×
Ad

ವಿಮಾನ ಪತನಕ್ಕೆ ಹಾರಾಟಗಳ ನಡುವಿನ ಕಡಿಮೆ ಅಂತರ ಕಾರಣ: ಬೆಕ್ ಏರ್ ಆರೋಪ

Update: 2019-12-30 21:56 IST
file photo

ಅಲ್ಮಾತಿ (ಕಝಖ್‌ಸ್ತಾನ್), ಡಿ. 30: ಕಳೆದ ವಾರ ಕಝಖ್‌ಸ್ತಾನದ ಬೆಕ್ ಏರ್ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನವೊಂದು ಪತನಗೊಂಡಿರುವುದಕ್ಕೆ ಅದರಲ್ಲಿ ಕಾಣಿಸಿಕೊಂಡಿರುವ ಪ್ರಕ್ಷುಬ್ಧತೆ ಕಾರಣ ಎಂದು ಬೆಕ್ ಏರ್ ಸೋಮವಾರ ಹೇಳಿದೆ. ಆದರೆ, ಕಝಖ್ ವಿಮಾನಯಾನ ನಿಯಂತ್ರಣ ಇಲಾಖೆಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಫಾಕರ್ 100 ವಿಮಾನವು ಶುಕ್ರವಾರ ಕಝಖ್‌ಸ್ತಾನದ ಅಲ್ಮಾತಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ತಡೆಗೋಡೆಯೊಂದಕ್ಕೆ ಢಿಕ್ಕಿಯಾಗಿ ಬಳಿಕ ಪಕ್ಕದ ಮಹಡಿ ಮನೆಯೊಂದಕ್ಕೆ ಅಪ್ಪಳಿಸಿತ್ತು. ಅಪಘಾತದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪತನದ ಹೊಣೆಯನ್ನು ಪರೋಕ್ಷವಾಗಿ ವಾಯು ಸಂಚಾರ ನಿಯಂತ್ರಕರ ಮೇಲೆ ಹಾಕಿರುವ ಬೆಕ್ ಏರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನುರ್ಲಾನ್ ಝುಮಸುಲ್ತನೊವ್, ವಿಮಾನ ಹಾರಾಟಕ್ಕೆ ಭಾರೀ ಬೇಗನೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.

‘‘ಶಾಂತ ವಾತಾವರಣದಲ್ಲಿ ಕಾಣಿಸಿಕೊಳ್ಳುವ ಪ್ರಕ್ಷುಬ್ಧತೆಯು ಎರಡು ಮೂರು ನಿಮಿಷಗಳ ಕಾಲ ಇರುತ್ತದೆ. ಹಿಂದಿನ ವಿಮಾನ ಹಾರಿದ ಒಂದು ಅಥವಾ ಎರಡು ನಿಮಿಷಗಳ ಬಳಿಕ ಫಾಕರ್ ವಿಮಾನವು ಹಾರಾಟ ನಡೆಸಿದೆ’’ ಎಂದು ಅವರು ಹೇಳಿದರು.

 ಆದರೆ, ಈ ವಾದವನ್ನು ತಳ್ಳಿ ಹಾಕಿರುವ ಸರಕಾರಿ ವಾಯು ನಿಯಂತ್ರಣ ಇಲಾಖೆ, ಎರಡು ವಿಮಾನಗಳ ಹಾರಾಟದ ನಡುವಿನ ಅಂತರ ಒಂದು ನಿಮಿಷ 52 ಸೆಕೆಂಡ್ ಆಗಿತ್ತು ಹಾಗೂ ಇದು ನಿಯಮಾವಳಿಗಳಿಗೆ ಅನುಗುಣವಾಗಿಯೇ ಇದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News