‘ಪಂಪ್‌ವೆಲ್ ಬಲೆ.... ಪಂಪ್‌ವೆಲ್ ಬಲೆ.....!’

Update: 2019-12-31 08:07 GMT
ಫೋಟೊ: ಸುಹೈಲ್ ಬಜಾಲ್

ಮಂಗಳೂರು, ಡಿ.30: ‘ಪಂಪ್‌ವೆಲ್ ಬಲೆ.... ಪಂಪ್‌ವೆಲ್ ಬಲೆ.....!’ ಇದು ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ತಿಂಗಳಿನಿಂದ ಹಾಡು, ಕಾಮಿಡಿ ಮೂಲಕ ಟ್ರೆಂಡ್ ಹಾಗೂ ಟ್ರೋಲ್ ಆಗುತ್ತಿರುವ ವಿಷಯ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲು ಅವರು ಡಿಸೆಂಬರ್ ಅಂತ್ಯಕ್ಕೆ ಪಂಪ್‌ವೆಲ್ ಕಾಮಗಾರಿ ಪೂರ್ಣಗೊಂಡು ಜನವರಿ ಪ್ರಥಮ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದಾಗ ಜನಸಾಮಾನ್ಯರಿಂದಲೇ ಇದು ತೀವ್ರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿತ್ತು. ಕಾರಣ ಕಳೆದ ಸುಮಾರು 10 ವರ್ಷಗಳಿಂದ ನಡೆಯುತ್ತಿರುವ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಮತ್ತೆ ಈ ವರ್ಷವೂ ಪೂರ್ಣಗೊಂಡಿಲ್ಲ. ಮಾತ್ರವಲ್ಲದೆ ಐತಿಹಾಸಿಕ ತಾಣವಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ.

ಆದರೆ ಈ ರೀತಿಯಲ್ಲಿ ಟ್ರೋಲ್ ಆದ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಸದ್ಯ ಜನವರಿ ಅಂತ್ಯಕ್ಕೂ ಪೂರ್ಣಗೊಳ್ಳುವ ಲಕ್ಷಣವಿಲ್ಲ. ಸದ್ಯ ಇಲ್ಲಿ ಕಾಮಗಾರಿಯೇನೋ ಬಿರುಸಿನಿಂದ ಸಾಗಿದೆ. ಆದರೆ ಪೂರ್ಣಗೊಳ್ಳಲು ಇನ್ನೂ ಕೆಲ ಸಮಯ ಬೇಕಿದೆ.

ಕಳೆದ ಕೆಲವು ಸಮಯದಿಂದ ಫ್ಲೈಓವರ್ ಕಾಮಗಾರಿ ವೇಗ ಪಡೆದಿದ್ದರೂ, ಅಂತಿಮ ಹಂತದ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ. ಪಂಪ್‌ವೆಲ್‌ನಿಂದ ನಂತೂರು ಕಡೆಗೆ ಸಾಗೂಉವ ಭಾಗದಲ್ಲಿ ಮೇಲ್ಸೇತುವೆಯ ಗರ್ಡರ್ ಸಂಪರ್ಕ ನಡುವಿನ ಸಂಪರ್ಕ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಪಂಪ್‌ವೆಲ್‌ನಿಂದ ಉಳ್ಳಾಲ ಕಡೆಗೆ ಸಾಗುವ ಇಂಡಿಯಾನ ಆಸ್ಪತ್ರೆಯ ಎದುರು ಭಾಗದಲ್ಲಿನ ಗರ್ಡರ್ ಕಾಮಗಾರಿ ಬಹುತೇಕ ನಡೆದಿದೆ. ಆದರೆ ಆಸ್ಪತ್ರೆಯ ಎಡಭಾಗದಿಂದ ಉಜ್ಜೋಡಿ ಕಡೆಗೆ ಸಂಪರ್ಕ ರಸ್ತೆ ಕಾಮಗಾರಿ ಸದ್ಯ ನಡೆಯುತ್ತಿದೆ. ಉಜ್ಜೋಡಿಯಲ್ಲಿ ಅಂಡರ್‌ಪಾಸ್ ಕಾಮಗಾರಿ ನಡೆದಿದ್ದು, ಮೇಲ್ಭಾಗದಲ್ಲಿ ರಸ್ತೆ ಕಾಮಗಾರಿ ಆಗಬೇಕಾಗಿದೆ. ಈ ಭಾಗದಲ್ಲಿ ಎರಡೂ ಬದಿಯಲ್ಲಿ ತಡೆಗೋಡೆ ಅಳವಡಿಕೆಯಾಗಬೇಕಿದೆ. ಸಾಕಷ್ಟು ಕಡೆ ಮಣ್ಣು ಹಾಕಿ ಸಮತಟ್ಟುಗೊಳಿಸುವ ಕಾಮಗಾರಿ, ತಡೆಗೋಡೆ ನಿರ್ಮಾಣ ಸದ್ಯ ಬಿರುಸಿನಿಂದ ಸಾಗಿದೆ.

ಕಳೆದ ಹಲವು ವರ್ಷಗಳಿಂದ ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆಗೆ ಗಡುವಿನ ಮೇಲೆ ಗಡುವು ನೀಡುತ್ತಲೇ ಬರಲಾಗುತ್ತಿದೆ. ಇದೀಗ ಸಂಸದರಿಂದಲೇ ನೀಡಲಾದ ಮತ್ತೊಂದು ಗಡುವು ಕೂಡಾ ಪೂರ್ಣಗೊಳ್ಳುತ್ತಿಲ್ಲ ಎಂಬುದು ಮಾತ್ರ ಬೇಸರದ ಸಂಗತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News