ಕವಲುದಾರಿಯಲ್ಲಿ ಬ್ಯಾಂಕಿಂಗ್ ಉದ್ದಿಮೆ

Update: 2019-12-31 06:35 GMT

ಟಿ.ಆರ್. ಭಟ್ ಹೋರಾಟಗಳ ಹಿನ್ನೆಲೆಯಿಂದ ಬಂದವರು. ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಮಾಜಿ ಜಂಟಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಭಟ್, ದೇಶದ ಆರ್ಥಿಕ ಬೆಳವಣಿಗೆಗಳ ಕುರಿತಂತೆ ಬೆಳಕು ಚೆಲ್ಲುತ್ತಾ ಬಂದಿದ್ದಾರೆ. ಇವರ ಬರಹಗಳು ರಾಷ್ಟ್ರಮಟ್ಟದ ಪತ್ರಿಕೆ, ವೆಬ್‌ಸೈಟ್ ಗಳಲ್ಲಿ ಪ್ರಕಟಗೊಂಡಿವೆ.

ಆರ್ಥಿಕತೆಯ ಮೇಲೆ ಬಹುಸ್ತರದ ಪ್ರಭಾವ ಬೀರುವ ನಿರ್ಧಾರಗಳನ್ನು ದೂರದೃಷ್ಟಿಯಿಂದ ಆಲೋಚಿಸಿ ಕೈಗೊಳ್ಳಬೇಕು. ಮಾತ್ರವಲ್ಲ ನಿರ್ಧಾರದ ಗುರಿ ಸ್ಪಷ್ಟವಾಗಿರಬೇಕು. 2016ರ ನೋಟು ರದ್ದತಿ, ಆರ್‌ಬಿಐಯ ಆದಾಯದಿಂದ ಮಿಗತೆ ಹಣವನ್ನು ಅನೂಚಾನವಾಗಿ ಬಂದ ಪದ್ಧತಿಗೆ ವಿರುದ್ಧವಾಗಿ ಸರಕಾರದ ಬೊಕ್ಕಸಕ್ಕೆ ವರ್ಗಾವಣೆ ಮತ್ತು ಬ್ಯಾಂಕುಗಳು ಕೆಟ್ಟ ಸಾಲಗಳ ಹೊರೆ ಮತ್ತು ನಷ್ಟದ ಭಾರದಿಂದ ನಡುಗುತ್ತಿದ್ದಂತೆ ಅವುಗಳನ್ನು ವಿಲೀನಗೊಳಿಸುವ ನಿರ್ಧಾರಗಳು ಬಹುತೇಕ ವಿವೇಚನಾರಹಿತವೇ ಆಗಿದ್ದವು.

ಇತ್ತೀಚೆಗಿನ ವರ್ಷಗಳಲ್ಲಿ ದೇಶದ ಹಣಕಾಸು ರಂಗವು ಈ ತನಕ ಕೇಳರಿಯದ ಸಂಕಷ್ಟಕ್ಕೆ ಒಳಗಾಗಿದೆ. ಸರಕಾರಿ ಕ್ಷೇತ್ರದ ಬ್ಯಾಂಕುಗಳು ಕೆಟ್ಟಸಾಲದ ಹೊರೆ ಮತ್ತು ನಿರಂತರ ನಷ್ಟವನ್ನು ಅನುಭವಿಸುತ್ತಿವೆ; ಖಾಸಗಿ ಮತ್ತು ಸಹಕಾರಿ ಬ್ಯಾಂಕುಗಳು, ಬ್ಯಾಂಕೇತರ ವಿತ್ತ ಸಂಸ್ಥೆಗಳು ಮತ್ತು ಉದ್ದಿಮೆಗಳಿಗೆ ಸಾಲ ನೀಡುವ ಅಭಿವೃದ್ಧಿ ವಿತ್ತ ಸಂಸ್ಥೆಗಳು (Non-Bank Financial Companies) (Development Finance Institutions) ವಿಭಿನ್ನ ಸಂಕಷ್ಟಗಳನ್ನು ಎದುರಿಸುತ್ತಿವೆ. ಅರ್ಥ ವ್ಯವಸ್ಥೆಯು ಹದಗೆಡದಂತೆ ಕಾಯಬೇಕಾದ ಸರಕಾರ, ಹಣಕಾಸುರಂಗದ ನಿಯಂತ್ರಣದ ಜವಾಬ್ದಾರಿ ಹೊತ್ತ ಭಾರತೀಯ ರಿಸರ್ವ ಬ್ಯಾಂಕು (ಆರ್‌ಬಿಐ) ಗೊತ್ತುಗುರಿ ಇಲ್ಲದ ನಿರ್ಧಾರಗಳನ್ನು ಕೈಗೊಂಡು ಬ್ಯಾಂಕುಗಳ ಮೇಲೆ ವಿಶ್ವಾಸಕ್ಕೆ ಧಕ್ಕೆ ಬರಬಹುದಾದ ಹಂತಕ್ಕೆ ತಲುಪಿದೆಯೇನೋ ಎಂಬ ಶಂಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಪರಿಸ್ಥಿತಿಯ ಹಿಂದಿರುವ ಕಾರಣಗಳು, ಸರಕಾರದ ಕ್ರಮಗಳು ಮತ್ತು ಮುಂದಿನ ದಾರಿಗಳ ಬಗ್ಗೆ ಕೂಲಂಕಷವಾದ ವಿಶ್ಲೇಷಣೆ ಸಕಾಲಿಕವಾಗುತ್ತದೆ.

ಪರಿಸ್ಥಿತಿಯ ತೀವ್ರತೆ

ಹಣಕಾಸು ರಂಗದ ಈಗಿನ ಪರಿಸ್ಥಿತಿಯ ತೀವ್ರತೆಯನ್ನು ಕೆಲವು ಮಾಹಿತಿಗಳ ಮೂಲಕ ಅರ್ಥಮಾಡಿಕೊಳ್ಳಬಹುದು. ಅವುಗಳು ಮುಖ್ಯವಾಗಿ ಕೆಳಗೆ ಹೇಳಿದ ವಿಷಯಗಳಿಗೆ ಸಂಬಂಧಿಸಿವೆ:

  1.ಬ್ಯಾಂಕುಗಳ ಕೆಟ್ಟ ಸಾಲಗಳ ಸ್ಥಿತಿ

  2.ಅವುಗಳು ಅನುಭವಿಸುತ್ತಿರುವ ನಷ್ಟದ ಪ್ರಮಾಣ

  3.ಹೆಚ್ಚುತ್ತಿರುವ ವಂಚನೆಗಳು

  4.ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವ್ಯವಹಾರಗಳು

  5.ಮುಳುಗಡೆಯಾಗುತ್ತಿರುವ ಸಹಕಾರಿ ಬ್ಯಾಂಕುಗಳು

ಕೆಟ್ಟ ಸಾಲ ಮತ್ತು ನಷ್ಟಗಳ ಭಾರ

ಬ್ಯಾಂಕುಗಳ ಆದಾಯ ಹುಟ್ಟುವುದು ಮುಖ್ಯವಾಗಿ ಕೊಟ್ಟ್ಟ ಸಾಲಗಳ ಮೂಲಕ. ಕಾಲಕಾಲಕ್ಕೆ ಅವುಗಳು ವಾಪಸಾಗಿ, ಕ್ಲಪ್ತ ಸಮಯಕ್ಕೆ ಬಡ್ಡಿ ಸಿಕ್ಕುತ್ತಿದ್ದರೆ ಬಂದ ಹಣವನ್ನು ಬ್ಯಾಂಕುಗಳು ಪುನಃ ಸಾಲ ನೀಡಲು ವಿನಿಯೋಗಿಸಿಕೊಳ್ಳಲು ಸಾಧ್ಯ. ಆ ಮೂಲಕ ಬ್ಯಾಂಕಿನ ಆದಾಯ ವೃದ್ಧಿಸುತ್ತದೆ ಹಾಗೂ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ. ಆದರೆ 2014ರಿಂದ ಈಚೆಗೆ ಕೊಟ್ಟ ದೊಡ್ಡ ದೊಡ್ಡ ಸಾಲಗಳಿಗೆ, ಬಡ್ಡಿ ಸಿಗುತ್ತಿಲ್ಲ ಮಾತ್ರವಲ್ಲ ಅಸಲಿಗೆ ಹೊಡೆತ ಬೀಳುತ್ತಿದೆ. ಬ್ಯಾಂಕಿಂಗ್ ಪರಿಭಾಷೆಯಲ್ಲಿ ಇವುಗಳು ಅನುತ್ಪಾದಕ ಆಸ್ತಿಗಳು ((Non- Performing Assets-NPA-ಎನ್‌ಪಿಎ) ಅಥವಾ ಕೆಟ್ಟ ಸಾಲಗಳು. ಈ ಕೆಟ್ಟ ಸಾಲಗಳ ಪ್ರಮಾಣ ಹೋದ ನಾಲ್ಕೈದು ವರ್ಷಗಳಲ್ಲಿ ನಿರಂತರವಾಗಿ ಹೆಚ್ಚಿದೆ.

ಆರ್‌ಬಿಐಯ ವರದಿಯಂತೆ ಸರಕಾರಿ ರಂಗದ ಬ್ಯಾಂಕು ಗಳ ಎನ್‌ಪಿಎ 2014ರಲ್ಲಿ 2,24,542 ಕೋಟಿ ಇಷ್ಟಿದ್ದರೆ 2019ರಲ್ಲಿ ಅದು 7,10,109 ರೂ. ಕೋಟಿಗೇರಿದೆ. ಮಾತ್ರವಲ್ಲ, ಬೃಹತ್ ಕಂಪೆನಿಗಳೇ ಸಾಲವನ್ನು ಮರುಪಾವತಿ ಮಾಡುತ್ತಿಲ್ಲ, ಬಡ್ಡಿಯನ್ನು ಕೊಡುತ್ತಿಲ್ಲ. ಡಿಸೆಂಬರ್ 2018ರ ಆರ್‌ಬಿಐಯ ಹೇಳಿಕೆಯ ಪ್ರಕಾರ ಸರಕಾರಿ ಬ್ಯಾಂಕುಗಳ ಕೆಟ್ಟ ಸಾಲಗಳ ಶೇ.52 ರಷ್ಟು 100 ಅತಿ ದೊಡ್ಡ ಸುಸ್ತಿದಾರರಿಂದಲೇ ಬರಬೇಕಾಗಿತ್ತು. ಇನ್ನೊಂದು ಮಾಹಿತಿಯಂತೆ 2014-19ರ ಅವಧಿಯಲ್ಲಿ ಬ್ಯಾಂಕುಗಳು ಸುಮಾರು ರೂ. 5,55,603 ಕೋಟಿಗಳಷ್ಟು ಕೆಟ್ಟಸಾಲಗಳನ್ನು ಮನ್ನಾ ಮಾಡಿವೆ. ಮಾರ್ಚ್ 2019 ಕ್ಕೆ ಸರಕಾರಿ ರಂಗದ ಬ್ಯಾಂಕುಗಳು ನೀಡಿದ ಒಟ್ಟು ಸಾಲದ ಮೊಬಲಗು 59,26,286 ರೂ. ಕೋಟಿ ಎಂಬುದನ್ನು ಗಮನಿಸಿದರೆ ಕೆಟ್ಟ ಸಾಲಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳುವುದು ಸುಲಭ.

ಹೆಚ್ಚುತ್ತಿರುವ ಎನ್‌ಪಿಎಗಳಿಂದಾಗಿ ಬ್ಯಾಂಕುಗಳ ಲಾಭದಾಯಕತೆ ಕುಸಿಯುತ್ತಾ ಹೋಯಿತು. 2014ರಲ್ಲಿ ರೂ.37,019 ಕೋಟಿ ನಿವ್ವಳ ಲಾಭ ಗಳಿಸಿದ ಸರಕಾರಿ ಬ್ಯಾಂಕುಗಳು 2016ರಿಂದ ನಷ್ಟವನ್ನು ಅನುಭವಿಸಿದವು; 2018ಕ್ಕೆ ಒಟ್ಟು ನಷ್ಟ ರೂ. 85,371 ಕೋಟಿಗೇರಿತು. ಆ ವರ್ಷ ಅವುಗಳ ಒಟ್ಟಾರೆ ಬಂಡವಾಳ ರೂ.33,154 ಕೋಟಿ ಇತ್ತಷ್ಟೆ. ಈ ಪರಿಸ್ಥಿತಿ 2019ರಲ್ಲಿ ಮತ್ತಷ್ಟು ಹದಗೆಟ್ಟಿತು. ಇವುಗಳ ಕುರಿತಂತೆ ಸ್ಥೂಲ ಮಾಹಿತಿಯನ್ನು ಕೋಷ್ಟಕ-1ರಲ್ಲಿ ಕೊಡಲಾಗಿದೆ.

ವಂಚನೆಗಳ ಹೊಡೆತ

ಹೆಚ್ಚುತ್ತಿರುವ ಎನ್‌ಪಿಎಯ ಭಾರದೊಂದಿಗೆ ಭಾರೀ ವಂಚನೆಗಳಿಂದಲೂ ಬ್ಯಾಂಕುಗಳ ಲಾಭದಾಯಕತೆಗೂ ವಿಶ್ವಾಸಾರ್ಹತೆಗೂ ಹೊಡೆತ ಬಿತ್ತು. ಆರ್‌ಬಿಐಯ ವರದಿಗಳಂತೆ 2014-18ರಲ್ಲಿ ರೂ.1 ಲಕ್ಷ ಮತ್ತು ಹೆಚ್ಚಿನ ಮೊತ್ತದ ವಂಚನೆಗಳಿಗೆ ತುತ್ತಾದ ಒಟ್ಟು ಹಣ ರೂ.10,171 ಕೋಟಿಯಿಂದ ರೂ.41,168 ಕೋಟಿಗೆ ಏರಿ, 2019ರಲ್ಲಿ ರೂ.71,543 ಕೋಟಿನಷ್ಟಾಯಿತು. ಕೇಂದ್ರದ ವಿತ್ತ ಸಚಿವೆಯ ನವೆಂಬರ್ 2019ರ ಹೇಳಿಕೆಯಂತೆ ಮಾರ್ಚ್ -ಸೆಪ್ಟಂಬರ್‌ನ ಅವಧಿಯಲ್ಲಿ ಈ ಮೊತ್ತ ರೂ.95,700 ಕೋಟಿಗೆ ಏರಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಸಾಲಕ್ಕೆ ಸಂಬಂಧಿಸಿದ ವಂಚನೆಗಳೇ ಇವೆ.

ಮುಳುಗುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವ್ಯವಹಾರ ಗಳೂ ತೀವ್ರ ಆತಂಕಕ್ಕೆ ಎಡೆಮಾಡಿವೆ. 2018ರಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಾಲ ಮತ್ತು ಸಹಾಯಧನ ನೀಡುವ ದೇಶದ ಬಹುದೊಡ್ಡ ಸಂಸ್ಥೆಯಾದ ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಸಿಯಲ್ ಸರ್ವಿಸಸ್ ಲಿ.(ಐಎಲ್‌ಎಫ್‌ಎಸ್) ಮುಳುಗುವ ಹಂತಕ್ಕೆ ತಲಪಿತು. ಅದರ ಹಿರಿಯ ಅಧಿಕಾರಿಗಳ ದುರುದ್ದೇಶ ಪೂರಿತ ಮತ್ತು ವಿವೇಚನಾಹೀನ ನಿರ್ಧಾರಗಳು ಸಂಸ್ಥೆಯ ಅವನತಿಗೆ ಕಾರಣವಾದವು. ಈ ಸಂಸ್ಥೆ ರೂ.94,200 ಕೋಟಿ ಹಣವನ್ನು ಬ್ಯಾಂಕುಗಳೂ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಗೆ ಕೊಡಬೇಕಿದೆ. ಅದರೊಂದಿಗೇ ಇನ್ನೂ ಕೆಲವು ಸಂಸ್ಥೆಗಳು ಕುಸಿಯುತ್ತಿವೆ. ಇತ್ತೀಚೆಗೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿ. ದಿವಾಳಿಯ ಹಂತಕ್ಕೆ ತಲಪಿದೆ-ಈ ಸಂಸ್ಥೆಯಿಂದ ಸುಮಾರು ರೂ. 84,000 ಕೋಟಿ ಹಣ ಬ್ಯಾಂಕುಗಳಿಗೆ, ರಾಷ್ಟ್ರೀಯ ಗೃಹ ಮಂಡಳಿ, ಮ್ಯೂಚುವಲ್ ಫಂಡ್ ಮುಂತಾದವುಗಳಿಗೆ ಬರಲಿದೆ. ಇವುಗಳೆರಡರ ಕುಸಿತವೂ ಬ್ಯಾಂಕಿಂಗ್ ರಂಗಕ್ಕೆ ಅಸಾಧ್ಯವಾದ ಹೊರೆಯನ್ನು ಉಂಟುಮಾಡಲಿದೆ.

ಸಹಕಾರಿ ಬ್ಯಾಂಕುಗಳು

ಇನ್ನೊಂದು ಆತಂಕಕಾರಿ ಬೆಳವಣಿಗೆ ದೊಡ್ಡ ದೊಡ್ಡ ಸಹಕಾರಿ ಬ್ಯಾಂಕುಗಳ ಕುಸಿಯುತ್ತಿರುವ ಆರೋಗ್ಯ. ಏಳು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದ ಪಂಜಾಬ್ ಮಹಾರಾಷ್ಟ್ರ ಕೊಆಪರೇಟಿವ್ ಬ್ಯಾಂಕು (ಪಿಎಮ್‌ಸಿ) ಸೆಪ್ಟಂಬರ 2019ರಲ್ಲಿ ಮುಳುಗುವ ಹಂತಕ್ಕೆ ತಲಪಿದೆ. ಸಣ್ಣ ಠೇವಣಿದಾರರು ಅತಂತ್ರಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇನ್ನೂ ಕೆಲವು ಸಹಕಾರಿ ಬ್ಯಾಂಕುಗಳ ವ್ಯವಹಾರ ಪ್ರಶ್ನಾರ್ಹವಾಗಿದ್ದು ಆತಂಕವು ಹೆಚ್ಚಿದೆ.

ಸಂಕಷ್ಟದ ಹಿನ್ನೆಲೆ

ತಜ್ಞರ ಪ್ರಕಾರ ಬ್ಯಾಂಕಿಂಗ್ ಕ್ಷೇತ್ರದ ಪ್ರಸಕ್ತ ಸಮಸ್ಯೆಗಳಿಗೆ ಅನೇಕ ಕಾರಣಗಳಿವೆ. ಅವುಗಳನ್ನು ನಾಲ್ಕು ಪಂಗಡಗಳಾಗಿ ಗುರುತಿಸಬಹುದು.

  1.ಬಾಹ್ಯ ಒತ್ತಡಗಳು

  2.ಆಂತರಿಕ ವೈಫಲ್ಯಗಳು

  3.ಸರಕಾರದ ನೀತಿಗಳು

  4.ಆರ್‌ಬಿಐಯ ನಿರ್ಲಕ್ಷ

1991ರಲ್ಲಿ ಆರಂಭವಾದ ಉದಾರೀಕರಣದ ನಂತರದ ಎರಡು ದಶಕಗಳಲ್ಲಿ ಸತತ ಆರ್ಥಿಕ ಪ್ರಗತಿಯನ್ನು ದಾಖಲಿಸಿದ ಭಾರತ ಈ ಶತಮಾನದ 2ನೇ ದಶಕದಲ್ಲಿ ಆರ್ಥಿಕವಾಗಿ ಮುಗ್ಗರಿಸಲು ಆರಂಭಿಸಿತು. ಪ್ರಗತಿಯ ದರ 2007-08ರಲ್ಲಿ ಶೇ.9 ಇದ್ದುದು 2012-13ರಲ್ಲಿ 6ಕ್ಕೆ ಇಳಿಯಿತು. ಕೈಗಾರಿಕಾ ರಂಗದ ಚಟುವಟಿಕೆಯಲ್ಲಿ ಹಿಂಜರಿತ ಆರಂಭವಾಯಿತು. ಸ್ಥಾಪಿತ ಸಾಮರ್ಥ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಗಳಾದವು. ಹೊಸ ಉದ್ದಿಮೆಗಳು ಅಧಿಕಾರಿಗಳ ಕೆಂಪು ಪಟ್ಟಿ ಮತ್ತು ಪರಿಸರದ ಕಾಯ್ದೆಗಳ ಗೊಂದಲದಿಂದಾಗಿ ಕಾರ್ಯ ರೂಪಕ್ಕೆ ಬರಲು ಕಷ್ಟವಾಗ ತೊಡಗಿತು. ಇವುಗಳ ಪರಿಣಾಮ ಉದ್ದಿಮೆಗಳಿಗೆ ಹೊಸತಾಗಿ ಸಾಲನೀಡಲು ಆರಂಭಿಸಿದ್ದ ಬ್ಯಾಂಕುಗಳ ಮೇಲೆ ಆಯಿತು.

ಬ್ಯಾಂಕುಗಳಿಗೆ ಆಂತರಿಕ ಸ್ವಾಯತ್ತತೆ ನೀಡಿದರೂ ಸರಕಾರದ ನಿರಂತರ ಹಸ್ತಕ್ಷೇಪ ದಿಂದ ಅವುಗಳ ನಿರ್ವಹಣೆಯಲ್ಲಿ ಸುಧಾರಣೆಯಾಗಲಿಲ್ಲ. ನಿರ್ದೇಶಕ ಮಂಡಳಿಗಳು ಬಹುಮಟ್ಟಿಗೆ ಸರಕಾರದ ಮತ್ತು ಬ್ಯಾಂಕುಗಳ ಮುಖ್ಯಸ್ಥರ ರಬ್ಬರ್ ಸ್ಟಾಂಪ್‌ಗಳಂತೆ ವರ್ತಿಸುತ್ತಿದ್ದವು. ಸಾಂಸ್ಥಿಕ ನಿರ್ವಹಣೆ (Corporate governance-ಕಾರ್ಪೊರೇಟ್ ಗವರ್ನೆನ್ಸ್) ಕೇವಲ ವರದಿಗಳಿಗೆ ಮಾತ್ರ ಸೀಮಿತವಾಗಿತ್ತು.

ಹಣಕಾಸು ಸಂಸ್ಥೆಗಳ ದಕ್ಷತೆ ಅವುಗಳ ಹಿರಿಯ ಅಧಿಕಾರಿಗಳ ನಾಯಕತ್ವದ ಮೇಲೆ ಅವಲಂಬಿಸಿದೆ. ಹಿರಿಯ ಅಧಿಕಾರಿಗಳ ನೇಮಕಾತಿ ಮಾಡುವ ಸರಕಾರದ ನೀತಿ ದೋಷಪೂರಿತವಾಗಿತ್ತು. ಅವರ ಆಯ್ಕೆಯ ಮಾನದಂಡ ಪಾರದರ್ಶಕವಾಗಿರಲಿಲ್ಲ; ಮಾತ್ರವಲ್ಲ ಕಳಪೆ ನಿರ್ವಹಣೆಗೆ ಉತ್ತರದಾಯಿತ್ವವನ್ನು ಹೇರುವ ಪರಿಪಾಠವನ್ನು ಬೆಳೆಸಿಕೊಂಡಿಲ್ಲ. ಕಿರಿಯ ಅಧಿಕಾರಿಗಳ ತಪ್ಪಿಗೆ ಶಿಸ್ತುಕ್ರಮವನ್ನು ನಿರ್ದೇಶಿಸುವ ಸರಕಾರ, ಅಧ್ಯಕ್ಷರ ಹಾಗೂ ನಿರ್ದೇಶಕರ ವೈಫಲ್ಯ ಮತ್ತು ತಪ್ಪುಗಳಿಗೆ ಶಿಸ್ತುಕ್ರಮ ಕೈಗೊಂಡ ಸನ್ನಿವೇಶಗಳೇ ವಿರಳ.

ನಿಯಂತ್ರಕನ ನೆಲೆಯಲ್ಲಿ ಆರ್‌ಬಿಐಯೂ ತನಗಿದ್ದ ಅಧಿಕಾರವನ್ನು ವಿವೇಕದಿಂದ ಉಪಯೋಗಿಸುತ್ತಿರಲಿಲ್ಲ. ಬ್ಯಾಂಕುಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಬಗ್ಗೆ ಮಾಹಿತಿಯಿದ್ದರೂ ಬೆಕ್ಕಿನಂತೆ ಕಣ್ಣು ಮುಚ್ಚಿ ಹಾಲು ಕುಡಿಯುತ್ತಿದ್ದ ಸಂದರ್ಭಗಳೇ ಹೆಚ್ಚು. ಪಿಎಮ್‌ಸಿ ಬ್ಯಾಂಕಿನ ಅವ್ಯವಹಾರಗಳು ಇದನ್ನು ಮತ್ತೆ ಬೆಳಕಿಗೆ ತಂದಿವೆ.

ಮೋದಿ ಸರಕಾರದ ಧೋರಣೆಗಳು

ಐದು ವರ್ಷಗಳಲ್ಲಿ ಮೋದಿ ಸರಕಾರವು ಬ್ಯಾಂಕುಗಳ ದಕ್ಷತೆಯ ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಂಡಿದೆ. 2015ರಲ್ಲಿ ಜ್ಞಾನ ಸಂಗಮವೆಂಬ ವಿಚಾರ ಸಂಕಿರಣದಲ್ಲಿ ಹೊರ ಹೊಮ್ಮಿದ ಸಲಹೆಗಳಂತೆ 7 ಅಂಶಗಳ ಸುಧಾರಣಾ ಕ್ರಮಗಳನ್ನು ಘೋಷಿಸಿತು. ಅಧಿಕ ಬಂಡವಾಳ ಹೂಡಿಕೆ, ನಿರ್ದೇಶಕರ ನೇಮಕಾತಿಗೋಸ್ಕರ ಬ್ಯಾಂಕು ಬೋರ್ಡ ಬ್ಯುರೋದ ಸ್ಥಾಪನೆ, ದಿವಾಳಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹೊಸ ದಿವಾಳಿ ನೀತಿ (Insolvency & Bankruptcy Code-IBC - ಐಬಿಸಿ), ಕೆಟ್ಟ ಸಾಲಗಳ ವಸೂಲಾತಿಗೆ ಕಾಲಬದ್ಧ ಪ್ರಕ್ರಿಯೆಗಳು, ವಂಚನೆಗಳನ್ನು ಶೋಧಿಸಲು ಉತ್ತೇಜನ ಮುಂತಾದ ನಿರ್ಧಾರಗಳನ್ನು ಜಾರಿಗೊಳಿಸಿದೆ. 2018-19ರಿಂದ ಬ್ಯಾಂಕುಗಳ ವಿಲೀನದ ಪ್ರಕ್ರಿಯೆಯನ್ನೂ ಆರಂಭಿಸಿದೆ. ಹೀಗಿದ್ದೂ ಬ್ಯಾಂಕಿಂಗ್ ಉದ್ದಿಮೆಯು ಸುಧಾರಿಸುವ ಸೂಚನೆಗಳು ಕಾಣುತ್ತಿಲ್ಲ.

ಪ್ರಸಕ್ತ ಸರಕಾರದ ಧೋರಣೆ ಕೆಲವೊಂದು ದೃಷ್ಟಿಯಿಂದ ದೋಷಪೂರಿತ ಎಂದು ಹೇಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ಗಮನಿಸಬಹುದು:

  1.ಸೈದ್ಧಾಂತಿಕ ಹಿನ್ನೆಲೆ ಇಲ್ಲದ ನಿರ್ಧಾರಗಳು

  2.ತಜ್ಞರನ್ನು ನೇಪಥ್ಯಕ್ಕೆ ತಳ್ಳುವುದು

  3.ದೂರದೃಷ್ಟಿ ಇಲ್ಲದಿರುವಿಕೆ

  4.ಗುರಿಗಳಲ್ಲಿ ನಿಖರತೆಯ ಅಭಾವ

ಬ್ಯಾಂಕುಗಳು ರಾಷ್ಟ್ರೀಕೃತವಾದಾಗ ಅದರ ಹಿಂದೆ ದೇಶದ ಸೀಮಿತವಾದ ಸಂಪನ್ಮೂಲಗಳು ಸಮಾಜದ ಸಮಗ್ರಹಿತಕ್ಕೆ ಉಪಯೋಗವಾಗಬೇಕೆಂಬ ಒಂದು ಸೈದ್ಧಾಂತಿಕ ನಿಲುವು ಅಡಕವಾಗಿತ್ತು. ಉದಾರೀಕರಣದ ಕಾಲಘಟ್ಟದಲ್ಲಿ ಸರಕಾರದ ಹಸ್ತಕ್ಷೇಪ ಕಡಿತಗೊಂಡು, ಮಾರುಕಟ್ಟೆಯ ಬೇಡಿಕೆ-ಪೂರೈಕೆಯ ಒತ್ತಡಗಳ ಆಧಾರದಲ್ಲಿ ವ್ಯವಹಾರಗಳು ನಡೆಯಬೇಕೆಂಬ ಧೋರಣೆಗೆ ಆದ್ಯತೆ ಕೊಡಲಾಯಿತು. ಈಗ ಆ ಎರಡು ಸಿದ್ಧಾಂತಗಳಿಗೂ ಸಂಬಂಧವೇ ಇಲ್ಲದ ನಿರ್ಧಾರಗಳನ್ನು ಗಮನಿಸಬಹುದು. ಸರಕಾರಕ್ಕೆ ಹಣಕಾಸು ಸಂಸ್ಥೆಗಳ ಮೇಲೆ ಹಿಡಿತವನ್ನು ಸಡಿಲಿಸಲು ಆಸಕ್ತಿಯಿಲ್ಲ; ಅದರ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸರಕಾರಿ ಹಣಕಾಸು ಸಂಸ್ಥೆಗಳೇ ಬೇಕು! ಯಾವುದೇ ಹೊಸ ನೀತಿಯನ್ನು ರೂಪಿಸುವಾಗ ವಿಸ್ತೃತವಾಗಿ ವಿವೇಚಿಸಿ, ತಜ್ಞರ ಅಭಿಪ್ರಾಯಗಳನ್ನು ಪರಿಶೀಲಿಸಿ ಮುಂದುವರಿಯಬೇಕಾಗುತ್ತದೆ. ಆದರೆ ಈ ಸರಕಾರ ತಜ್ಞರ ಅಭಿಪ್ರಾಯಗಳನ್ನು ಕೇಳುವ ಪ್ರವೃತ್ತಿಯನ್ನು ಕೈಬಿಟ್ಟಿದೆ, ಮಾತ್ರವಲ್ಲ ಅವರನ್ನು ಮೂಲೆಗುಂಪು ಮಾಡುತ್ತಿದೆ. ಆರ್‌ಬಿಐ ಗವರ್ನರರ ಮತ್ತು ನೀತಿ ಆಯೋಗದ ಮುಖ್ಯಸ್ಥರ ನೇಮಕಾತಿಗಳು ಇದಕ್ಕೆ ಉದಾಹರಣೆಗಳು.

ವಿವೇಚನಾರಹಿತ ನಿರ್ಧಾರಗಳು?

ಆರ್ಥಿಕತೆಯ ಮೇಲೆ ಬಹುಸ್ತರದ ಪ್ರಭಾವ ಬೀರುವ ನಿರ್ಧಾರಗಳನ್ನು ದೂರದೃಷ್ಟಿಯಿಂದ ಆಲೋಚಿಸಿ ಕೈಗೊಳ್ಳಬೇಕು. ಮಾತ್ರವಲ್ಲ ನಿರ್ಧಾರದ ಗುರಿ ಸ್ಪಷ್ಟವಾಗಿರಬೇಕು. 2016ರ ನೋಟು ರದ್ದತಿ, ಆರ್‌ಬಿಐಯ ಆದಾಯದಿಂದ ಮಿಗತೆ ಹಣವನ್ನು ಅನೂಚಾನವಾಗಿ ಬಂದ ಪದ್ಧತಿಗೆ ವಿರುದ್ಧವಾಗಿ ಸರಕಾರದ ಬೊಕ್ಕಸಕ್ಕೆ ವರ್ಗಾವಣೆ ಮತ್ತು ಬ್ಯಾಂಕುಗಳು ಕೆಟ್ಟ ಸಾಲಗಳ ಹೊರೆ ಮತ್ತು ನಷ್ಟದ ಭಾರದಿಂದ ನಡುಗುತ್ತಿದ್ದಂತೆ ಅವುಗಳನ್ನು ವಿಲೀನಗೊಳಿಸುವ ನಿರ್ಧಾರಗಳು ಬಹುತೇಕ ವಿವೇಚನಾರಹಿತವೇ ಆಗಿದ್ದವು.

ಬ್ಯಾಂಕುಗಳ ವಿಲೀನೀಕರಣದ ನಿರ್ಧಾರವನ್ನು ಪರಿಶೀಲಿಸಿದರೆ ಇದು ಸ್ಪಷ್ಟವಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ 2017-18ರಲ್ಲಿ ಅದರ 5 ಸಹವರ್ತಿ ಬ್ಯಾಂಕುಗಳನ್ನು ಮತ್ತು 2018-19ರಲ್ಲಿ ಬ್ಯಾಂಕ್ ಆಫ್ ಬರೋಡದ ಜೊತೆ ವಿಜಯ ಮತ್ತು ದೇನಾ ಬ್ಯಾಂಕುಗಳನ್ನು ಸೇರಿಸಲಾಯಿತು. ಈ ಆರ್ಥಿಕ ವರ್ಷದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕು ಜೊತೆ ಕೆಲವು ಬ್ಯಾಂಕುಗಳು ವಿಲೀನವಾಗಲಿವೆ. ಐದು ವರ್ಷಗಳಲ್ಲಿ ಈ ದೊಡ್ಡ ಬ್ಯಾಂಕುಗಳ ಎನ್‌ಪಿಎಗಳು ಕೋಷ್ಟಕ 2ರಲ್ಲಿ ತಿಳಿಸಿದಂತೆ ಹೆಚ್ಚುತ್ತಾ ಹೋಗಿವೆೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವ್ಯವಹಾರಗಳೂ ತೀವ್ರ ಆತಂಕಕ್ಕೆ ಎಡೆಮಾಡಿವೆ. 2018ರಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಾಲ ಮತ್ತು ಸಹಾಯಧನ ನೀಡುವ ದೇಶದ ಬಹುದೊಡ್ಡ ಸಂಸ್ಥೆಯಾದ ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಸಿಯಲ್ ಸರ್ವಿಸಸ್ ಲಿ. (ಐಎಲ್‌ಎಫ್‌ಎಸ್) ಮುಳುಗುವ ಹಂತಕ್ಕೆ ತಲುಪಿತು. ಅದರ ಹಿರಿಯ ಅಧಿಕಾರಿಗಳ ದುರುದ್ದೇಶ ಪೂರಿತ ಮತ್ತು ವಿವೇಚನಾಹೀನ ನಿರ್ಧಾರಗಳು ಸಂಸ್ಥೆಯ ಅವನತಿಗೆ ಕಾರಣವಾದವು.

ಹೆಚ್ಚುತ್ತಿರುವ ಕೆಟ್ಟ ಸಾಲಗಳು ಮತ್ತು ನಷ್ಟವನ್ನು ನಿವಾರಿಸುವ ಅಥವಾ ಕಡಿತಗೊಳಿಸುವ ನಿರ್ದಿಷ್ಟ ಕ್ರಮ ಗಳನ್ನು ಜಾರಿಗೊಳಿಸಿ ದೊಡ್ಡ ಬ್ಯಾಂಕುಗಳ ಆರೋಗ್ಯ ಸುಧಾರಿಸುವ ಮೊದಲೇ ಅವೇ ಸಮಸ್ಯೆಗಳಿಗೀಡಾದ ಇತರ ಬ್ಯಾಂಕುಗಳನ್ನು ಅವುಗಳ ಗರ್ಭಕ್ಕೆ ಸೇರಿಸುವ ನಿರ್ಧಾರಗಳು ವಿವೇಚನಾಪೂರ್ಣ ಎಂದು ಹೇಳಲು ಹೇಗೆ ಸಾಧ್ಯ?

2016ರಲ್ಲಿ ಈ ಸರಕಾರವೇ ನೇಮಿಸಿದ್ದ ಬ್ಯಾಂಕು ಬೋರ್ಡ್ ಮಂಡಳಿಯ ಅಧ್ಯಕ್ಷರಾಗಿದ್ದ ವಿನೋದ ರೈ ಅವರು ನೀಡಿದ್ದ ಅನೇಕ ಶಿಫಾರಸುಗಳನ್ನು ಕಡೆಗಣಿಸಿದ್ದು ಬ್ಯಾಂಕುಗಳಲ್ಲಿ ಆಡಳಿತಾತ್ಮಕ ಸುಧಾರಣೆಗೆ ಸರಕಾರ ಎಷ್ಟು ಬದ್ಧವಾಗಿದೆ ಎಂಬುದಕ್ಕೂ ಕನ್ನಡಿಯನ್ನು ಹಿಡಿಯುತ್ತದೆ.

ಮುಂದಿನ ದಾರಿಗಳು

ಒಂದು ದೇಶದ ಆರ್ಥಿಕತೆಯ ಸದೃಢತೆಗೆ ಅದರ ಹಣಕಾಸು ರಂಗ ಆರೋಗ್ಯಕರವಾಗಿ ಕಾರ್ಯ ನಿರ್ವಹಿಸ ಬೇಕು. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವ ಪೂರ್ಣ ಸುಧಾರಣೆಗಳು ಆಗಬೇಕಿವೆ. ವಿಲೀನೀಕರಣ, ಖಾಸಗೀಕರಣ ಮತ್ತು ಹೊಸ ಬ್ಯಾಂಕುಗಳ ಪ್ರವೇಶಕ್ಕಿಂತ ಲೂ ಮುಖ್ಯವಾದ ಅಗತ್ಯ ಕ್ರಮಗಳು ಹೀಗಿವೆ:

  1.ಬ್ಯಾಂಕುಗಳ ಆಂತರಿಕ ಆಡಳಿತೆಯಲ್ಲಿ ಸ್ವಾಯತ್ತತೆ ನೀಡುವುದು 2.ಆಡಳಿತೆಯಲ್ಲಿ ಸರಕಾರ ಹಸ್ತಕ್ಷೇಪವನ್ನು ನಿಲ್ಲಿಸುವುದು

  3.ಬ್ಯಾಂಕುಗಳ ಮುಖ್ಯಾಧಿಕಾರಿಗಳ ಮತ್ತು ನಿರ್ದೇಶಕರ ನೇಮಕಾತಿಯಲ್ಲಿ ಪಾರದರ್ಶಕತೆ, ನಿರ್ದೇಶಕ ಮಂಡಳಿಯನ್ನು ವೃತ್ತಿಪರವಾಗಿ ಮಾಡುವುದು ಮತ್ತು ಅವರೆಲ್ಲರ ಕಾರ್ಯ ನಿರ್ವಹಣೆಯ ಮೌಲ್ಯಮಾಪನ 4.ಆರ್‌ಬಿಐ ಅನ್ನು ಸರಕಾರದ ಹಸ್ತಕ್ಷೇಪವಿಲ್ಲದ ವೃತ್ತಿಪರ ಸಂಸ್ಥೆಯನ್ನಾಗಿ ಮಾಡುವುದು

  5.ದೇಶದ ಆರ್ಥಿಕ ಪ್ರಗತಿಗೆ ಪೂರಕವಾಗುವಂತೆ ಬ್ಯಾಂಕುಗಳ ಸಾಲ ನೀತಿಗಳನ್ನು ಪುನರಚಿಸುವುದು

ಈಗಿನ ಸರಕಾರ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿಂತೆ ಈ ತನಕ ಕೈಕೊಂಡ ನಿರ್ಧಾರಗಳು ಆಶಾದಾಯಕವಾಗಿಲ್ಲ ಎಂಬುದು ದೇಶದ ದುರದೃಷ್ಟ. ಆದರೆ ಕಾಲ ಮಿಂಚಿಲ್ಲ, ಇಚ್ಛಾಶಕ್ತಿಯಿಂದ ದೂರದೃಷ್ಟಿ ಮತ್ತು ವಿವೇಚನಾಯುತ ನೀತಿಗಳನ್ನು ರೂಪಿಸಲು ಸಾಧ್ಯವಿದೆ.

Writer - ಟಿ.ಆರ್. ಭಟ್

contributor

Editor - ಟಿ.ಆರ್. ಭಟ್

contributor

Similar News