ಸರ್ವಧರ್ಮ ಸೌಹಾರ್ದ ಸಮಿತಿಯಿಂದ ಪೇಜಾವರ ಶ್ರೀಗೆ ನುಡಿನಮನ
ಉಡುಪಿ, ಡಿ.31: ಉಡುಪಿ ಸರ್ವಧರ್ಮ ಸೌಹಾರ್ದ ಸಮಿತಿ ಹಾಗೂ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಕೀರ್ತಿಶೇಷ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಗೆ ನುಡಿ ನಮನ ಕಾರ್ಯಕ್ರಮವನ್ನು ಮಂಗಳವಾರ ಉಡುಪಿ ಶೋಕಮಾತ ಚರ್ಚಿನ ಪ್ರಾಂಗಣದಲ್ಲಿ ಆಯೋಜಿಸಲಾಗಿತ್ತು.
ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಅರ್ಪಿಸಿ ಮಾತನಾಡಿದ ಚರ್ಚಿನ ಪ್ರಧಾನ ಧರ್ಮಗುರು ವಂ.ಫಾ.ವಲೇರಿಯನ್ ಮೆಂಡೋನ್ಸ, ಸಮಾಜದ ಹಿತಕ್ಕಾಗಿ ಏಳಿಗಾಗಿ ಪೇಜಾವರ ಶ್ರೀಗಳ ಪವಿತ್ರ ವ್ಯಕ್ತಿತ್ವ ಮಾರ್ದರ್ಶನವಾಗಿದೆ ಎಂದು ಹೇಳಿದರು.
ಉಡುಪಿ ಸಂಸ್ಕ್ರತ ಕಾಲೇಜಿನ ವೇದಾಂತ ವಿಭಾಗದ ಪ್ರಾಧ್ಯಾಪಕ ಡಾ. ಷಣ್ಮುಖ ಹೆಬ್ಬಾರ್ ಮಾತನಾಡಿ, ಪೇಜಾವರ ಶ್ರೀಗಳ ಸಾಮಾಜಿಕ ಹೋರಾಟ, ಬೋಧನೆಗಳು, ಅವರು ನಡೆದು ಬಂದ ಹಾದಿ, ಅವರ ಗುಣಗಳು ಸಮಾಜದ ಏಳಿಗೆಗೆ ಮಾರ್ಗದರ್ಶಕ ಸೂತ್ರಗಳಾಗಿವೆ. ಜಾತಿ, ಧರ್ಮ ಬೇಧ ಭಾವ ತೋರದೆ, ಎಲ್ಲಾ ಧರ್ಮದ ಬಂಧುಗಳೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದರು ಎಂದು ತಿಳಿಸಿದರು.
ಸಹಾಯಕ ಧರ್ಮಗುರು ವಂ.ಸ್ಟೀವನ್ ಫೆರ್ನಾಂಡಿಸ್, ಆಯೋಗಗಳ ಸಂಯೋಜಕ ಅಲ್ಫೋನ್ಸ್ ಡಿಕೋಸ್ತಾ, ಪಾಲನ ಮಂಡಳಿಯ ಉಪಾಧ್ಯಕ್ಷ ಇರ್ವಿನ್ ಆಳ್ವ, ಕಾರ್ಯದರ್ಶಿ ಗ್ರೆಸಿಯಸ್ ಬೊತೆಲ್ಲೊ, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಶಿರೂರು, ಮಲಬಾರ್ ಗೋಲ್ಡ್ ವ್ಯವಸ್ಥಾಪಕ ರಾಘವೇಂದ್ರ ನಾಯಕ್, ಉಪನ್ಯಾಸಕಿ ಸುಧಾಮ, ಸೌಹಾರ್ದ ಸಮಿತಿಯ ಮೊಹಮ್ಮದ್ ಮೌಲ, ವಿ.ಎಸ್ ಉಮರ್, ಎಚ್.ಕೆ. ಅಹಮದ್, ಜಾಲ್ಸನ್ ಅಂಬ್ಲರ್, ಪೀಟರ್ ಮೆಂಡೊನ್ಸ ಉಪಸ್ಥಿತರಿದ್ದರು. ಸೌಹಾರ್ದ ಸಮಿತಿಯ ಸಂಚಾಲಕ ಮೈಕಲ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.