ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ಸಂದೇಶ ಆರೋಪ: ಮಂಗಳೂರು ಸೈಬರ್ ಸೆಲ್ ಪೊಲೀಸರಿಂದ ನೋಟಿಸ್

Update: 2020-01-01 15:25 GMT

ಮಂಗಳೂರು, ಜ.1: ನಗರದಲ್ಲಿ ಡಿ.19ರಂದು ನಡೆದ ಗೋಲಿಬಾರ್-ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ (ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವೀಟರ್ ಮತ್ತಿತ್ಯಾದಿ)ಕೋಮು ಪ್ರಚೋದನೆಯ ಸಂದೇಶ ರವಾನಿಸಿದ ಆರೋಪದ ಮೇಲೆ ಮಂಗಳೂರು ಸೈಬರ್ ಸೆಲ್ ಪೊಲೀಸರು ಹಲವು ಮಂದಿಗೆ ನೋಟಿಸ್ ಜಾರಿ, ಎಫ್‌ಐಆರ್ ದಾಖಲು, ಬಂಧನದ ಕ್ರಮ ಜರುಗಿಸತೊಡಗಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಗಳ ಮಧ್ಯೆ ದ್ವೇಷ ಕಾರುವ ಸಂದೇಶ ರವಾನೆ, ಪೊಲೀಸರಿಗೆ ಎಚ್ಚರಿಕೆ, ಪರಸ್ಪರ ಆರೋಪ-ಪ್ರತ್ಯಾರೋಪ ಇತ್ಯಾದಿಯ ದಾಖಲೆಯನ್ನು ಸಂಗ್ರಹಿಸಿದ ಸೈಬರ್ ಸೆಲ್ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಕಠಿಣದ ಕ್ರಮಕ್ಕೆ ಮುಂದಾಗಿದ್ದಾರೆ. ಡಿ.29ರಂದು 6, ಡಿ.30ರಂದು 7, ಡಿ.31ರಂದು 10 ಹೀಗೆ ಸತತ ಮೂರು ದಿನಗಳಲ್ಲಿ 23 ಮಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಸಂದೇಶಕ್ಕೆ ಸಂಬಂಧಿಸಿದ ಗ್ರೂಪ್‌ಗಳ ಎಡ್ಮಿನ್‌ಗಳಲ್ಲದೆ ಸಂದೇಶ ಕಳುಹಿಸಿದವರಿಗೂ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಒಬ್ಬನನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಹೀಗೆ ಸೈಬರ್ ಸೆಲ್ ಪೊಲೀಸರು ಕಠಿಣ ಕ್ರಮ ಜರುಗಿಸಿ ಕೋಮು ಪ್ರಚೋದನೆಯ ಸಂದೇಶ ರವಾನಿಸುವವರ ವಿರುದ್ಧ ಅಸ್ತ್ರ ಬಳಸಿಕೊಂಡಿದ್ದಾರೆ. ಮುಹಮ್ಮದ್ ಆಸಿಫ್ ಖಾನ್, ಅನೀಸ್ ಕುಂಬ್ರ, ಇರ್ಫಾನ್ ಬೆಳ್ತಂಗಡಿ, ಅನೀಸ್ ಬಿ.ಕೆ., ಅನೀಸ್ ಅಹ್ಮದ್, ನಿಝಾಮ್ ಪಿ.ಎ., ಇಸ್ಮಾಯೀಲ್ ಎ.ಕೆ., ಶಬ್ಬೀರ್ ಅಹ್ಮದ್, ನಿಸಾರ್ ಅಹ್ಮದ್, ಅಲ್ತಾಫ್, ಅನ್ಸಾರ್ ಮಂಗಳೂರು, ನಿಝಾಮ್ ಫರಂಗಿಪೇಟೆ, ಸಾಹಿಲ್ ಬೆದ್ರ, ದಾವಲ್‌ಸಾಬ್ ಚಿತ್ರದುರ್ಗ, ಸಿದ್ದೀಕ್ ಉಳ್ಳಾಲ ಕೋಡಿ, ಮುಹಮ್ಮದ್ ಇರ್ಫಾನ್ ಬಂಟ್ವಾಳ, ಶರಫ್ ಮುಹಮ್ಮದ್, ‘ಇದು ನಮ್ಮ ಧ್ವನಿ’ ಫೇಸ್‌ಬುಕ್ ಗ್ರೂಪ್ ಅಡ್ಮಿನ್, ‘ಮುಸ್ಲಿಂ ಯುವ ಸೇನೆ’ ಫೇಸ್‌ಬುಕ್ ಗ್ರೂಪ್ ಅಡ್ಮಿನ್, ಎಸ್‌ಡಿಪಿಐ ಡಿ.ಕೆ. ಫೇಸ್‌ಬುಕ್ ಗ್ರೂಪ್ ಅಡ್ಮಿನ್, ಎಸ್‌ಡಿಪಿಐ ಮಂಗಳೂರು ಫೇಸ್‌ಬುಕ್ ಗ್ರೂಪ್ ಅಡ್ಮಿನ್ ಸಹಿತ 23 ಮಂದಿ ವಿರುದ್ಧ ಸಮನ್ಸ್ ಕಳುಹಿಸಲಾಗಿದೆ. ಈ ಪೈಕಿ ದ.ಕ.ಜಿಲ್ಲೆಯವರಲ್ಲದೆ ಹೊರ ಜಿಲ್ಲೆಯವರು ಸೇರಿದ್ದಾರೆ.

ಲುಕ್‌ಔಟ್ ನೋಟಿಸ್‌ಗೆ ಸಿದ್ಧತೆ: ಈ ಮಧ್ಯೆ ವಿದೇಶ ದಲ್ಲಿದ್ದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಸಂದೇಶಗಳನ್ನು ಬಿತ್ತರಿಸುವವರ ಮೇಲೂ ಕಣ್ಣಿಟ್ಟಿರುವ ಸೈಬರ್ ಸೆಲ್ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಂದೇಶಗಳನ್ನು ಬಿತ್ತರಿಸುವವರ ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿರುವ ಪೊಲೀಸರು ರವಾನಿಸಿದ ಸಂದೇಶಗಳನ್ನು ಸಂಗ್ರಹಿಸಿ ದಾಖಲೆಯಾಗಿಸಿಕೊಳ್ಳುತ್ತಿದ್ದಾರೆ. ಲುಕ್‌ಔಟ್ ನೋಟಿಸ್ ಜಾರಿಗೊಳಿಸಲ್ಪಟ್ಟ ವ್ಯಕ್ತಿಯು ಯಾವುದೇ ವಿಮಾನ ನಿಲ್ದಾಣದಲ್ಲಿದ್ದರೂ ಕೂಡ ಬಂಧನಕ್ಕೊಳಗಾಗುವುದು ನಿಶ್ಚಿತ.

‘ಲೆಟರ್ಸ್‌ ರೊಗೇಟರಿ’ ಅಸ್ತ್ರ ಬಳಕೆ: ಅದಲ್ಲದೆ ವಿದೇಶದಲ್ಲಿದ್ದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡಿದವರ ವಿರುದ್ಧ ‘ಲೆಟರ್ಸ್‌ ರೊಗೇಟರಿ’ ಅಸ್ತ್ರ ಬಳಕೆ ಮಾಡಲು ಕೂಡ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಅಂದರೆ, ವಿದೇಶದಲ್ಲಿದ್ದುಕೊಂಡು ಪ್ರಚೋದನಾಕಾರಿ ಸಂದೇಶ ಹಾಕಿದ್ದನ್ನು ಆಧಾರವಾಗಿಟ್ಟುಕೊಂಡು ಜಿಲ್ಲಾ ನ್ಯಾಯಾಲಯದಿಂದ ಆಯಾ ರಾಷ್ಟ್ರಗಳಲ್ಲಿರುವ ರಾಯಭಾರ ಕಚೇರಿಗೆ ‘ಲೆಟರ್ಸ್‌ ರೊಗೇಟರಿ’ ಕಳುಹಿಸಲಾಗುತ್ತದೆ. ಹೀಗೆ ಲೆಟರ್ಸ್‌ ಪಡೆಯುವ ವ್ಯಕ್ತಿಯ ಪಾಸ್‌ಪೋರ್ಟ್‌ನ್ನು ರಾಯಭಾರ ಕಚೇರಿಯು ಮುಟ್ಟುಗೋಲು ಹಾಕಲಿದೆ. ಬಳಿಕ ಭಾರತೀಯ ಕೋರ್ಟ್‌ನ ‘ಲೆಟರ್ಸ್ ರೊಗೇಟರಿ’ಯನ್ನು ವಿದೇಶಿ ಕೋರ್ಟ್‌ಗೂ ಸಲ್ಲಿಸಲಾಗುತ್ತದೆ. ಇದರಿಂದ ಪಾಸ್‌ಪೊರ್ಟ್ ಕಳೆದುಕೊಂಡ ವ್ಯಕ್ತಿಯ ಬಂಧನಕ್ಕೊಳಪಡುವುದು ಅನಿವಾರ್ಯವಾಗಿದೆ. ಅಲ್ಲದೆ ಆತ ತನ್ನ ಪಾಸ್‌ಪೋರ್ಟ್ ಮರಳಿ ಪಡೆಯಲಾಗದೆ ತಾನು ಆರೋಪಿಯಲ್ಲ ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕಾಗಿದೆ.

ಸೈಬರ್ ಅಪರಾಧಗಳನ್ನು ತಡೆಗಟ್ಟುವುದೇ ನಮ್ಮ ಉದ್ದೇಶವಾಗಿದೆ. ಡಿ.19ರ ಘಟನೆಯ ಬಳಿಕ ಹಲವರು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸುತ್ತಿದ್ದಾರೆ. ಈಗಾಗಲೆ ಯಾರ್ಯಾರು ಏನೇನು ಸಂದೇಶಗಳನ್ನು ಕಳುಹಿಸಿದ್ದಾರೆ ಮತ್ತು ಕಳುಹಿಸುತ್ತಿದ್ದಾರೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ಅರಿವಿದ್ದೋ, ಇಲ್ಲದೆಯೋ ಸಂದೇಶ ರವಾನಿಸಿದರೆ ಅವರೇ ಜವಾಬ್ದಾರರು. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸುವವರಲ್ಲದೆ ಅದರ ಎಡ್ಮಿನ್‌ಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ. ಈ ವರೆಗೆ 23 ಮಂದಿಗೆ ನೋಟಿಸ್ ಕಳುಹಿಸಲಾಗಿದ್ದು, ತನ್ನ ಮುಂದೆ ಹೇಳಿಕೆ ನೀಡಲು ದಿನಾಂಕ ನಿಗದಿಪಡಿಸಿ ಸೂಚನೆ ನೀಡಲಾಗಿದೆ. ಸೆ.124 (ಎ), 153 (ಎ), 114, 505 ಹೀಗೆ ವಿವಿಧ ಸೆಕ್ಷನ್‌ಗಳನ್ನು ಹಾಕಲಾಗಿದೆ. 5 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಪೊಲೀಸ್ ಇಲಾಖೆಯು ಕಠಿಣ ಕ್ರಮ ಜರುಗಿಸುತ್ತಿದ್ದು, ಹಾಗಾಗಿ ಸಂದೇಶ ಹಾಕುವವರು, ರವಾನಿಸುವವರು ಮತ್ತು ಅದಕ್ಕೆ ಪ್ರತಿಕ್ರಿಯಿಸುವವರು ಎಚ್ಚರಿಕೆ ವಹಿಸಬೇಕಿದೆ.

- ಬಿ.ಸಿ.ಗಿರೀಶ್, ಇನ್‌ಸ್ಪೆಕ್ಟರ್, ಸೈಬರ್ ಸೆಲ್ ಮಂಗಳೂರು

ನ್ಯಾಯಾಂಗ ಬಂಧನ
ಡಿ.19ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಟ್ಟ ಆರೋಪದ ಮೇರೆ ಬಂಧಿಸಲ್ಪಟ್ಟ ಮೊಯ್ದಿನ್ ಹಮೀಝ್‌ನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಸಾವಿಗೆ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡುವ ಸಂದೇಶವನ್ನು ಈತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದನೆಂದು ಆರೋಪಿಸಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News