ಮಂಗಳೂರು ಹಿಂಸಾಚಾರದ ನ್ಯಾಯಾಂಗ ತನಿಖೆಯಾಗಲಿ: ಪಿಯುಸಿಎಲ್ ನೇತೃತ್ವದ ಸತ್ಯಶೋಧನಾ ತಂಡ

Update: 2020-01-02 18:06 GMT

ಮಂಗಳೂರು, ಜ.2: ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಘಟನೆಯಲ್ಲಿ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡು ಪೊಲೀಸರಿಂದ ಅತಿರೇಕದ ಕೃತ್ಯಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅಂದು ನಡೆದ ಘಟನೆ ಹಾಗೂ ನಂತರ ಘಟನೆಗಳನ್ನು ಸಮಗ್ರವಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಪಿಯುಸಿಎಲ್ ನೇತೃತ್ವದ ಸತ್ಯಶೋಧನಾ ತಂಡ ಒತ್ತಾಯಿಸಿದೆ.

ಘಟನೆಗೆ ಸಂಬಂಧಿಸಿ ಪಿಯುಸಿಎಲ್ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಘಟನೆಯ ಬಗ್ಗೆ ಪರಿಶೀಲನೆ, ಶೋಧನೆ ನಡೆಸಿರುವ ತಂಡವು ಸುದ್ದಿಗೋಷ್ಠಿಯಲ್ಲಿಂದು ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿದೆ.

ಈವರೆಗಿನ ತಮ್ಮ ಅಧ್ಯಯನದಲ್ಲಿ ಮಂಗಳೂರಿನಲ್ಲಿ ನಡೆದ ಘಟನೆ, ಪೊಲೀಸ್ ಗೋಲಿಬಾರ್‌ಗೆ ಸಂಬಂಧಿಸಿ ಪೊಲೀಸರ ಕಾರ್ಯಾಚರಣೆ ಕುರಿತಂತೆ ಸಾಕಷ್ಟು ಅನುಮಾನ, ಪ್ರಶ್ನೆಗಳು ಮೂಡಿ ಬಂದಿರುವುದರಿಂದ ಹೈಲ್ಯಾಂಡ್ ಆಸ್ಪತ್ರೆಗೆ ಪೊಲೀಸರು ನುಗ್ಗಿದ ಘಟನೆಯನ್ನು ಒಳಗೊಂಡು ಸಮಗ್ರ ನ್ಯಾಯಾಂಗ ತನಿಖೆಗೆ ಸರಕಾರ ಆದೇಶಿಸಬೇಕು ಎಂಬುದು ತಮ್ಮ ಪ್ರಮುಖ ಹಕ್ಕೊತ್ತಾಯಗಳಲ್ಲಿ ಒಂದಾಗಿದೆ ಎಂದು ಪಿಯುಸಿಎಲ್‌ನ ರಾಜ್ಯಾಧ್ಯಕ್ಷ ವೈ.ಎಸ್.ರಾಜೇಂದ್ರ ಹೇಳಿದರು.

ಪಿಯುಸಿಎಲ್, ಎನ್‌ಸಿಎಚ್‌ಆರ್‌ಒ (ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟ), ಎಐಪಿಎಫ್‌ನ ಕಾರ್ಯಕರ್ತರು ಎರಡು ತಂಡಗಳಲ್ಲಿ ಎರಡು ದಿನಗಳ ಕಾಲ ನಗರದ ವೆನ್‌ಲಾಕ್, ಹೈಲ್ಯಾಂಡ್ ಹಾಗೂ ಯುನಿಟಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳು ಹಾಗೂ ವೈದ್ಯರನ್ನು ಮಾತನಾಡಿಸಿದ್ದಾರೆ. ಮಾತ್ರವಲ್ಲದೆ, ಇನ್ನೊಂದು ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಂಡವು ಅಲ್ಲಿನ ಅಂಗಡಿಯವರು, ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸ್ ಠಾಣೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಅವರು ಹೇಳಿದರು. ಇದು ಕೇವಲ ಮಧ್ಯಂತರ ವರದಿಯಾಗಿದ್ದು, ಮುಂದಿನ ವಾರ ಅಂತಿಮ ವರದಿಯನ್ನು ಬಿಡುಗೆ ಮಾಡುವುದಾಗಿ ಅವರು ತಿಳಿಸಿದರು.

ತಮಿಳುನಾಡು, ಕೇರಳ, ಕರ್ನಾಟಕ, ಹೊಸದಿಲ್ಲಿ, ಛತ್ತೀಸ್‌ಗಢ ಸೇರಿದಂತೆ ವಿವಿಧ ರಾಜ್ಯಗಳ ಮಾನವ ಹಕ್ಕುಗಳ ಸಂಘಟನೆಗಳ ಕಾರ್ಯಕರ್ತರು ಈ ಸತ್ಯಶೋಧನೆಯನ್ನು ನಡೆಸಿರುವುದಾಗಿ ಅವರು ಹೇಳಿದರು.

ಮಧ್ಯಂತರ ವರದಿಯಲ್ಲಿ ತಂಡದ ಸದಸ್ಯರ ಅಧ್ಯಯನದ ಪ್ರಕಾರ ಘಟನೆಗೆ ಸಂಬಂಧಿಸಿ ಒಂದು ಕೋಮನ್ನು ಗುರಿಯಾಗಿಸಿಕೊಂಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಸುಳ್ಳಿನಿಂದ ರೂಪಿತವಾದ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು. ಪರಿಸ್ಥಿತಿಯ ವಾಸ್ತವವನ್ನು ಹೊರಜಗತ್ತಿಗೆ ಬಿಚ್ಚಿಟ್ಟ ಪ್ರಮುಖ ಮುಸ್ಲಿಂ ನಾಯಕರ ಮೇಲಿನ ಎಫ್‌ಐಆರ್ ರದ್ದುಗೊಳಿಸಬೇಕು. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿ ಅಮಾಯಕರ ಕೊಲೆಗೆ ಕಾರಣವಾದ ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಬೇಕು. ವೀಡಿಯೋದಲ್ಲಿ ಸೆರೆಯಾಗಿರುವಂತೆ ವಿವಾದಿತ ಹೇಳಿಕೆ ನೀಡಿರುವ ಕದ್ರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಾಂತಾರಾಮ್ ಕುಂದರ್‌ ರನ್ನು ಅಮಾನತುಗೊಳಿಸಬೇಕು. ಪೊಲೀಸರ ಗುಂಡಿಗೆ ಬಲಿಯಾದ ಕುಟುಂಬಗಳಿಗೆ ಘೋಷಿಸಿ ಹಿಂಪಡೆದಿರುವ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ಗಾಯಗೊಂಡ ಎಲ್ಲಾ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರಕಾರ ಭರಿಸಬೇಕು. ಪೊಲೀಸರ ಅಶ್ರುವಾಯುವಿನಿಂದ ಪರಿಸ್ಥಿತಿ ಬಿಗಡಾಯಿಸಿದ, ಘಟನೆಗೆ ಸಂಬಂಧವೇ ಇಲ್ಲದ ಹೈಲ್ಯಾಂಡ್ ಆಸ್ಪತ್ರೆಯ ಮೂವರು ರೋಗಿಗಳ ವೈದ್ಯಕೀಯ ವೆಚ್ಚವನ್ನು ಸರಕಾರ ಭರಿಸಬೇಕು ಎಂಬುದು ತಮ್ಮ ಇತರ ಪ್ರಮುಖ ಹಕ್ಕೊತ್ತಾಯ ಎಂದು ಅವರು ಹೇಳಿದರು.

ಪಿಯುಸಿಎಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಾಜು ಮಾತನಾಡಿ, ಆಸ್ಪತ್ರೆಯಲ್ಲಿ ದಾಖಲಾಗಿರುವವವರಲ್ಲಿ ಇಬ್ಬರು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿದ್ದು, ಅವರ್ಯಾರು ಪ್ರತಿಭಟನೆಗೆ ಬಂದವರಲ್ಲ ಎಂಬುದನ್ನು ತಿಳಿಸಿದ್ದಾರೆ. ಓರ್ವ ರಿಪ್ಪನ್ ಪೇಟೆಯ ನಿವಾಸಿಯಾಗಿದ್ದು, ಪಿಜಿಯಲ್ಲಿದ್ದುಕೊಂಡು ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಎಂಬುದು ಖೇದಕರ ಸಂಗತಿಯಾಗಿದೆ. ಪೊಲೀಸರು ಘಟನೆ ನಡೆದ ಹಿಂದಿನ ದಿನವೇ ಮರಳು ಮೂಟೆ ಇಟ್ಟು ಯುದ್ಧದ ವಾತಾವರಣ ನಿರ್ಮಾಣ ಮಾಡಿರುವುದು ಸಾಕಷ್ಟು ಸಂಶಯಗಳಿಗೆ ಕಾರಣವಾಗಿದೆ. ಪ್ರತಿಭಟನೆಗೆ ಸೇರಿದ್ದವರನ್ನು ಚದುರಿಸುವ ಪ್ರಕ್ರಿಯೆ ಒಳಗೆ ದಸ್ತಗಿರಿ ಮಾಡದೆ ಲಾಠಿಚಾರ್ಜ್ ಮಾಡಿರುವುದು ಕೂಡಾ ಅನುಮಾನಕ್ಕೆ ಕಾರಣವಾಗಿದೆ. ಅಝೀಝುದ್ದೀನ್ ರಸ್ತೆಯಲ್ಲಿ ಯಾಕೆ ಗದ್ದಲ ನಡೆದಿದೆ. ಯಾಕೆ ಗೋಲಿಬಾರ್ ನಡೆದಿದೆ ಎಂಬುದೇ ತಿಳಿದಿಲ್ಲ ಎಂದು ಸ್ಥಳೀಯರು ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಮೃತಪಟ್ಟವರಾಗಲಿ, ಗಾಯಗೊಂಡವರಾಗಲಿ ಪ್ರತಿಭಟನಾಕಾರರಾಗಿರದಿದ್ದರೂ ಸಂಕಷ್ಟಕ್ಕೆ ಸಿಲುಕಿರುವುದು ಕಂಡು ಬಂದಿದೆ. ಈ ಘಟನೆಯಲ್ಲಿ ಪೊಲೀಸರೇ ಪ್ರಚೋದನಕಾರಿಯಾಗಿ ನಡೆದುಕೊಂಡಿರುವುದು ಕಂಡು ಬಂದಿದೆ. ರಕ್ಷಣೆ ಮಾಡಬೇಕಾದವರೇ ತಮ್ಮ ವ್ಯಾಪ್ತಿಯನ್ನು ಮೀರಿ ನಡೆದುಕೊಂಡಿರುವಂತೆ ತೋರುತ್ತದೆ ಎಂದು ಹೇಳಿದರು.

ಘಟನಾ ದಿನದಂದು ಮಾರುಕಟ್ಟೆಯಲ್ಲಿನ ಮುಸ್ಲಿಂ ಸಮುದಾಯದ ಹಣ್ಣು ಹಂಪಲುಗಳ ಅಂಗಡಿಗಳು, ವ್ಯಾಪಾರಸ್ಥರನ್ನೇ ಗುರಿಯಾಗಿಸಿ ಪೊಲೀಸರು ಹಲ್ಲೆ ನಡೆಸಿರುವುದು ಕೂಡಾ ಪ್ರಶ್ನಾರ್ಹ. ಎಫ್‌ಐಆರ್‌ನಲ್ಲಿ ಕೆಲವು ಮುಕ್ತವಾಗಿರಿಸಿಲಾಗಿದ್ದರೆ, ಮತ್ತೆ ಕೆಲವು ಅಪರಿಚಿತ ಮುಸ್ಲಿಂ ಯುವಕರು ಎಂದು ಉಲ್ಲೇಖಿಸಿದ್ದಾರೆ. ಪ್ರತಿಭಟನಾಕಾರರು ಮುಸ್ಲಿಂ ಸಮುದಾಯದವರೇ ಎಂಬುದು ಪೊಲೀಸರು ನಿರ್ಧರಿಸಲು ಏನು ಕಾರಣ ಎಂಬ ಬಗ್ಗೆ ಸಂಶಯವಿದೆ ಎಂದು ಸ್ವಾತಿ ಶೇಷಾದ್ರಿ ಪ್ರಶ್ನಿಸಿದರು.

ಭಾರತದ ಸಂವಿಧಾನ ಧರ್ಮ ನಿರಾಪೇಕ್ಷವಾಗಿದ್ದು, ಸರಕಾರ, ಆಡಳಿತ ಮಾತ್ರವಲ್ಲದೆ ಅದರ ಎಲ್ಲಾ ಅಂಗ ಸಂಸ್ಥೆಗಳು ಧರ್ಮ ನಿರಪೇಕ್ಷವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಆದರೆ ಮಂಗಳೂರು ಘಟನೆಗೆ ಸಂಬಂಧಿಸಿ ಮಾತನಾಡಿಸಿದಾಗ ಪೊಲೀಸರು ಬೇಧಬಾವದಿಂದ ನಡೆದುಕೊಂಡಿರುವ ಮಾತುಗಳು ವ್ಯಕ್ತವಾಗಿವೆ. ಮಾತ್ರವಲ್ಲದೆ ಪೊಲೀಸರು ತಮ್ಮ ನಿಯಮಗಳನ್ನು ಮೀರಿ ದೇಹದ ಮೇಲ್ಭಾಗಕ್ಕೆ ನೇರವಾಗಿ ಗುಂಡು ದಾಳಿ ಮಾಡಿರುವುದು, ಆಸ್ಪತ್ರೆಯಲ್ಲಿ ನಡೆಸಿರುವ ದೌರ್ಜನ್ಯ ಸಾಕಷ್ಟು ಆತಂಕಗಳನ್ನು ಸೃಷ್ಟಿಸಿದೆ ಎಂದು ಪಿಯುಸಿಎಲ್‌ನ ಛತ್ತೀಸ್‌ಗಡ ಅಧ್ಯಕ್ಷ ಹಿಮಾಂಶು ಕುಮಾರ್ ಹೇಳಿದರು.

ಸಾವಿರಾರು ಜನರು ಠಾಣೆಗೆ ಮುತ್ತಿಗೆ ಹಾಕಲು ಬಂದಾಗ ಪೊಲೀಸ್ ಗೋಲಿಬಾರ್ ನಡೆಸಲಾಗಿದೆ ಎಂಬ ಪೊಲೀಸರ ಹೇಳಿಕೆಯೂ ವ್ಯಕ್ತಿಯೊಬ್ಬರು ಗೋಲಿಬಾರ್‌ಗೆ ಬಲಿಯಾಗುವ ವೀಡಿಯೋ ಕ್ಲಿಪ್ಲಿಂಗ್‌ನಲ್ಲಿ ಕಾಣುವ ನಿರ್ಜನ ಪ್ರದೇಶ ಹಲವು ಅನುಮಾನಗಳನ್ನು ಹುಟ್ಟು ಹಾಕಿರುವುದರಿಂದ ಜವಾಬ್ಧಾರಿಯುತ ಪೊಲೀಸರೇ ಸಂವಿಧಾನಕ್ಕೆ ವಿರುದ್ಧವಾಗಿ ಆದೇಶ ಪಾಲನೆ ಮಾಡಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಪಿಯುಸಿಎಲ್ ಮೈಸೂರು ಘಟಕದ ಅಧ್ಯಕ್ಷ ಪಂಡಿತಾರಾಧ್ಯ ಅಭಿಪ್ರಾಯಿಸಿದರು.

ಗೋಷ್ಠಿಯಲ್ಲಿ ಎನ್‌ಸಿಎಎಚ್‌ಆರ್‌ಒನ ಮುಹಮ್ಮದ್ ನೌಫಾಲ್ ಉಪಸ್ಥಿತರಿದ್ದರು.

'ಯುದ್ಧದ ಸಂದರ್ಭವೂ ಆಸ್ಪತ್ರೆಯಲ್ಲಿ ದೌರ್ಜನ್ಯ ಮಾಡುವಂತಿಲ್ಲ'
ಅಖಿಲ ಭಾರತ ನಾಗರಿಕ ವೇದಿಕೆಯ ಸ್ವಾತಿ ಶೇಷಾದ್ರಿ ಮಾತನಾಡಿ, ಡಿ. 18ರಂದೇ ಪೊಲೀಸರು ಸಾಕಷ್ಟು ಬಂದೋಬಸ್ತ್ ಮಾಡಿರುವುದು ಏನು ನಿರೀಕ್ಷಿಸಿದ್ದರು ಎಂಬುದನ್ನು ಪ್ರಶ್ನಿಸುವಂತಾಗಿದೆ. ಸೆಕ್ಷನ್ ಇದ್ದಾಗ ಪ್ರತಿಭಟನೆ ನಡೆಸಿದಾಗ ಅವರನ್ನು ದಸ್ತಗಿರಿ ಮಾಡುವ ಬದಲು ಲಾಠಿಚಾರ್ಜ್ ಯಾಕೆ ಮಾಡಿದ್ದು ಎಂಬ ಪ್ರಶ್ನೆಯ ಜತೆಗೆ ಅಂತಾರಾಷ್ಟ್ರೀಯ ಯುದ್ಧದ ಸಮಯದಲ್ಲೂ ಆಸ್ಪತ್ರೆಯನ್ನು ದಾಳಿಯಿಂದ ದೂರವಿರಿಸಲಾಗುತ್ತದೆ. ಆದರೆ ಈ ಘಟನೆಯ ಸಂದರ್ಭ ಆಸ್ಪತ್ರೆಯೊಳಗೆ ಅಶ್ರುವಾಯು ಸಿಡಿಸಿರುವುದು ಅಕ್ಷಮ್ಯವಾಗಿದ್ದು, ಈ ಬಗ್ಗೆ ಉತ್ತರ ಬೇಕಾಗಿದೆ. ನಮ್ಮ ಹಲವಾರು ಪ್ರಶ್ನೆಗಳ ಕುರಿತಂತೆ ಪೊಲೀಸ್ ಆಯುಕ್ತರನ್ನು ನಿನ್ನೆ ಭೇಟಿಯಾದಾಗ ಪ್ರಶ್ನಾವಳಿ ನೀಡಿ ಎಂದು ಹೇಳಿ ಕಳುಹಿಸಿದ್ದರು. ಅದನ್ನು ನೀಡಿ ಬಂದಿದ್ದರೂ ಇಂದು ಸಂಜೆಯವರೆಗೂ ಯಾವುದೇ ಪ್ರತಿಕ್ರಿಯೆಯನ್ನು ಅವರು ನೀಡಿಲ್ಲ ಎಂದು ಬೇಸರಿಸಿದರು.

ಬಂದರು ಠಾಣೆಯ ವೀಡಿಯೋ ಫೂಟೇಜ್ ಬಿಡುಗಡೆ ಮಾಡಿ
ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಮಾರಕ ಆಯುಧಗಳೊಂದಿಗೆ ದಾಳಿ ನಡೆಸಲು ಬಂದ ಕಾರಣ ಗೋಲಿಬಾರ್ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಸಾಬೀತುಪಡಿಸುವ ಬಂದರು ಠಾಣೆಯ ವೀಡಿಯೋ ಫೂಟೇಜ್‌ಗಳನ್ನು ಪೊಲೀಸರು ಬಿಡುಗಡೆ ಮಾಡಲಿ ಎಂದು ನ್ಯಾಯವಾದಿಯೂ ಆಗಿರುವ, ಅಖಿಲ ಭಾರತ ನಾಗರಿಕ ವೇದಿಕೆಯ ಕ್ಲಿಪ್ಟನ್ ಡಿ ರೊಜಾರಿಯೊ ಹೇಳಿದರು.

ಘಟನೆಯಲ್ಲಿ ಇಬ್ಬರ ಪ್ರಾಣ ಹೋಗಿದೆ. ಅದಕ್ಕೆ ಕಾರಣ ಬೇಕಲ್ಲವೇ? ಘಟನೆ ಆಗಿ ಎರಡು ವಾರವಾಗಿದ್ದರೂ ಗೋಲಿಬಾರ್ ನಡೆಸಿದ ಪೊಲೀಸರ ಮೇಲೆ ಏನು ಕ್ರಮ ಆಗಿದೆ ಎಂದು ಪ್ರಶ್ನಿಸಿದ ಅವರು, ಘಟನೆಗೆ ಸಂಬಂಧಿಸಿದಂತೆ ಮಾಡಲಾಗಿರುವ ಎಲ್ಲಾ ಎಫ್‌ಐಆರ್ ದಾಖಲೆಗಳ್ನು ಪರಿಶೀಲಿಸಿರುವುದಾಗಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News