ಬ್ಯಾರಿ ಭಾಷಿಗರ ಹಬ್ಬ : ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ನಮೂದಿಸಲು ಒತ್ತಾಯ
ಮಂಗಳೂರು, ಡಿ.31:ಬ್ಯಾರಿ ಭಾಷಿಗರ ಹಬ್ಬಗಳನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಪರಿಷ್ಕರಿಸಿ ನಮೂದಿಸಲು ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಆಗ್ರಹಿಸಿದ್ದಾರೆ.
ರಾಷ್ಟ್ರಪತಿ, ಪ್ರಧಾನಿ, ಸಚಿವರು, ಮುಖ್ಯಮಂತ್ರಿ ಮತ್ತು ದ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ರಹೀಂ ಉಚ್ಚಿಲ್, ಬ್ಯಾರಿ ಜನಾಂಗವು ಕರಾವಳಿ ಕರ್ನಾಟಕದ ಪ್ರಮುಖ ಜನಾಂಗವಾಗಿದೆ. ದ.ಕ.ದಲ್ಲಿ 12 ಲಕ್ಷ, ಉಡುಪಿ ಜಿಲ್ಲೆಯಲ್ಲಿ 8 ಲಕ್ಷ, ಚಿಕ್ಕಮಗಳೂರು ಜಿಲ್ಲೆಯಲ್ಲಿ 4 ಲಕ್ಷ, ಮಡಿಕೇರಿಯಲ್ಲಿ 1.5 ಲಕ್ಷ, ಶಿವಮೊಗ್ಗ ಜಿಲ್ಲೆಯಲ್ಲಿ 1.5 ಲಕ್ಷ, ಉತ್ತರ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ ಬ್ಯಾರಿ ಭಾಷೆ ಮಾತನಾಡುವ ಜನರು ಬಹುದೊಡ್ಡ ಸಂಖ್ಯೆಯಲ್ಲಿ ಬ್ಯಾರಿಗಳಿದ್ದಾರೆ. ಮೊಹರಂ, ಈದ್-ಮಿಲಾದ್, ಬಕ್ರೀದ್, ಈದ್-ಉಲ್-ಫಿತರ್‌ನಂತಹ ಸಾಂಪ್ರದಾಯಿಕ ಹಬ್ಬಗಳನ್ನು ಸುಮಾರು ಶೇ.90ರಷ್ಟು ಬ್ಯಾರಿ ಭಾಷೆ ಮಾತನಾಡುವವರು ಆಚರಿಸು ತ್ತಿದ್ದು, ಈ ಹಬ್ಬಗಳಿಗೆ ಸರಕಾರಿ ರಜೆ ಕೂಡ ಘೋಷಣೆಯಾಗಿರುತ್ತದೆ. ಅಂತಹ ಹಬ್ಬಗಳು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಯಲ್ಲಿ ಈ ಪಟ್ಟಿಯಲ್ಲಿ ಕಣ್ಮರೆಯಾಗಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.
ಹಾಗಾಗಿ ಸಂಬಂಧಪಟ್ಟ ಇಲಾಖೆಗೆ ಈ ಕುರಿತು ಮಾಹಿತಿ ನೀಡಿ ಬ್ಯಾರಿ ಭಾಷಿಗರು ಆಚರಣೆ ಮಾಡುವ ಈ ಹಬ್ಬಗಳನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಪರಿಷ್ಕರಿಸಿ ನಮೂದಿಸಲು ಬೇಕಾಗುವ ಎಲ್ಲಾ ಸೂಕ್ತ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.