ಸಿಎಎ ವಿರೋಧಿ ಪ್ರತಿಭಟನಾಕಾರರು 80 ಕೋ.ರೂ.ನಷ್ಟ ಪಾವತಿಸಬೇಕು: ರೈಲ್ವೆ ಮಂಡಳಿ ಅಧ್ಯಕ್ಷ

Update: 2019-12-30 16:16 GMT

ಕೋಲ್ಕತಾ,ಡಿ.30: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ರೈಲ್ವೆ ಆಸ್ತಿಗಳಿಗೆ 80 ಕೋ.ರೂ.ನಷ್ಟ ಸಂಭವಿಸಿದ್ದು,ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿದ್ದವರಿಂದ ಈ ಮೊತ್ತವನ್ನು ವಸೂಲು ಮಾಡಲಾಗುವುದು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು ಸೋಮವಾರ ಹೇಳಿದ್ದಾರೆ. ಈ ಪೈಕಿ 70 ಕೋ.ರೂ.ಗಳ ನಷ್ಟ ಕೋಲ್ಕತಾದಲ್ಲಿ ಕೇಂದ್ರಕಚೇರಿಯನ್ನು ಹೊಂದಿರುವ ಪೂರ್ವ ರೈಲ್ವೆಗೆ ಸಂಭವಿಸಿದೆ.

ಈ ತಿಂಗಳ ಆರಂಭದಲ್ಲಿ ಪ್ರತಿಭಟನಾಕಾರರು ಪ.ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿನ ನಿಲ್ದಾಣ ವೊಂದರಲ್ಲಿ ಐದು ಖಾಲಿ ರೈಲುಗಳಿಗೆ ಬೆಂಕಿ ಹಚ್ಚಿದ್ದರು. ಹೌರಾ ಜಿಲ್ಲೆ,ಮಾಲ್ಡಾ ಮತ್ತು ಮುರ್ಷಿದಾಬಾದ್‌ಗಳಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಹಲವಾರು ರೈಲು ನಿಲ್ದಾಣಗಳನ್ನು ಭಾಗಶಃ ಸುಟ್ಟುಹಾಕಿದ್ದರು ಅಥವಾ ಧ್ವಂಸಗೊಳಿಸಿದ್ದರು.

80 ಕೋ.ರೂ.ಅಂದಾಜು ಮೊತ್ತವಾಗಿದ್ದು,ಅಂತಿಮ ವಿಶ್ಲೇಷಣೆಯ ಬಳಿಕ ನಷ್ಟದ ಮೊತ್ತ ಇನ್ನಷ್ಟು ಹೆಚ್ಚಬಹುದು ಎಂದ ಯಾದವ್, ದುಷ್ಕರ್ಮಿಗಳನ್ನು ಗುರುತಿಸಲು ರೈಲ್ವೆ ಪೊಲೀಸರು ರಾಜ್ಯ ಸರಕಾರದೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ದುಷ್ಕರ್ಮಿಗಳು ಪತ್ತೆಯಾದ ಬಳಿಕ ಅವರಿಂದ ನಷ್ಟದ ಮೊತ್ತವನ್ನು ವಸೂಲು ಮಾಡಲು ಪ್ರಯತ್ನಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News