ಮಂಗಳೂರು: ಬಿಜೆಪಿಯ ಜನಜಾಗೃತಿ ಸಮಾವೇಶ ಮುಂದೂಡಲು ಕಾಂಗ್ರೆಸ್ ಒತ್ತಾಯ
ಮಂಗಳೂರು, ಡಿ.31: ಬಿಜಪಿ ರಾಜಕೀಯ ಮತ್ತು ಆಡಳಿತ ಪಕ್ಷವಾಗಿ ಜ.12ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಸಮಾವೇಶ ಮುಂದೂಡಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜ.4ರಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಜ.12ರಂದು ಬಿಜೆಪಿ ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮಗಳಿಂದ ಶಾಂತಿ, ಸುವ್ಯವಸ್ಥೆಗೆ ಮತ್ತಷ್ಟು ಸವಾಲಾಗುವುದು ಬೇಡ ಎನ್ನುವ ಉದ್ದೇಶದಿಂದ ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ನಡೆಸಲು ಉದ್ದೇಶಿಸಿದ್ದ ‘ಭಾರತ್ ಬಚಾವೊ’ ಹಾಗೂ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಜಿಲ್ಲೆಯ ಹಿತದೃಷ್ಟಿಯಿಂದ ಗೊಂದಲದ ವಾತಾವರಣ ಉಂಟಾಗಬಾರದು ಎನ್ನುವ ಉದ್ದೇಶದಿಂದ ನಾವು ಕಾರ್ಯಕ್ರಮ ಮುಂದೂಡಿದ್ದೇವೆ. ಅವರು ಕೂಡಾ ಮುಂದೂಡುವುದು ಅವಶ್ಯವಾಗಿದೆ ಎಂದರು.
ನ್ಯಾಯಾಂಗ ತನಿಖೆಗೆ ಆಗ್ರಹ: ಮಂಗಳೂರು ಗೋಲಿಬಾರ್‌ಗೆ ಸಂಬಂಧಿಸಿ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯಾಗಬೇಕು. ಇಂತಹ ಘಟನೆ ನಡೆದಾಗ ಪರಿಹಾರ ನೀಡಲು ಸರಕಾರ ನೀತಿಯೊಂದನ್ನು ರೂಪಿಸಬೇಕು. ದ್ವಂದ್ವ ಹೇಳಿಕೆ ಇರಬಾರದು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಪೊಲೀಸ್ ಭದ್ರತೆ ತೆಗೆಯಲು ಮನವಿ: ನಗರದ ಅಲ್ಲಲ್ಲಿ ನಿಯೋಜಿಸಿರುವ ಪೊಲೀಸ್ ಭದ್ರತೆಯನ್ನು ತೆಗೆಯಬೇಕು. ಜನಸಾಮಾನ್ಯರು ನಡೆದಾಡಲು ಭಯ ಪಡುವ ಸ್ಥಿತಿ ಇದೆ. ಓಡಾಡುವಾಗ ಪೊಲೀಸರ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಖಾದರ್ ಹೇಳಿದರು.
ಜ.2ರ ಪ್ರತಿಭಟನೆಗೆ ಬೆಂಬಲ: ಜ.2ರಂದು ಸಮಾನ ಮನಸ್ಕ ಸಂಘಟನೆಗಳು ನಗರದ ಪುರಭವನದಲ್ಲಿ ಆಯೋಜಿಸಿರುವ ಶಾಂತಿಯುತ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ತಾಪಂ ಅಧ್ಯಕ್ಷ ಮಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ಭರತ್ ಮುಂಡೋಡಿ, ಅಬ್ದುಲ್ಲತೀಫ್, ನಝೀರ್ ಬಜಾಲ್, ಸಿ.ಎಂ.ಮುಸ್ತಫಾ, ನೀರಜ್‌ಪಾಲ್ ಉಪಸ್ಥಿತರಿದ್ದರು.