ್ಗ್ ಅವರ ಪ್ರಸಿದ್ಧ ಗೀತೆಗಳನ್ನು ಆಲಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಿಎಎ ವಿರುದ್ಧ ಗಟ್ಟಿಧ್ವನಿಗಳಲ್ಲಿ ಓರ್ವರಾಗಿರುವ ಗರ್ಗ್,‘ಸಂಸ್ಕೃತಿಯು ಯಾವುದೇ ವ್ಯಕ್ತಿಯ ಅಥವಾ ಸಮುದಾಯದ ಅನನ್ಯತೆಯ ಅಖಂಡ ಭಾಗವಾಗಿದೆ. ಈ ಆಂದೋಲನವು ನಮ್ಮ ಸಂಸ್ಕೃತಿಯನ್ನು ರಕ್ಷಿಸುವ ಉದ್ದೇಶವನ್ನೂ ಹೊಂದಿದೆ. ಅಸ್ಸಾಮಿನ ಯುವಜನರು ಮತ್ತು ಮಹಿಳೆಯರು ಸಿಎಎ ವಿರುದ್ಧ ಈ ಪ್ರತಿಭಟನೆಯಲ್ಲಿ ನಮ್ಮ ಶಕ್ತಿಯಾಗಿದ್ದಾರೆ. ಪ್ರತಿಭಟನೆಗಳ ಸಂದರ್ಭ ನಾವು ಹಾಡುಗಳನ್ನು ಹಾಡುತ್ತ ಪರಸ್ಪರರಲ್ಲಿ ಉತ್ಸಾಹವನ್ನು ತುಂಬುತ್ತಿದ್ದೇವೆ ’ಎಂದು ಹೇಳಿದರು.

‘ನಾವು ನಮ್ಮದೇ ರಾಜ್ಯದಲ್ಲಿ ಸಾಂಸ್ಕೃತಿಕ ಅಥವಾ ಭಾಷಾ ಅಲ್ಪಸಂಖ್ಯಾತರಾಗಲು ಬಯಸುವುದಿಲ್ಲ. ಹಿಂದೆ ಅಸ್ಸಾಮಿಗಳ ಮೇಲೆ ಬಂಗಾಳಿ ಭಾಷೆಯನ್ನು ಹೇರಲಾಗಿತ್ತು ಮತ್ತು ಭವಿಷ್ಯದಲ್ಲಿ ಅದು ಪುನರಾವರ್ತನೆಗೊಳ್ಳಬಹುದು ಎಂದು ನಾವು ಹೆದರಿದ್ದೇವೆ. ಹೀಗಾಗಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಕಾಯ್ದುಕೊಳ್ಳುವ ಒತ್ತಾಸೆಯೂ ಈ ಆಂದೋಲನಕ್ಕೆ ಪ್ರೇರಕ ಶಕ್ತಿಯಾಗಿದೆ ಎಂದು ಗರ್ಗ್ ಪತ್ನಿ,ಚಿತ್ರ ನಿರ್ಮಾಪಕಿ ಗರಿಮಾ ಗರ್ಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News