ಮುದುಂಗಾರುಕಟ್ಟೆ: ‘ಸ್ವಚ್ಛ ಮನೆ ಸೋಲಾರ್ ಮನೆ’ ಸಂಕಲ್ಪ
ಮುಡಿಪು, ಡಿ.31: ಬಾಳೆಪುಣಿ ಗ್ರಾಪಂ ವ್ಯಾಪ್ತಿಯ ಮುದುಂಗಾರುಕಟ್ಟೆ ಉಮ್ಮಣಮೂಲೆಯಲ್ಲಿ ‘ಸ್ವಚ್ಛ ಮನೆ ಸೋಲಾರ್ ಮನೆ’ ಸಂವಾದ ಸಂಕಲ್ಪದೊಂದಿಗೆ ವಿಶ್ವ ಮಾನವತಾ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಜನ ಶಿಕ್ಷಣ ಟ್ರಸ್ಟ್, ಗ್ರಾಪಂ, ಸೆಲ್ಕೋ ಫೌಂಡೇಶನ್, ಎಸ್ಸೆಸ್ಸೆಫ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸೋಲಾರ್ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಪ್ಲಾಸ್ಟಿಕ್ ಮತ್ತಿತ್ತರ ಘನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಸುಡುವು ದರಿಂದ ಆಗುವ ನೆಲ ಜಲ ವಾಯು ಮಾಲಿನ್ಯವು ಪರಿಸರ ಹಾಗೂ ಜೀವ ಸಂಕುಲಕ್ಕೆ ಮಾರಕವಾಗಿದ್ದು, ಇದನ್ನು ತಡೆಯಲು ಮೂಲದಲ್ಲೇ ಪ್ಲಾಸ್ಟಿಕ್ ಕಸ ವಿಂಗಡಿಸಿ ಸಮರ್ಪಕವಾಗಿ ನಿರ್ವಹಿಸುವ ಸರಳ ವಿಧಾನದ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾಹಿತಿ ನೀಡಿದರು.
ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ಸುಸ್ಥಿರ ಇಂಧನ ಸೋಲಾರ್ ದೀಪಗಳನ್ನು ಪ್ರತಿ ಮನೆಗೆ ಅಳವಡಿಸಿ ಸುಸ್ಥಿರ ಮತ್ತು ನಿರಂತರ ಬೆಳಕಿನ ಬಗ್ಗೆ ಮಾಹಿತಿ ನೀಡಿದರು. ಮುದುಂಗಾರುಕಟ್ಟೆ ಎಸ್‌ಡಿಎಂಸಿ ಅಧ್ಯಕ್ಷ ಅಬ್ಬಾಸ್ ನಾರ್ಯ, ಯುವ ಸಂಘಟನೆಯ ಅಧ್ಯಕ್ಷ ಅಝೀಝ್, ಕಾರ್ಯದರ್ಶಿ ಅಸ್ಬಾಕ್, ಎಸ್ಸೆಸ್ಸೆಫ್ ಅಧ್ಯಕ್ಷ ಅಶ್ರಫ್, ಹಿರಿಯ ನಾಗರೀಕ ಅಬ್ಬಾಸ್ ಕುದ್ಕೋಳಿ ವಿದ್ಯಾರ್ಥಿ ಮುಂದಾಳು ಸಫ್ವಾನ್ ಸಂವಾದದಲ್ಲಿ ಭಾಗವಹಿಸಿದ್ದರು.