ಚಿಂತಕರು ಜಾಗೃತರಾಗಬೇಕಾಗಿದೆ

Update: 2020-01-01 05:24 GMT

‘ಒಂದು ವೇಳೆ ಸತ್ಯಕ್ಕಾಗಿ ಆಗ್ರಹಿಸುವುದು ಚಿಂತಕನ ಹೊಣೆಗಾರಿಕೆಯಾಗಿದ್ದರೆ, ವಂಚನೆಯಿಂದ ಸತ್ಯವನ್ನು ಬೇರ್ಪಡಿಸುವುದಕ್ಕಾಗಿ ಐತಿಹಾಸಿಕ ಗ್ರಹಿಕೆಯೊಂದಿಗೆ ಘಟನೆಗಳನ್ನು ಅವಲೋಕಿಸುವುದು ಕೂಡಾ ಆತನ ಕರ್ತವ್ಯವಾಗಿದೆ. ನೈತಿಕ ಶ್ರೇಷ್ಠತೆ, ಪರಿಣತಿ, ಆಧುನಿಕತೆಗೆ ಹೊಂದಿಕೊಳ್ಳುವಂತಹ ರೀತಿಯಲ್ಲಿ ಅಧಿಕಾರರೂಢರು ಪ್ರತಿಪಾದಿಸುವ ಸಿದ್ಧಾಂತಗಳು ದಬ್ಬಾಳಿಕೆಯನ್ನು ಹೇಗೆ ಸಮರ್ಥಿಸುತ್ತವೆ ಎಂಬುದನ್ನು ಬುದ್ಧಿಜೀವಿಗಳು ವಿಶ್ಲೇಷಿಸಬಹುದಾಗಿದೆ. ಸಾಧ್ಯವಿರುವಂತಹ ಎಲ್ಲಾ ಮಾರ್ಗಗಳ ಮೂಲಕ ಅವರು ಸತ್ಯವನ್ನು ಸಾರ್ವಜನಿಕ ವೇದಿಕೆಗೆ ತರಬೇಕಾಗಿದೆ.

ಐಎಎಸ್ ಅಧಿಕಾರಿ ಆಗಿದ್ದ ಸೆಂಥಿಲ್ ಪ್ರಭುತ್ವದ ಕ್ರೌರ್ಯವನ್ನು ವಿರೋಧಿಸಿ, ಅಂಬೇಡ್ಕರ್ ಭಾರತವನ್ನು ಬೆಂಬಲಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದವರು. ಸಿಎಎ ವಿರುದ್ಧದ ಇಡೀ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಇವರು, ರಾಜ್ಯಾದ್ಯಂತ ಈ ಕುರಿತಂತೆ ಜನ ಜಾಗೃತಿಯನ್ನು ಉಂಟು ಮಾಡುತ್ತಿದ್ದಾರೆ.

   ಎಸ್. ಸಸಿಕಾಂತ್ ಸೆಂಥಿಲ್

1967ನೇ ಇಸವಿಯದು. ಅಮೆರಿಕವು ವಿಯೆಟ್ನಾಂ ಯುದ್ಧದ ಪರಾಕಾಷ್ಠೆಯನ್ನು ಎದುರಿಸುತ್ತಿತ್ತು. ಈ ಸಮರವು ದೇಶದ ಒಳಿತಿಗೆ ಅತ್ಯಂತ ಅಗತ್ಯವೆಂದು ಅಮೆರಿಕ ಸರಕಾರವು ಘೋಷಿಸಿತ್ತು. ಆಗ್ನೇಯ ಏಶ್ಯದ ದೇಶಗಳಲ್ಲಿ ಹರಡುತ್ತಿರುವ ಕಮ್ಯುನಿಸ್ಟ್ ಚಳವಳಿಗಳಿಗೆ ಕಡಿವಾಣ ಹಾಕಲು ಹಾಗೂ ವೈಯಕ್ತಿಕ ಹಕ್ಕುಗಳ ಮತ್ತು ಪ್ರಜಾಪ್ರಭುತ್ವದ ಅವನತಿಯಿಂದ ದೇಶವನ್ನು ರಕ್ಷಿಸಲು ಈ ಸಮರವು ಅತ್ಯಗತ್ಯವೆಂದು ಅಮೆರಿಕ ಪ್ರತಿಪಾದಿಸಿತ್ತು.ವಿಯೆಟ್ನಾಮ್‌ನಲ್ಲಿ ತಾನು ನಡೆಸುವ ಯುದ್ಧವನ್ನು ಪ್ರತಿಯೋರ್ವ ರಾಷ್ಟ್ರೀಯವಾದಿ ಅಮೆರಿಕನ್ನರು ಬೆಂಬಲಿಸಬೇಕೆಂದು ಅದು ಕರೆ ನೀಡಿತು.ಅಮೆರಿಕದ ಯೋಧರು ದೇಶ ಹಾಗೂ ಜಗತ್ತಿಗಾಗಿ, ಧೀರೋದಾತ್ತವಾಗಿ ಹೋರಾಡುತ್ತಿದ್ದಾರೆಂಬ ತಮ್ಮ ಸರಕಾರದ ನಿರಂತರವಾದ ಪ್ರಚಾರದ ಮಹಾಪೂರಕ್ಕೆ ಅಮೆರಿಕದ ಜನತೆ ಒಡ್ಡಲ್ಪಟ್ಟಿದ್ದರು.

 ಆದರೆ ಈ ಯುದ್ಧ ನಡೆಯುತ್ತಿರುವುದು ಅಮೆರಿಕನ್ ಜನತೆಗಾಗಿ ಅಲ್ಲ ಹಾಗೂ ಯುದ್ಧದಲ್ಲಿ ಅಮೆರಿಕವು ಸಮರ್ಪಣಾಭಾವದ ವಿಯೆಟ್ನಾಮೀಯರ ಎದುರು ಸೋಲುತ್ತಿದೆಯೆಂಬ ಕಟುಸತ್ಯವನ್ನು ಹೇಳಲು ಅಮೆರಿಕ ಸರಕಾರವು ನಿರಾಕರಿಸಿತ್ತು. ಯುದ್ಧದಲ್ಲಿ ಗೆಲುವಿನ ಹುಡುಕಾಟದಲ್ಲಿ, ತಾನು ವಿಯೆಟ್ನಾಮೀಯರ ವಿವರಿಸಲೂ ಸಾಧ್ಯವಾಗದಂತಹ ದೌರ್ಜನ್ಯಗಳನ್ನು ಎಸಗಿರುವುದನ್ನು ಬಹಿರಂಗಪಡಿಸಲು ಅದು ನಿರಾಕರಿಸಿತ್ತು.

 ಈ ಶತಮಾನದ ಪ್ರಮುಖ ಚಿಂತಕರಲ್ಲೊಬ್ಬರಾದ ನೋಮ್ ಚೋಮ್ಸ್‌ಕಿ ಈ ಲೇಖನದಲ್ಲಿರುವ ವಿಷಯ ವನ್ನೇ ಹೋಲುವಂತಹ ಪ್ರಬಂಧವೊಂದನ್ನು ಬರೆದಿದ್ದರು. ದೇಶದ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಾವು ಕೂಡಾ ಚೋಮ್ಸ್‌ಕಿ ಅವರ ಲೇಖನದಲ್ಲಿ ಕೇಳಲಾದಂತಹ ಪ್ರಶ್ನೆಗಳನ್ನು ಕೇಳುವುದು ಹಾಗೂ ಅದರ ಉತ್ತರವನ್ನು ಅರಸಲು ಇದು ಸಕಾಲವಾಗಿದೆ.

ನೋಮ್ ಚೋಮ್ಸ್‌ಕಿ ಅವರು 1967ರ ಫೆಬ್ರವರಿ 23ರಂದು ಬರೆದಿರುವ ‘‘ಬುದ್ಧಿಜೀವಿಗಳ ಹೊಣೆಗಾರಿಕೆ’ ಎಂಬ ಪ್ರಬಂಧವನ್ನು ತಮ್ಮ ಚುನಾಯಿತ ಸರಕಾರಗಳು ಎಸಗಿದ ದೌರ್ಜನ್ಯಗಳಿಗೆ ಜರ್ಮನಿ ಹಾಗೂ ಜಪಾನ್‌ನ ಜನತೆ ಎಷ್ಟರ ಮಟ್ಟಿಗೆ ಹೊಣೆಗಾರರಾಗಿದ್ದಾರೆ ಎಂದು ಇನ್ನೋರ್ವ ಸಾಹಿತಿ ಡ್ವಿಟ್ ಮ್ಯಾಕ್‌ಡೊನಾಲ್ಡ್ ಎಂಬಾತ ಕೇಳಿದ್ದ ಪ್ರಶ್ನೆಯೊಂದಿಗೆ ಆರಂಭಿಸಿದ್ದಾರೆ. ಸಮಾಜದಲ್ಲಿ ಚಿಂತಕರ ಜವಾಬ್ದಾರಿಗಳು ಉಳಿದ ಜನರ ಹೊಣೆಗಾರಿಕೆಗಿಂತ ಮಿಗಿಲಾದುದು ಎಂದು ಚೋಮ್ಸ್ ಕಿ ತನ್ನ ಪ್ರಬಂಧದಲ್ಲಿ ಹೇಳಿದ್ದಾರೆ. ಸಮಾಜದಲ್ಲಿ ತಪ್ಪು ಮಾಹಿತಿ ಹಾಗೂ ಅಪಪ್ರಚಾರವನ್ನು ತೊಡೆದು ಹಾಕಲು ಮಾರ್ಗದರ್ಶನ ನೀಡುವ ‘ದೀಪಧಾರಿ’ಗಳಾಗಿ ಚಿಂತಕರನ್ನು ಅವರು ಕಂಡಿದ್ದಾರೆ. ಉದಾರವಾದಿ ಪ್ರಜಾಪ್ರಭುತ್ವವಾದಿ ದೇಶಗಳಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಾವು ಶಕ್ತರಾಗಿದ್ದೇವೆ. ವಿದ್ಯಮಾನಗಳನ್ನು ಅಧ್ಯಯನ ಮಾಡಲು ಹಾಗೂ ಕೂಲಂಕಶವಾಗಿ ಪರಾಮರ್ಶಿಸಲು ನಮಗೆ ಇಲ್ಲಿ ಅವಕಾಶಗಳಿವೆ. ನಮ್ಮ ಮುಂದೆ ಪ್ರಸ್ತುತ ಪಡಿಸಿರುವ ಪ್ರಸಕ್ತ ಇತಿಹಾಸದ ಘಟನೆಗಳ ತಿರುಚುವಿಕೆ ಹಾಗೂ ತಪ್ಪು ನಿರೂಪಣೆಗಳು, ಸಿದ್ಧಾಂತಗಳು ಹಾಗೂ ವರ್ಗೀಯ ಹಿತಾಸಕ್ತಿಗಳ ಪರದೆಯ ಹಿಂದೆ ಮರೆಯಾಗಿರುವ ಸತ್ಯವನ್ನು ಅರಸುವಲ್ಲಿ ಚಿಂತಕರು ನುರಿತವರಾಗಿದ್ದಾರೆ. ಕನಿಷ್ಠ ಪಕ್ಷ ಪ್ರಸಕ್ತ ಬಿಕ್ಕಟ್ಟಿನ ಸಂದರ್ಭದಲ್ಲಿಯಾದರೂ, ನಮ್ಮ ಚಿಂತಕರು ಏನು ಮಾಡಬೇಕಾಗಿದೆಯೋ ಅದನ್ನು ಮಾಡುತ್ತಿದ್ದಾರೆಯೇ ಎಂಬುದೇ ಈಗ ನಮ್ಮ ಮುಂದೆ ಇರುವ ಪ್ರಶ್ನೆಯಾಗಿದೆ.

 (populist) ಜಗತ್ತಿನಾದ್ಯಂತ ‘ಜನಮರುಳು’ವಾದಿ ಸರಕಾರಗಳ ಉನ್ನತಿ, ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಹಿಂದೂ ರಾಷ್ಟ್ರೀಯವಾದದ ಬೆಳವಣಿಗೆಯು ನಮ್ಮ ದೇಶದ ಅಸ್ಮಿತೆಗೆ ಅತಿ ದೊಡ್ಡ ಬೆದರಿಕೆಯಾಗಿದೆ. ಜನತೆಯ ನಡುವೆ ಪದೇ ಪದೇ ದ್ವೇಷವನ್ನು ಪ್ರಚೋದಿಸುವ ಪಕ್ಷವೊಂದು ಕಳೆದ ಆರು ವರ್ಷಗಳಿಂದ ಅಧಿಕಾರದಲ್ಲಿದೆ. ರಾಜಕಾರಣದಲ್ಲಿ ಒಂದು ಪಕ್ಷವು ಇನ್ನೊಂದು ಪಕ್ಷಕ್ಕೆ ಪೈಪೋಟಿ ನೀಡಲು ಭರವಸೆಗಳನ್ನು ನೀಡುವುದು ಸಾಮಾನ್ಯವಾಗಿರುತ್ತದೆ ಮತ್ತು ಬಹುತೇಕ ವಾಗಿ ಅದು ಹುಸಿಯಾಗಿರುತ್ತದೆ ಹಾಗೂ ಅವು ಎಂದೂ ಈಡೇರುವುದಿಲ್ಲ. ಆದರೆ ಜನರನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟುವುದು ಪ್ರಸಕ್ತ ಆಡಳಿತದ ಆತಂಕಕಾರಿ ಅಂಶವಾಗಿದ್ದು, ಇದರಿಂದಾಗಿ ಅತ್ಯಂತ ಗಂಭೀರವಾದ ಪರಿಣಾಮ ಗಳುಂಟಾಗಲಿವೆ. ಭಾರತವು ಪೂರ್ವದಲ್ಲಿ ಆದಂತಹ ಕೆಲವೊಂದು ಕೊಳಕು ದ್ವೇಷದ ಗಾಯದ ಕಲೆಗಳನ್ನು ಹೊಂದಿದೆ ಹಾಗೂ ಒಂದು ರಾಷ್ಟ್ರವಾಗಿ ಅದು ಈ ಕೊಳಕು ಗಾಯಗಳನ್ನು ಗುಣಪಡಿಸಲು ಕಳೆದ 70 ವರ್ಷಗಳಿಂದ ಕಷ್ಟಪಟ್ಟು ಶ್ರಮಿಸಿತ್ತು. ಆದರೆ ಈ ಗಾಯದ ಕಲೆಗಳನ್ನು ವ್ಯವಸ್ಥಿತವಾಗಿ ಅಪಪ್ರಚಾರ ಹಾಗೂ ಸುಸಂಬದ್ಧವಾಗಿ ರೂಪಿಸಿದಂತಹ ಸೂಕ್ಷ್ಮವಾದ ಕಾರ್ಯತಂತ್ರಗಳ ಮೂಲಕ ಕೆರೆದು, ಅದನ್ನು ಹೊಸ ಗಾಯವನ್ನಾಗಿ ಮಾಡಲಾಗುತ್ತಿದೆ.

 ಉದಾಹರಣೆಗೆ ರಾಷ್ಟ್ರೀಯ ಪೌರರ ನೋಂದಣಿ ಹಾಗೂ ಪ್ರಸ್ತಾವಿತ ಪೌರತ್ವ ತಿದ್ದುಪಡಿ ವಿಧೇಯಕವನ್ನೇ ತೆಗೆದುಕೊಳ್ಳಿರಿ.ಅಸ್ಸಾಂ, ಪಶ್ಚಿಮಬಂಗಾಳ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಹೊರಗಿನವರ ಭಾರೀ ಪ್ರಮಾಣದ ವಲಸೆಯು ಖಂಡಿತವಾಗಿಯೂ ದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರ ನೋಂದಣಿಯನ್ನು ತಯಾರಿಸುವ ಪ್ರಕ್ರಿಯೆಯನ್ನು 1951ರಲ್ಲಿ ಕೈಗೊಳ್ಳಲಾಗಿತ್ತು. ತರುವಾಯ ಪೌರತ್ವ ಕಾಯ್ದೆ, ಪೌರತ್ವ (ಪೌರರ ನೋಂದಣಿ ಹಾಗೂ ರಾಷ್ಟ್ರೀಯ ಗುರುತುಚೀಟಿ ನೀಡಿಕೆ) ಕಾನೂನುಗಳನ್ನು 2003ರಲ್ಲಿ ಸೃಷ್ಟಿಸಲಾಯಿತು. ಭವಿಷ್ಯದಲ್ಲಿ ಇಂತಹದ್ದನ್ನು ಇಡೀ ದೇಶದಲ್ಲಿ ಜಾರಿಗೊಳಿಸುವುದೇ ಇದರ ಉದ್ದೇಶವಾಗಿತ್ತು. ಎರಡು ಕಾರಣಗಳಿಗಾಗಿ ಇಡೀ ದೇಶದಲ್ಲಿ ಇದನ್ನು ಬಹಳ ಸಮಯದವರೆಗೆ ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಮೊದಲನೆಯದಾಗಿ ಲಭ್ಯವಿದ್ದ ದತ್ತಾಂಶವು ಈ ಪ್ರಕ್ರಿಯೆಯ ಪರವಾಗಿರಲಿಲ್ಲ. ದೇಶದ 600 ಜಿಲ್ಲೆಗಳ ಪೈಕಿ 500ಕ್ಕೂ ಅಧಿಕ ಜಿಲ್ಲೆಗಳಲ್ಲಿ ವಲಸಿಗರ ಪ್ರಮಾಣವು ಶೇ.0.5ಕ್ಕಿಂತಲೂ ಹೆಚ್ಚಿರಲಿಲ್ಲವೆಂಬುದನ್ನು 2011ರ ಜನಗಣತಿಯು ತೋರಿಸಿಕೊಟ್ಟಿತ್ತು. ಎರಡನೆಯದಾಗಿ ಇಂತಹ ಬೃಹತ್ ಸಮೀಕ್ಷೆಗೆ ವಿಸ್ತೃತವಾದ ಮನೆಮನೆ ಸಮೀಕ್ಷೆಯ ಅಗತ್ಯವಿರುತ್ತದೆ ಹಾಗೂ ಬೊಕ್ಕಸಕ್ಕೆ ಭಾರೀ ಹೊರೆಯಾಗುತ್ತದೆ.ಇದಕ್ಕೆ ವೆಚ್ಚವಾಗಿರುವ ಹಣ ಹಾಗೂ ಪ್ರಯತ್ನಕ್ಕೆ ಸರಿಸಮವಾದ ಫಲಿತಾಂಶಗಳನ್ನು ಅದು ನೀಡಲಾರದು. ಇದಕ್ಕಿಂತಲೂ ಮಿಗಿಲಾಗಿ ಹಿಂದಿನ ದಾಖಲೆಗಳನ್ನು ಕಲೆಹಾಕಿ ತರುವುದು ಬಡವರಿಗೆ ಹಾಗೂ ದುರ್ಬಲರಿಗೆ ತ್ರಾಸದಾಯಕವಾಗಲಿದೆ. ಆದಾಗ್ಯೂ, ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸುವ ಮೂಲಕ ಹಳೆಯ ಎನ್‌ಆರ್‌ಸಿ ಯೋಜನೆಯನ್ನು ಅಪ್‌ಡೇಟ್ ಮಾಡಲಾಯಿತು.

 ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಇನ್ನಷ್ಟು ಬೆಳೆಸುವ ತನ್ನ ಉದ್ದೇಶಕ್ಕೆ ಕೇಂದ್ರ ಸರಕಾರವು ಸುಪ್ರೀಂಕೋರ್ಟ್ ನ ಈ ತೀರ್ಪನ್ನೇ ತನ್ನ ಅಸ್ತ್ರವನ್ನಾಗಿ ಬಳಸುವ ಅವಕಾಶವನ್ನು ಕಂಡುಕೊಂಡಿತು. ಈ ಪ್ರಕ್ರಿಯೆಯನ್ನು ಇಡೀ ದೇಶದಲ್ಲಿ ನಡೆಸಲಾಗುವುದೆಂದು ಕೇಂದ್ರ ಗೃಹಮಂತ್ರಿ ಘೋಷಿಸಿದರು. ಮತ್ತು ಅಸ್ಸಾಂ ಹಾಗೂ ದೇಶದ ಇತರ ಭಾಗಗಳಲ್ಲಿ ತನ್ನ ಪಕ್ಷದ ಹಿಂದೂ ಮತಬ್ಯಾಂಕನ್ನು ರಕ್ಷಿಸುವುದಕ್ಕಾಗಿ ಪೌರತ್ವ ತಿದ್ದುಪಡಿ ವಿಧೇಯಕವನ್ನು ಅವರು ಲೋಕಸಭೆಯಲ್ಲಿ ಮಂಡಿಸಿದರು. ಈ ವಿಧೇಯಕವು ಮುಸ್ಲಿಮರ ಹೊರತಾಗಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನಗಳ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡಲಿದೆ ( ಸರಕಾರವು ಅವರಿಗೆ ನಿರಾಶ್ರಿತರೆಂಬ ಪದವನ್ನು ಬಳಸಿದೆ). ಸರಕಾರದ ಈ ನಡೆಯಲ್ಲಿ ಘೋರವಾದ ಹಿಪಾಕ್ರಸಿಯಿರುವುದನ್ನು ಯಾರೂ ಕೂಡಾ ಕಾಣಬಹುದಾಗಿದೆ. ಅಸ್ಸಾಂನಲ್ಲಿ ನಡೆದ ಪೌರತ್ವ ನೋಂದಣಿಯ ಅಂತಿಮಪಟ್ಟಿಯಲ್ಲಿ ಹಿಂದೂ ವಲಸಿಗರ ಸಂಖ್ಯೆಯು, ತಾನು ಗುರಿಯಿರಿಸಿದ್ದ ಮುಸ್ಲಿಮರಿಗಿಂತಲೂ ಅಧಿಕವಾಗಿರುವುದು ಸರಕಾರವು ಅರಿತುಕೊಂಡಾಗ, ಗೃಹ ಸಚಿವರು ಅಸ್ಸಾಂನಲ್ಲಿ ಎನ್‌ಆರ್‌ಸಿಯನ್ನು ಮರಳಿ ಅಪ್‌ಡೇಟ್ ಮಾಡಲಾಗುವುದೆಂದು ಹೇಳಿದರು. ಅಸ್ಸಾಂನಲ್ಲಿ ಹಾಲಿ ಎನ್‌ಆರ್‌ಸಿ ಪಟ್ಟಿಯನ್ನು ಅತ್ಯಂತ ಕಟ್ಟುನಿಟ್ಟಿನ ಕಣ್ಗಾವಲಿನಡಿ ನಡೆಸಲಾಗಿತ್ತಾದರೂ ಸಂಸತ್‌ನಲ್ಲಿ ಈ ರೀತಿಯ ಅವಕಾಶವಾದಿತನದ ಘೋಷಣೆಯು ಸದನದ ಕಲಾಪಗಳಿಗೆ ಮಾಡಿದ ಘೋರ ಅಪಮಾನವಾಗಿದೆ. ಈ ಸರಕಾರದ ವ್ಯವಹಾರಗಳು ಸಂಪೂರ್ಣವಾಗಿ ವಂಚನೆ ಹಾಗೂ ಅಕ್ರಮವಾದ ನಡೆಗಳಿಂದ ಕೂಡಿದೆ.

ಈ ತಪ್ಪುಗಳನ್ನು ಬೆಟ್ಟು ಮಾಡಿ ತೋರಿಸಲು ಅತ್ಯುತ್ತಮರಾದಂತಹ ಚಿಂತಕರ ಹಾಗೂ ದೇಶದ ಜನತೆಗೆ ಇರುವ ಹೊಣೆಗಾರಿಕೆಯ ಬಗ್ಗೆ ಪ್ರಶ್ನೆಯು ಈಗ ಹುಟ್ಟಿಕೊಂಡಿದೆ. ಆದರೆ ಐತಿಹಾಸಿಕ ಪೂರ್ವನಿದರ್ಶನ ಹಾಗೂ ಶೈಕ್ಷಣಿಕ ಪರಿಣತಿಯಿಂದಾಗಿ ಅವರು ಪ್ರಸಕ್ತ ಸನ್ನಿವೇಶಗಳನ್ನು ಗ್ರಹಿಸಬಲ್ಲರು ಹಾಗೂ ಸನ್ನಿವೇಶಗಳನ್ನು ವಿಶ್ಲೇಷಿಸಬಲ್ಲರು. ಅವರಲ್ಲಿ ಕೆಲವರು ಈಗಾಗಲೇ ಹೋರಾಟಕ್ಕಿಳಿದಿದ್ದಾರೆ. ಚೋಮ್ಸ್‌ಕಿಯವರ ದೃಷ್ಟಿಯಲ್ಲಿ ಚಿಂತಕರೆಂದರೆ ಸಾರ್ವಜನಿಕರಿಗಾಗಿ ‘‘ರಾಜಕೀಯ ಹಾಗೂ ಅರ್ಥಿಕ ಮಾಹಿತಿಯನ್ನು ಸಂಗ್ರಹಿಸುವ, ಪ್ರಸಾರಮಾಡುವ ಹಾಗೂ ವ್ಯಾಖ್ಯಾನಿಸುವ ವ್ಯಕ್ತಿಗಳ ಒಂದು ವರ್ಗ’’ವಾಗಿದೆ. ವಿಶ್ವವಿದ್ಯಾನಿಲಯಗಳು ಹಾಗೂ ಇತರ ಉತ್ಕೃಷ್ಟ ಅಧ್ಯಯನ, ಸಂಶೋಧನಾ ಕೇಂದ್ರಗಳು ಕೂಡಾ ಈ ಚಿಂತಕವರ್ಗದಲ್ಲಿ ಒಳಗೊಳ್ಳುತ್ತವೆೆ

ದೇಶದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅವರು ಮೂಕ ಪ್ರೇಕ್ಷರಾಗಿಯೇ ಉಳಿಯಬೇಕೇ?. ದತ್ತಾಂಶಗಳನ್ನು ವಿಶ್ಲೇಷಿಸುವುದು ಹಾಗೂ ಸರಕಾರದ ಒಳ ಉದ್ದೇಶಗಳನ್ನು ಗುರುತಿಸುವುದು ಹಾಗೂ ಮಾತುಕತೆ ಹಾಗೂ ಚರ್ಚೆಗಳ ಮೂಲಕ ಅದನ್ನು ಬಯಲಿಗೆಳೆಯುವುದು ಅವರ ಹೊಣೆಗಾರಿಕೆಯಲ್ಲವೇ?. ಆದರೆ ಇಂದು ಹೀಗಾಗದೆ ಇರಲು ಎರಡು ಕಾರಣಗಳಿವೆ. ಜ್ಞಾನವಂತ ಸಮಾಜದ ಫಲಾನುಭವಿಯಾದ ಚಿಂತಕ ವರ್ಗವು ತಮ್ಮೆದುರೇ ಕಾಣಿಸುತ್ತಿರುವ ಪರಿಸ್ಥಿತಿಯ ತೀವ್ರತೆಯ ಬಗ್ಗೆ ಇನ್ನೂ ಜಾಗೃತಗೊಳ್ಳದೆ ಇರುವುದು ಒಂದನೆ ಕಾರಣವಾದರೆ, ಆಡಳಿತದಿಂದ ಪ್ರತಿಕ್ರಿಯೆಯನ್ನು ಎದುರಿಸ ಬೇಕಾದೀತೆಂಬ ಭೀತಿಯನ್ನು ಹೊಂದಿರುವುದು ಎರಡನೆ ಕಾರಣವಾಗಿದೆ.

ಮಾಧ್ಯಮಗಳ ಕಾರ್ಪೊರೇಟೀಕರಣದ ಪ್ರಸಕ್ತ ಸನ್ನಿವೇಶದಲ್ಲಿ ಸತ್ಯ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಬರಬೇಕಾಗಿರುವುದು ಈ ಮಹಾನ್ ದೇಶದ ಚಿಂತಕ ಸಮಾಜ ತಾನೇ?. ಮಾಧ್ಯಮ ಹಾಗೂ ಸರಕಾರದ ಇತರ ಪ್ರಚಾರ ಯಂತ್ರದ ಮೂಲಕ ತಪ್ಪುದಾರಿಗೆಳೆಯಲ್ಪಟ್ಟಂತಹ ಜನರನ್ನು ಎಚ್ಚರಿಸುವುದು ಚಿಂತಕ ವರ್ಗದ ಹೊಣೆಗಾರಿಕೆಯಲ್ಲವೇ?.

ಸಾಮಾಜಿಕ ಜಾಲತಾಣಗಳಂತಹ ಡಿಜಿಟಲ್ ವೇದಿಕೆಗಳ ಲಭ್ಯತೆಯಿಂದಾಗಿ ಪ್ರತಿಯೊಬ್ಬನ ಧ್ವನಿಯೂ ಈಗ ಕೇಳಲ್ಪಡಬಹುದಾಗಿದೆ. ಚಿಂತಕವರ್ಗವು ಎಚ್ಚೆತ್ತು ಪಕ್ಷಪಾತ ಹಾಗೂ ಪೂರ್ವಗ್ರಹವಿಲ್ಲದೆ ಸರಕಾರದ ಪ್ರತಿಯೊಂದು ಘೋಷಣೆಯಲ್ಲಿ ಸತ್ಯವನ್ನು ಹುಡುಕುವುದನ್ನು ಆರಂಭಿಸುವ ಸಮಯ ಇದಾಗಿದೆ. ಚೋಮ್ಸ್‌ಕಿ ಹೀಗೆ ಹೇಳುತ್ತಾರೆ. ‘‘ಒಂದು ವೇಳೆ ಸತ್ಯಕ್ಕಾಗಿ ಆಗ್ರಹಿಸುವುದು ಚಿಂತಕನ ಹೊಣೆಗಾರಿಕೆಯಾಗಿದ್ದರೆ, ವಂಚನೆಯಿಂದ ಸತ್ಯವನ್ನು ಬೇರ್ಪಡಿಸುವುದಕ್ಕಾಗಿ ಐತಿಹಾಸಿಕ ಗ್ರಹಿಕೆಯೊಂದಿಗೆ ಘಟನೆಗಳನ್ನು ಅವಲೋಕಿಸುವುದು ಕೂಡಾ ಆತನ ಕರ್ತವ್ಯವಾಗಿದೆ. ನೈತಿಕ ಶ್ರೇಷ್ಠತೆ, ಪರಿಣತಿ, ಆಧುನಿಕತೆಗೆ ಹೊಂದಿಕೊಳ್ಳುಂತಹ ರೀತಿಯಲ್ಲಿ ಅಧಿಕಾರರೂಢರು ಪ್ರತಿಪಾದಿಸುವ ಸಿದ್ಧಾಂತಗಳು ದಬ್ಬಾಳಿಕೆಯನ್ನು ಹೇಗೆ ಸಮರ್ಥಿಸುತ್ತವೆ ಎಂಬುದನ್ನು ಬುದ್ಧಿಜೀವಿಗಳು ವಿಶ್ಲೇಷಿಸಬಹುದಾಗಿದೆ. ಸಾಧ್ಯವಿರುವಂತಹ ಎಲ್ಲಾ ಮಾರ್ಗಗಳ ಮೂಲಕ ಅವರು ಸತ್ಯವನ್ನು ಸಾರ್ವಜನಿಕ ವೇದಿಕೆಗೆ ತರಬೇಕಾಗಿದೆ. ನಮ್ಮ ಸರಕಾರವು ಸ್ವಾತಂತ್ರ ಹಾಗೂ ಭ್ರಾತೃತ್ವದಂತಹ ಪ್ರಬಲವಾದ ವೌಲ್ಯಗಳನ್ನು ತರಲು ನೆರವಾಗಲಿದೆ. ಗೌರವಯುತವಾದ ವೈವಿಧ್ಯತೆಯ ತಳಹದಿಗಳ ಮೇಲೆ ಈ ದೇಶವು ನಿರ್ಮಾಣಗೊಂಡಿದೆ. ಈ ದೇಶವು ತಪ್ಪು ದಿಕ್ಕಿನಲ್ಲಿ ಸಾಗುತ್ತಿರುವ ಬಗ್ಗೆ ನಾವೆಲ್ಲರೂ ಮಾತನಾಡುವುದನ್ನು ಆರಂಭಿಸಲು ಇದು ಸಕಾಲವಾಗಿದೆ. ಒಂದು ವೇಳೆ ಹಾಗೆ ಮಾಡದೇ ಇದ್ದಲ್ಲಿ, ಜರ್ಮನಿಯ ನಾಝಿ ಆಳ್ವಿಕೆಯು ‘ಅಂತಿಮ ಪರಿಹಾರ’ವನ್ನು ನಡೆಸುತ್ತಿದ್ದಾಗ ಮೂಕಪ್ರೇಕ್ಷಕ ರಾಗಿದ್ದ ಜರ್ಮನಿಯ ನಾಗರಿಕರಂತೆ ನಮ್ಮನ್ನು ಕೂಡಾ ನಮ್ಮ ಅತ್ಮಸಾಕ್ಷಿಯು ಚುಚ್ಚಲಿದೆ’’.

Writer - ಎಸ್. ಸಸಿಕಾಂತ್ ಸೆಂಥಿಲ್

contributor

Editor - ಎಸ್. ಸಸಿಕಾಂತ್ ಸೆಂಥಿಲ್

contributor

Similar News