ಕಾಶ್ಮೀರ: ಇಂದು ಮಧ್ಯರಾತ್ರಿಯಿಂದ ಆಸ್ಪತ್ರೆಗಳಲ್ಲಿ ಇಂಟರ್‌ನೆಟ್ ಸೇವೆ ಪುನರಾರಂಭ

Update: 2019-12-31 18:29 GMT

ಶ್ರೀನಗರ, ಡಿ.31: ಕಾಶ್ಮೀರ ಕಣಿವೆಯಲ್ಲಿ ಎಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಇಂಟರ್‌ನೆಟ್ ಸೇವೆ ಹಾಗೂ ಎಲ್ಲಾ ಮೊಬೈಲ್‌ಗಳಲ್ಲೂ ಎಸ್‌ಎಂಎಸ್ ವ್ಯವಸ್ಥೆ ಡಿ.31ರ ಮಧ್ಯರಾತ್ರಿಯಿಂದ ಪುನರಾರಂಭಗೊಳ್ಳಲಿದೆ ಎಂದು ಜಮ್ಮು ಕಾಶ್ಮೀರ ಆಡಳಿತ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಆಗಸ್ಟ್ 5ರಿಂದ ರಾಜ್ಯದಾದ್ಯಂತ ಎಲ್ಲಾ ದೂರವಾಣಿ ವ್ಯವಸ್ಥೆ, ಇಂಟರ್‌ನೆಟ್ ಸೇವೆ ಹಾಗೂ ಮೊಬೈಲ್ ಎಸ್‌ಎಂಎಸ್ ವ್ಯವಸ್ಥೆ ಕಡಿತಗೊಳಿಸಲಾಗಿತ್ತು. 72 ದಿನಗಳ ಬಳಿಕ, ಅಕ್ಟೋಬರ್ 14ರಿಂದ ದೂರವಾಣಿ ವ್ಯವಸ್ಥೆ ಹಾಗೂ ಮೊಬೈಲ್ ಎಸ್‌ಎಂಎಸ್ ಸೇವೆ ಮತ್ತೆ ಆರಂಭವಾಗಿತ್ತು. ಆದರೆ, ಮೊಬೈಲ್ ಎಸ್‌ಎಂಎಸ್ ಮೂಲಕ ಉಗ್ರರು ಜನರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಕೆಲವೇ ಗಂಟೆಗಳಲ್ಲಿ ಮೊಬೈಲ್ ಎಸ್‌ಎಂಎಸ್ ಸೇವೆಯನ್ನು ಸರಕಾರ ಮತ್ತೆ ಸ್ಥಗಿತಗೊಳಿಸಿತ್ತು.

ವಿದ್ಯಾರ್ಥಿಗಳು, ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕುವವರು ಹಾಗೂ ವ್ಯಾಪಾರಿಗಳ ಕೋರಿಕೆಯಂತೆ ಡಿಸೆಂಬರ್ 10ರಂದು ಮೊಬೈಲ್ ಎಸ್‌ಎಂಎಸ್ ವ್ಯವಸ್ಥೆಯನ್ನು ಕಾಶ್ಮೀರದ ಕೆಲವೆಡೆ ಪುನರಾರಂಭಿಸಲಾಗಿತ್ತು. ಡಿಸೆಂಬರ್ 27ರಂದು ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಮತ್ತೆ ಆರಂಭಿಸಲಾಗಿತ್ತು. ಇದೀಗ ಕಾಶ್ಮೀರದಲ್ಲಿ ಎಲ್ಲಾ ಮೊಬೈಲ್‌ಗಳಿಗೂ ಡಿ.31ರಿಂದ ಎಸ್‌ಎಂಎಸ್ ಸೇವೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News