ಪ್ರಮಾಣಪತ್ರಗಳನ್ನು ತೋರಿಸಲು ಸಾಧ್ಯವಾಗದ ಪ್ರಧಾನಿ, ಸಚಿವರಿರುವ ಸರಕಾರ ಜನರ ಅರ್ಹತೆ ಕೇಳುತ್ತಿದೆ

Update: 2020-01-02 10:03 GMT

ಹೊಸದಿಲ್ಲಿ: ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್ ಅಥವಾ ಎನ್‍ ಪಿಆರ್‍ ಗಾಗಿ 21 ವಿಚಾರಗಳ ಕುರಿತು ಮಾಹಿತಿ ಕೇಳುವ ಪ್ರಾಯೋಗಿಕ ಫಾರ್ಮ್ ಅನ್ನು ಕೇಂದ್ರ ಸರಕಾರ ಅಂತಿಮಗೊಳಿಸಿದೆ ಎಂಬ ವರದಿಯೊಂದಕ್ಕೆ ಗೃಹ ಸಚಿವಾಲಯ ನೀಡಿರುವ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯೆಯಾಗಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟ್ವೀಟ್ ಮಾಡಿದ್ದಾರೆ.

"ಆರ್‍ ಟಿಐಯನ್ನು ಮುಚ್ಚಿ ಬಿಟ್ಟಿರುವ, ಸೊನ್ನೆ ಪಾರದರ್ಶಕತೆಯಿರುವ ಇಲೆಕ್ಟೋರಲ್ ಬಾಂಡ್‍ ಗಳನ್ನು ಉತ್ತೇಜಿಸುವ ಸರಕಾರ,  ತಮ್ಮ ಪದವಿ ಪ್ರಮಾಣಪತ್ರಗಳನ್ನು ತೋರಿಸಲು ಸಾಧ್ಯವಾಗದ ಪ್ರಧಾನಿ ಹಾಗೂ ಸಚಿವರುಗಳು- ಈಗ  ನಾಗರಿಕರಿಗೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಹೇಳುತ್ತಿದೆ? ಅವರು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಬರೆದಿದ್ದಾರೆ.

ಗೃಹ ಸಚಿವಾಲಯವು ಪತ್ರಿಕೆಯ ವರದಿಗೆ ನೀಡಿದ ಸ್ಪಷ್ಟೀಕರಣದಲ್ಲಿ ಎನ್‍ ಪಿಆರ್ ಗಣತಿದಾರರಿಗೆ ದಾಖಲೆಪತ್ರಗಳನ್ನು ನೀಡಬೇಕಾಗಿಲ್ಲ ಎಂಬ ಸರಕಾರದ ನಿಲುವನ್ನು ವರದಿ `ನಿರ್ಲಕ್ಷ್ಯಿಸಿದೆ' ಎಂದು ಹೇಳಿದರೆ ವರದಿಯನ್ನು ತಯಾರಿಸಿದ್ದ ಪತ್ರಕರ್ತರು ತಮ್ಮ ವರದಿಯಲ್ಲಿ ಈ ವಿಚಾರ ಎತ್ತಲಾಗಿಲ್ಲ ಎಂದಿದ್ದಾರೆ.

``ಎನ್‍ ಪಿಆರ್ ಎನ್‍ಆರ್‍ಸಿ ಗೆ ದಾರಿ ಮಾಡಿಕೊಡುತ್ತಿದೆಯೆಂದು ಸ್ಪಷ್ಟವಾಗಿ ಹೇಳುವ ಪೌರತ್ವ ನಿಯಮಗಳು 2003 ಇದನ್ನು ರದ್ದು ಪಡಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳುತ್ತಿದೆಯೇ?'' ಎಂದು ಯೆಚೂರಿ ಪ್ರಶ್ನಿಸಿದ್ದಾರೆ.

"ಹಾಗಲ್ಲದೇ ಇದ್ದರೆ  ಏಕೆ ಅರ್ಧಸತ್ಯಗಳನ್ನು ಹಾಗೂ ತಪ್ಪುದಾರಿಗೆಳೆಯುವ ಸ್ಪಷೀಕರಣಗಳನ್ನು ನೀಡಬೇಕು?, ಎನ್‍ ಪಿಆರ್ ಎನ್‍ಆರ್‍ ಸಿಗೆ ಮೂಲ ದಾಖಲೆ ಆಗಿದೆ. ನಾಗರಿಕರಿಗೆ ಕಿರುಕುಳ ಹಾಗೂ ಬೆದರಿಕೆ ನೀಡುವ ಪ್ರಕ್ರಿಯೆ'' ಎಂದು ಟ್ವೀಟ್ ಮಾಡಿದ ಯೆಚೂರಿ, ಸರಕಾರ ಎನ್‍ ಪಿಆರ್ ಹಾಗೂ ಎನ್‍ಆರ್‍ ಸಿ ಎರಡನ್ನೂ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News