×
Ad

ಮಂಗಳೂರು ಪೊಲೀಸರನ್ನು ಪ್ರಶಂಸಿಸಿದ ಸಿಬಿಐ

Update: 2019-12-31 20:17 IST

ಮಂಗಳೂರು, ಡಿ. 31: ಸಿಬಿಐ ಸೇರಿದಂತೆ ಹಲವು ರಾಜ್ಯಗಳಿಗೆ ಬೇಕಾಗಿದ್ದ ವಂಚನೆ ಪ್ರಕರಣ ಆರೋಪಿ ಸ್ಯಾಮ್ ಪೀಟರ್‌ನನ್ನು ಬಂಧಿಸಿದ್ದ ಮಂಗಳೂರು ಪೊಲೀಸರನ್ನು ಸಿಬಿಐ ಪ್ರಶಂಸೆ ವ್ಯಕ್ತಪಡಿಸಿದೆ.

ಆ. 16ರ ತಡರಾತ್ರಿ ಮಂಗಳೂರು ನಗರದ ಪಂಪ್‌ವೆಲ್ ಸಮೀಪದ ಲಾಡ್ಜ್‌ವೊಂದರಲ್ಲಿ ಕೇಂದ್ರ ಸರಕಾರದ ಅಪರಾಧ ತನಿಖಾ ಸಂಸ್ಥೆಯ ಹೆಸರಿನ ನಾಮಫಲಕ ಹಾಕಿ, ಟಿಂಟ್ ಹಾಕಿದ ಅನುಮಾನಾಸ್ಪದ ಕಾರು ಪತ್ತೆಯಾಗಿತ್ತು. ಜಾಗೃತಗೊಂಡ ಮಂಗಳೂರು ಪೂರ್ವ (ಕದ್ರಿ) ಠಾಣಾಧಿಕಾರಿಗಳು ಪಂಪ್‌ವೆಲ್ ಗೆ ತೆರಳಿ ಕೇರಳದ ಕೋಯಿಲಾಡ್ ಕಾವನಾಡ ನಿವಾಸಿ ಟಿ.ಸ್ಯಾಮ್ ಪೀಟರ್ (53) ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದರು. ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ ರಿವಾಲ್ವರ್, ಪಿಸ್ತೂಲ್ ಸಹಿತ ಕಾರುಗಳು ವಶಕ್ಕೆ ಪಡೆಯಲಾಗಿತ್ತು.

‘ಆರೋಪಿ ಸ್ಯಾಮ್ ಪೀಟರ್‌ ರಾಜೇಶ್ ರಾಬಿನ್‌ಸನ್, ರಾಹುಲ್ ಪೀಟರ್ ಸೇರಿದಂತೆ ವಿವಿಧ ಹೆಸರಿನಲ್ಲಿ ವಂಚಿಸುತ್ತಿದ್ದ. ಆರೋಪಿಯನ್ನು ಬಂಧಿಸಿ ಸಿಬಿಐಗೆ ಮಾಹಿತಿ ರವಾನಿಸಿದ್ದ ಮಂಗಳೂರು ಪೊಲೀಸರ ಕಾರ್ಯನಿರ್ವಹಣೆ ಶ್ಲಾಘನೀಯ. ಮಂಗಳೂರು ಪೊಲೀಸರ ಶ್ರದ್ಧೆ ಮತ್ತು ಉತ್ಸಾಹ ಎಲ್ಲರಿಗೂ ಮಾದರಿ. ಪೊಲೀಸರ ಇಂತಹ ಪ್ರಾಮಾಣಿಕ ಮತ್ತು ಉತ್ಕೃಷ್ಠ ಪ್ರಯತ್ನ ಭವಿಷ್ಯದಲ್ಲೂ ಮುಂದುವರಿಯಲಿ. ಸಿಬಿಐನ 12(5)/98 ಪ್ರಕರಣದಲ್ಲಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಮಂಗಳೂರು ಪೊಲೀಸರಿಗೆ ಸಿಬಿಐ ಬ್ರಾಂಚ್ ಆಭಾರಿಯಾಗಿರುತ್ತದೆ’ ಎಂದು ಪ್ರಶಂಸೆ ಪತ್ರದಲ್ಲಿ ಸಿಬಿಐ ಶಾಖೆಯ ಮುಖ್ಯಸ್ಥ ರಘುರಾಮ್ ರಾಜನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News