ಮುಂದಿನ 5 ವರ್ಷ 102 ಲಕ್ಷ ಕೋಟಿ ಮೊತ್ತದ ಮೂಲಸೌಕರ್ಯ ಯೋಜನೆ ಜಾರಿ: ನಿರ್ಮಲಾ ಸೀತಾರಾಮನ್

Update: 2019-12-31 16:38 GMT

ಹೊಸದಿಲ್ಲಿ, ಡಿ.31: ಮುಂದಿನ 5 ವರ್ಷದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ 102 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂಲಸೌಕರ್ಯ ಕ್ಷೇತ್ರದಲ್ಲಿ 100 ಲಕ್ಷ ಕೋಟಿ ರೂ. ತೊಡಗಿಸುವುದಾಗಿ ಹೇಳಿದ್ದರು. ಅದರಂತೆ ಕ್ರಿಯಾಸಮಿತಿಯು ಕೇವಲ ನಾಲ್ಕು ತಿಂಗಳೊಳಗೆ 70 ಸಂಸ್ಥೆಗಳೊಂದಿಗೆ ಸಮಾಲೋಚಿಸಿ 102 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 3 ಲಕ್ಷ ಕೋಟಿ ಮೊತ್ತದ ಯೋಜನೆ ಸೇರಿಸಲಾಗುವುದು ಎಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವೆ ಹೇಳಿದ್ದಾರೆ.

ಕಳೆದ 6 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವೆಚ್ಚ ಮಾಡಿರುವ 51 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳ ಹೆಚ್ಚುವರಿಯಾಗಿ 102 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಹೊಸ ಪೈಪ್‌ಲೈನ್ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ತಲಾ ಶೇ.39ರಷ್ಟು ಮತ್ತು ಉಳಿದ ಶೇ.22ರಷ್ಟು ಖಾಸಗಿ ಕ್ಷೇತ್ರಕ್ಕೆ ನೀಡಲಾಗುವುದು ಎಂದವರು ವಿವರಿಸಿದ್ದಾರೆ.

ವಿದ್ಯುತ್, ರೈಲ್ವೇ, ನಗರ ನೀರಾವರಿ, ಸಂಚಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಗುರುತಿಸಲಾಗಿದೆ. ಇಂಧನ ಕ್ಷೇತ್ರದಲ್ಲಿ 25 ಲಕ್ಷ ಕೋಟಿ ರೂ. ಮೊತ್ತದ ಯೋಜನೆ, 20 ಲಕ್ಷ ಕೋಟಿ ಮೊತ್ತದ ರಸ್ತೆ ಯೋಜನೆ, 14 ಲಕ್ಷ ಕೋಟಿ ಮೊತ್ತದ ರೈಲ್ವೇ ಯೋಜನೆ ಜಾರಿಯಾಗಲು ಸಿದ್ಧವಾಗಿದೆ. ಭಾರತವನ್ನು 2025ರ ವೇಳೆಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನಾಗಿಸುವ ಆಶಯಕ್ಕೆ 102 ಲಕ್ಷ ಕೋಟಿ ಮೊತ್ತದ ರಾಷ್ಟ್ರೀಯ ಮೂಲಸೌಕರ್ಯ ಯೋಜನೆ ಪೂರಕವಾಗಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News