ಸಿಎಎ/ಎನ್‌ಆರ್‌ಸಿ ವಿರುದ್ಧ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಚಳವಳಿ: ರಮಾನಾಥ ರೈ
ಮಂಗಳೂರು, ಜ.1: ದೇಶದಲ್ಲಿ ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸಲು ಅಂದು ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಚಳವಳಿ ನಡೆಸಲಾಯಿತು. ಇದೀಗ ಮತ್ತೆ ಸಂವಿಧಾನ ವಿರೋಧಿಯಾದ ಸಿಎಎ/ಎನ್‌ಆರ್‌ಸಿಯನ್ನು ಜಾರಿಗೊಳಿಸಿರುವ ಕೇಂದ್ರದ ಸರಕಾರದ ವಿರುದ್ಧ ಜನರು ಒಗ್ಗಟ್ಟಾಗಿ ಅಹಿಂಸಾ ಮಾರ್ಗದಲ್ಲಿ ಎರಡನೆ ಸ್ವಾತಂತ್ರ ಚಳವಳಿ ನಡೆಸುವುದು ಅನಿವಾರ್ಯವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಡಿ.19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್, ಘರ್ಷಣೆ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಇಂದು ಪುರಭವನದ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಆಯೋಜಿಸಲಾಗಿರುವ ಸಾಮೂಹಿಕ ಧರಣಿಯನ್ನು ಬಳಿಕ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬ್ರಿಟಿಷರ ವಿರುದ್ಧದದ ಅಹಿಂಸಾತ್ಮಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹಾತ್ಮ ಗಾಂಧಿ ನೇತೃತ್ವ ನೀಡಿದ್ದರೆ, ಇಂದು ಫ್ಯಾಶಿಸ್ಟ್ ಸರಕಾರದ ವಿರುದ್ಧ ನಡೆಯುತ್ತಿರುವ ಚಳವಳಿಗೆ ಜನರೇ ಮುಖಗಳು. ಜನರ ನಾಯಕತ್ವದಲ್ಲಿ ಈ ಚಳವಳಿ ನಡೆಯುತ್ತಿದೆ ಎಂದರು. ಮಂಗಳೂರಿನಲ್ಲಿ ಡಿ. 19ರಂದು ನಡೆದ ಘಟನೆಗೆ ವಿಪಕ್ಷ ಕಾರಣ, ಪೂರ್ವನಿಯೋಜಿತ ಎಂದೆಲ್ಲಾ ರಾಜ್ಯ ಸರಕಾರ ಆರೋಪಿಸುತ್ತಿದೆ. ವಾಸ್ತವದಲ್ಲಿ ರಾಜ್ಯದಲ್ಲಿ ಯಾವುದೇ ಗಲಾಟೆ, ಗಲಭೆಗಳಿಲ್ಲವಾದರೂ ಪೂರ್ವಭಾವಿಯಾಗಿ ರಾಜ್ಯಾದ್ಯಂತ ನಿಷೇಧಾಜ್ಞೆ ಹೇರುವ ಮೂಲಕ ಸರಕಾರವೇ ಗಲಭೆಗೆ ಪ್ರಚೋದನೆ ನೀಡಿತ್ತು. ಇದು ಸರಕಾರದ ಪೂರ್ವ ನಿಯೋಜಿತ ಕೃತ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವರೇ ಇದಕ್ಕೆ ನೇರ ಹೊಣೆ ಎಂದು ರಮಾನಾಥ ರೈ ಆರೋಪಿಸಿದರು.
ಪ್ರಕರಣದ ಕುರಿತು ನಿಷ್ಪಕ್ಷಪಾತವಾದ ತನಿಖೆ ಆಗಬೇಕಾಗಿರುವುದರಿಂದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯೇ ಆಗಬೇಕು ಎಂಬುದು ನಮ್ಮ ಒಕ್ಕೊರಳ ಆಗ್ರಹ ಎಂದು ಹೇಳಿದ ಅವರು, ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಜಾತ್ಯತೀತ ಶಕ್ತಿಗಳು ಒಗ್ಗೂಡುವ ಅನಿವಾರ್ಯ ಇದೆ ಎಂದರು. ನುಸುಳುಕೋರರು, ಭಯೋತ್ಪಾದಕರನ್ನು ಹಿಡಿಯುವ ನೆಪದಲ್ಲಿ ರಾಜ್ಯದಲ್ಲಿ ಆರು ಕೋಟಿ ಜನರನ್ನು ತನಿಖೆ ಮಾಡುವಂತಹ ಪರಿಸ್ಥಿತಿ ಈ ಪೌರತ್ವ ಸಾಬೀತು ಪಡಿಸುವ ಕಾಯ್ದೆಯಾಗಿದೆ. ಇದು ರಾಜ್ಯ, ದೇಶದ ಪ್ರಜೆಗಳಿಗೆ ಅವಮಾನ ಮಾಡುವುದು ಮಾತ್ರವಲ್ಲದೆ ಸಬ್‌ಕಾ ಸಾತ್ ಸಬ್‌ಕಾ ಸಾತ್ ಎಂದು ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಹಿಪಾಕ್ರಸಿಯ ಭಾಗ ಎಂದು ರಮಾನಾಥ ರೈ ದೂರಿದರು.
ಯಾರು ಯಾವ ರೀತಿಯಲ್ಲಿ ಪ್ರಚೋದಿಸಿದರೂ ಹಿಂಸೆಗೆ ಕಿವಿಗೊಡದೆ, ಲಾಠಿ ಚಾರ್ಜ್ ಆಗಲಿ, ಜೈಲಿಗೇ ಅಟ್ಟಲಿ ತಾಳ್ಮೆಯಿಂದ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿದರೆ ಜಯ ಖಂಡಿತಾ ಸಿಗಲಿದೆ ಎಂದು ಹೋರಾಟಗಾರರಿಗೆ ಸಲಹೆ ನೀಡಿದ ಅವರು, ಇದು ಅಧಿಕಾರಿಶಾಹಿಗಳ ವಿರುದ್ಧದ ಹೋರಾಟವಲ್ಲ. ಬದಲಾಗಿ ಇದು ಕೇಂದ್ರ ಹಾಗೂ ರಾಜ್ಯ ಸರಕಾರದ ಜನ ವಿರೋಧಿ ನೀತಿಗಳ ವಿರುದ್ದವಾಗಿದೆ ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಿಪಿಎಂ ಮುಖಂಡ ವಸಂತ ಆಚಾರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಕೋಮುವಾದಿ ಸರಕಾರ ಆಡಳಿತದಲ್ಲಿದ್ದು, ಅದು ಆರೆಸ್ಸೆಸ್‌ನ ಗುಪ್ತ ಒಳಸಂಚನ್ನು ಜಾರಿಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
ಧರ್ಮದ ಆಧಾರದಲ್ಲಿ ಬಹುಸಂಖ್ಯಾತರನ್ನು ಕೋಮುವಾದಿಗಳನಾಗಿಸಿ ಅಲ್ಪಸಂಖ್ಯಾತರನ್ನು ದಮನಿಸಲು ನಡೆಸಲಾಗುತ್ತಿರುವ ಸಂಚನ್ನು ಹಿಮ್ಮೆಟ್ಟಿಸಬೇಕಾಗಿದೆ. ಶಾಂತಿ ಸೌಹಾರ್ದದ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಪ್ರತಿಭಟನೆಯ ಹಕ್ಕನ್ನು ನಿರಾಕರಿಸುತ್ತಿರುವುದು ಖಂಡನೀಯ ಎಂದವರು ಹೇಳಿದರು. ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಸರಕಾರದ ವಿರುದ್ಧ ಪ್ರತಿರೋಧ ಒಡ್ಡಲೂ ಅನುಮತಿ ಪಡೆಯಬೇಕಾದ, ಪ್ರತಿಭಟನೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾದ, ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯಬೇಕಾದ ಸನ್ನಿವೇಶ ಎದುರಾಗಿರುವುದು ಶೋಚನೀಯ ಎಂದ ಅವರು ಮಂಗಳೂರು ಗಲಭೆ, ಪೊಲೀಸ್ ಗೋಲಿಬಾರ್ ದೇಶದ ಗೃಹ ಸಚಿವರ ಸೂಚನೆಯ ಮೇರೆಗೆ ಪೊಲೀಸ್ ಆಯುಕ್ತರಿಂದ ನಡೆಸಲಾಗಿದೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ನಡೆದ ಹಿಂಸಾಚಾರ, ಗೋಲಿಬಾರ್ ಸಂದರ್ಭ 7000 ಮಂದಿ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದರು ಎಂದು ಆಯುಕ್ತರು ಹೇಳಿರುವ ವೀಡಿಯೋ ಕ್ಲಿಪ್ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಪೊಲೀಸರು ಸಂವಿಧಾನದ ಪರವಾಗಿ ಕೆಲಸ ಮಾಡಬೇಕೇ ಹೊರತು ಆಡಳಿತ ನಡೆಸುವವರ ಪರವಾಗಿ ಅಲ್ಲ. ಹಾಗಾಗಿ ಮಂಗಳೂರು ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದವರು ಒತ್ತಾಯಿಸಿದರು.
ಕೇಂದ್ರ ಸರಕಾರದ ವಿರುದ್ಧ ಘೋಷಣೆಯ ಜತೆಗೆ ಧರಣಿಯಲ್ಲಿ ಆಝಾದಿ ಘೋಷಣೆಯನ್ನೂ ಮಾಡಲಾಯಿತು.
ಪ್ರತಿಭಟನೆಯಲ್ಲಿ ಶಾಸಕ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಕೆ.ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜೆಡಿಎಸ್ ಮುಖಂಡರಾದ ಮುಹಮ್ಮದ್ ಕುಂಞಿ, ಸುಶೀಲ್ ನೊರೊನ್ಹ, ಸಿಪಿಎಂನ ಕೆ.ಆರ್.ಶ್ರೀಯಾನ್, ಸುನೀಲ್ ಕುಮಾರ್ ಬಜಾಲ್, ಸಂತೋಷ್ ಕುಮಾರ್, ಜಯಂತಿ ಶೆಟ್ಟಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ದಲಿತ ನಾಯಕರಾದ ಎಂ.ದೇವದಾಸ್, ರಘು ಎಕ್ಕಾರು, ರೈತ ನಾಯಕ ರವಿಕಿರಣ ಪುಣಚ, ವಿವಿಧ ಪಕ್ಷ ಹಾಗೂ ಸಂಘಟನೆಗಳ ನಾಯಕರಾದ ಆಲ್ವಿನ್ ಮಿನೇಜಸ್, ಪ್ರೇಮನಾಥ ಶೆಟ್ಟಿ, ಯು.ಬಿ. ಲೋಕಯ್ಯ, ಬಾಲಕೃಷ್ಣ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಪ್ರವೀಣ್ ಚಂದ್ರ ಆಳ್ವ, ಕರೀಂ, ಕುಕ್ಯಾನ್, ಎ.ಸಿ. ವಿನಯರಾಜ್, ಲತೀಫ್ ಕಂದಕ್, ಭಾಸ್ಕರ್, ಸಂತೋಷ್ ಶೆಟ್ಟಿ, ಅಝೀಝ್ ಕುದ್ರೋಳಿ, ಸಂಶುದ್ದೀನ್, ಅಕ್ಷಿತ್ ಸುವರ್ಣ, ವಾಸುದೇವ ಉಚ್ಚಿಲ್, ಫಾರೂಕ್ ಉಳ್ಳಾಲ್, ಹರಿನಾಥ್, ಶಶಿಧರ ಹೆಗ್ಡೆ, ಪಿ.ವಿ.ಮೋಹನ್, ಅಹ್ಮದ್ ಬಾವಾ, ಸುಮತಿ ಹೆಗ್ಡೆ, ನಝೀರ್ ಉಳ್ಳಾಲ್, ಇಬ್ರಾಹೀಂ ಕೋಡಿಜಾಲ್, ಲ್ಯಾನ್ಸಿಲಾಟ್ ಪಿಂಟೊ, ಸುರೇಶ್ ಬಲ್ಲಾಳ್, ಮಮತಾ ಗಟ್ಟಿ, ಶ್ಯಾಲೆಟ್ ಪಿಂಟೋ, ಕವಿತಾ ಸನಿಲ್, ಎ.ಜೆ. ಸಲೀಂ, ಸದಾಶಿವ ಶೆಟ್ಟಿ, ಯಾದವ ಶೆಟ್ಟಿ, ಟಿ. ಹೊನ್ನಯ್ಯ ಮತ್ತಿತರರು ಭಾಗವಹಿಸಿದ್ದಾರೆ.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಬಸ್ಸಿನಲ್ಲಿ ಆಗಮಿಸಿದ ಮಾಜಿ ಸಚಿವ!
ಮಾಜಿ ಸಚಿವ ರಮಾನಾಥ ರೈಯವರು ಸಾಮಾನ್ಯ ನಾಗರಿಕನಂತೆ ಬಿಸಿರೋಡ್‌ನಿಂದ ಮಂಗಳೂರಿನ ಕ್ಲಾಕ್ ಟವರ್‌ವರೆಗೆ ಬಸ್ಸಿನಲ್ಲಿ ಆಗಮಿಸಿ ಅಲ್ಲಿಂದ ನಡಿಗೆ ಮೂಲಕ ಪುರಭವನದ ಆವರಣಕ್ಕೆ ಆಗಮಿಸಿದರು. ಬಳಿಕ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಧರಣಿಗೆ ಚಾಲನೆ ನೀಡಲಾಯಿತು.ಕೇಂದ್ರ ಸರಕಾರದ ವಿರುದ್ಧ ಘೋಷಣೆಯ ಜತೆಗೆ ಧರಣಿಯಲ್ಲಿ ಆಝಾದಿ ಘೋಷಣೆಯನ್ನೂ ಮಾಡಲಾಯಿತು.
ಬಂಧಿತ ಅಮಾಯಕರ ಬಿಡುಗಡೆಗೆ ಆಗ್ರಹ
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಡಿ.19ರಂದು ನಡೆದ ಹಿಂಸಾಚಾರ ಮತ್ತು ಗೋಲಿಬಾರ್ ಘಟನೆಯನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೊಳಪಡಿಸಬೇಕು. ಗೋಲಿಬಾರ್‌ಗೆ ಬಲಿಯಾದವರಿಗೆ ಮತ್ತು ಗಾಯಾಳುಗಳಿಗೆ ಸರಕಾರ ಕೂಡಲೇ ಪರಿಹಾರ ಘೋಷಣೆ ಮಾಡಬೇಕು, ಪ್ರಕರಣಕ್ಕೆ ಸಂಬಂಧಿಸಿ ಕೆಲವು ಅಮಾಯಕರನ್ನು ಬಂಧಿಸಿದ್ದು ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಧರಣಿಯಲ್ಲಿ ಪ್ರತಿಭಟನಾಕಾರರು ಜಿಂದಾಬಾದ್ ಹಾಗೂ ಘೋಷಣೆಗಳನ್ನು ಕೂಗಿದರು. ಧರಣಿಯಲ್ಲಿ ಪೊಲೀಸ್ ದೌರ್ಜನ್ಯ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪೌರತ್ವ ತಿದ್ದುಪಡಿ ಧೋರಣೆ ವಿರೋಧಿ ಫಲಕಗಳನ್ನು ಪ್ರರ್ಶಿಸಲಾಯಿತು. ಕಾಂಗ್ರೆಸ್, ಜೆಡಿಎಸ್, ಸಿಎಂಎಂ, ಸಿಪಿಐ, ರೈತ ಸಂಘ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.