×
Ad

ಜ.4: ಸರಕಾರದ ನಿರ್ಲಕ್ಷ ಧೋರಣೆ ವಿರೋಧಿಸಿ ರೈತರಿಂದ ಪ್ರತಿಭಟನೆ

Update: 2019-12-31 19:55 IST

ಉಡುಪಿ, ಡಿ.31: ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಸಂಕಷ್ಟ ಹಾಗೂ ಸಮಸ್ಯೆಗಳ ಬಗ್ಗೆ ಸರಕಾರಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ ಮತ್ತು ವಿಳಂಬ ಧೋರಣೆ ವಿರುದ್ಧ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಸಭೆಯನ್ನು ಜ.4ರಂದು ಬೆಳಗ್ಗೆ 11ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದೆ.

ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಎಲ್ಲ ರೀತಿಯ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕಾಡು ಪ್ರಾಣಿ ಹಾವಳಿಯನ್ನು ತಡೆಯಲು ತಕ್ಷಣ ಸೂಕ್ತ ಕ್ರಮ ಜರಗಿಸಬೇಕು. ರೈತರ ಕುಮ್ಕಿ ಹಕ್ಕನ್ನು ರದ್ದುಗೊಳಿಸ ಬಾರದು. ಬೆಳೆ ಪರಿಹಾರ ನಿಯಮವನ್ನು ಸರಳೀಕರಣ ಮಾಡಬೇಕು ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಸುದ್ದಿ ಗೋಷ್ಠಿಯಲ್ಲಿಂದು ಒತ್ತಾಯಿಸಿದರು.

ಭತ್ತವನ್ನು ವರ್ಷಪೂರ್ತಿ 2500ರೂ. ಬೆಂಬಲ ಬೆಲೆಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು. ಸಹಾಯಧನ ರೂಪದಲ್ಲಿ ದೊರೆಯುವ ಕೃಷಿ ಯಂತ್ರೋ ಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರಗಳನ್ನು ತಕ್ಷಣ ನಿಲ್ಲಿಸಬೇಕು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲ ಕೃಷಿ ಕಾರ್ಯಗಳಿಗೆ ವಿಸ್ತರಿಸಬೇಕು. ಕೇಂದ್ರ ಸರಕಾರ ಕೃಷಿ ಉತ್ಪನ್ನಗಳ ಮುಕ್ತ ಆಮದು ನೀತಿ ಯೋಜನೆಯನ್ನು ಶಾಶ್ವತವಾಗಿ ಕೈಬಿಡಬೇಕು. ಕೃಷಿ ಪಿಂಚಣಿ ಯೋಜನೆಯಲ್ಲಿ 60ವರ್ಷ ವಯಸ್ಸು ದಾಟಿದವರಿಗೂ ತಿಂಗಳ ಪಿಂಚಣಿ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಕಾರ್ಯದರ್ಶಿ ರವೀಂದ್ರ ಗುಜ್ಜರ ಬೆಟ್ಟು ಉಪಸ್ಥಿತರಿದ್ದರು.

'ಹಡಿಲು ಭೂಮಿಯಲ್ಲಿ ಡಿಸಿ ಕೃಷಿ ಮಾಡಲಿ'

ರೈತರಿಗೆ ಇರುವ ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಜಿಲ್ಲಾಧಿಕಾರಿಗಳು ಕೃಷಿ ಭೂಮಿ ಹಡಿಲು ಬಿಟ್ಟ ಕೃಷಿಕರಿಗೆ ನೋಟೀಸ್ ಜಾರಿ ಮಾಡಲು ಹೊರಟಿದೆ. ಆ ಭೂಮಿ ಯನ್ನು ವಶಪಡಿಸಿಕೊಂಡ ಜಿಲ್ಲಾಡಳಿತ ಒಂದು ವರ್ಷ ಅದರಲ್ಲಿ ಕೃಷಿ ಮಾಡಿ ತೊರಿಸಲಿ. ಆಗ ಅವರಿಗೆ ಕೃಷಿ ಸಮಸ್ಯೆಗಳು ಅರ್ಥವಾಗುತ್ತದೆ. ಈಗ ರೈತರಿಗೆ ನಿರೀಕ್ಷಿತ ಇಳುವರಿ ಸಿಗುತ್ತಿಲ್ಲ. ಹಾಗಾಗಿ ಕೃಷಿ ಭೂಮಿಯನ್ನು ಹಡಿಲು ಬಿಟ್ಟಿ ದ್ದಾರೆ. ಈ ಎಲ್ಲ ಸಮಸ್ಯೆಗಳು ಇತ್ಯರ್ಥವಾದಲ್ಲಿ ಯಾರು ಕೂಡ ಕೃಷಿಭೂಮಿ ಯನ್ನು ಹಡಿಲು ಬಿಡುವ ಪ್ರಮೇಯವೇ ಉದ್ಭವವಾಗುವುದಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News