ಪಂಪ್ ವೆಲ್ ಫ್ಲೈಓವರ್ ಬಗೆಗಿನ ಟ್ರೋಲ್ ಗಳ ಕುರಿತು ಪ್ರತಿಕ್ರಿಯಿಸಿದ ಸಂಸದ ನಳಿನ್
ಮಂಗಳೂರು, ಡಿ. 31: ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ವಹಿಸಿರುವ ಕಂಪನಿ ಮತ್ತೆ ಒಂದು ತಿಂಗಳ ಸಮಯವನ್ನು ಕೇಳಿದ್ದು, ಅದರ ಸಂಪೂರ್ಣ ಮೇಲುಸ್ತುವಾರಿಯನ್ನು ದ.ಕ. ಜಿಲ್ಲಾಡಳಿತಕ್ಕೆ ವಹಿಸಲಾಗಿದ್ದು, ಅವರೇ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಅಧಿಕಾರಿಗಳ ಜತೆಗಿನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ತಲಪಾಡಿಯಿಂದ ಕುಂದಾಪುರದವರೆಗಿನ ಕಾಮಗಾರಿ ಕಳೆದ 12 ವರ್ಷಗಳಿಂದ ನಡೆಯುತ್ತಿದೆ. ಬಹಳಷ್ಟು ಕಾಮಗಾರಿ ನಡೆದಿದ್ದರೂ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಕಾಮಗಾರಿ ಕಳೆದ ಎರಡು ವರ್ಷಗಳಿಂದ ಕುಂಠಿತವಾಗಿತ್ತು. ಕೊನೆಗೂ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಕಂಪನಿ ಪೂರ್ಣಗೊಳಿಸಿತ್ತು. ಆ ಬಳಿಕ ಹಣಕಾಸಿನ ತೊಂದರೆಯ ಬಗ್ಗೆ ಕಳೆದ ವರ್ಷ ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ 56 ಕೋಟಿ ರೂ.ಗಳ ಸಾಲವನ್ನು ಸರಕಾರ ಜಾಮೀನು ನಿಂತು ಒದಗಿಸುವ ಕೆಲಸವನ್ನು ಮಾಡಲಾಯಿತು. ಆ ಸಂದರ್ಭ 2019ರ ಮೇ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಕಂಪನಿ ನೀಡಿತ್ತು. ಆದರೆ ಚುನಾವಣೆ ಹಾಗೂ ಮಳೆಯ ಹಿನ್ನೆಲೆಯಲ್ಲಿ ಕಾಮಗಾರಿ ಮತ್ತೆ ವಿಳಂಬವಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜನವರಿ ಪ್ರಥಮ ವಾರದಲ್ಲಿ ಲೋಕಾರ್ಪಣೆ ಮಾಡುವುದಾಗಿ ಹೇಳಿದ್ದೆ. ಆದರೆ ಕಳೆದ ಒಂದು ವಾರದಿಂದ ಹಲವು ಸಭೆ ನಡೆಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಮತ್ತೆ ಒಂದು ತಿಂಗಳ ಕಾಲಾವಕಾಶವನ್ನು ಕೋರಿರುವುದರಿಂದ ಅದರ ಮೇಲುಸ್ತುವಾರಿಯನ್ನು ಇನ್ನು ಮುಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಡಳಿತ ವಹಿಸಲಿದೆ. ಕಂಪನಿಯು ಸರಕಾರದ ಹೆಸರನ್ನು ಹಾಳುವ ಮಾಡುವ ಕೆಲಸ ಮಾಡಿದೆ ಎಂದು ಸಂಸದ ನಳಿನ್ ಕುವಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಪಂಪ್‌ವೆಲ್ ಮೇಲ್ಸೇತುವೆ ಕುರಿತಂತೆ ಟ್ರೋಲ್ ಆಗುತ್ತಿರುವ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ನಳಿನ್, ನಾನು ಸಂಸದ ಆಗುವ ಮೊದಲೇ ಈ ಕಾಮಗಾರಿಯ ಟೆಂಡರ್ ಆಗಿತ್ತು. ಸಂಸದನಾದ ಬಳಿಕ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಕಾಮಗಾರಿಯ ಪರಿಶೀಲನೆ ನಡೆಸಲಾಗಿದೆ. ಆರಂಭದಲ್ಲಿ ಕಂಪನಿಯ ಆರ್ಥಿಕ ಪರಿಸ್ಥಿತಿ ಉತ್ತಮ ವಾಗಿತ್ತು. ಬಳಿಕ ಹದಗೆಟ್ಟು ನಾನೇ ಮುಂದೆ ನಿಂತು ಸಾಲದ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಅಷ್ಟು ಮಾತ್ರವಲ್ಲ, ಮಣ್ಣಿನ ವ್ಯವಸ್ಥೆಯನ್ನು ಶಾಸಕರ ಸಹಕಾರದೊಂದಿಗೆ ಮಾಡಲಾಗಿದೆ. ಇದಕ್ಕಿಂತ ಹೆಚ್ಚು ಒಬ್ಬ ಸಂಸದನಾಗಿ ನಾನೇನು ಮಾಡಲು ಸಾಧ್ಯ. ಜನರ ಭಾವನೆಗಳು ಸಹಜ. ಅದನ್ನು ಸಮಾನ ಭಾವನೆಯಿಂದ ಸ್ವೀಕರಿಸಿದ್ದೇನೆ ಎಂದವರು ಹೇಳಿದರು.
ಕಾಂಗ್ರೆಸ್ ಸತ್ಯಶೋಧನೆಯ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಸತ್ಯಶೋಧನೆ ಮಾಡಿದರೆ ಅವರದ್ದೇ ಸತ್ಯಾಂಶ ಹೊರಬರಲಿದೆ. ಈ ವಿಷಯದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ನಾಳೆ ಉದ್ಘಾಟನೆ ಯಾರು ಬೇಕಾದರೂ ಮಾಡಲಿ ಎಂದು ಪ್ರತಿಕ್ರಿಯಿಸಿದರು.