​ಮಣಿಪಾಲ: ವಿಶೇಷ ಮಕ್ಕಳಿಗೆ ಫ್ಲೋರ್‌ಬಾಲ್ ರಾಷ್ಟ್ರೀಯ ತರಬೇತಿ ಶಿಬಿರ

Update: 2020-01-02 13:43 GMT

ಉಡುಪಿ, ಜ.2: ಮಣಿಪಾಲ ಅಕಾಡೆಮಿ ಅಫ್ ಹೈಯರ್ ಎಜ್ಯುಕೇಷನ್ (ಮಾಹೆ), ಸ್ಪೆಷಲ್ ಒಲಿಂಪಿಕ್ಸ್ ಭಾರತ್ (ಎಸ್‌ಒಬಿ) ಕರ್ನಾಟಕದ ಸಹಯೋಗದೊಂದಿಗೆ ಭಾರತದ 22 ರಾಜ್ಯಗಳಿಂದ ಬರುವ ಒಟ್ಟು 250 ಮಂದಿ ವಿಶೇಷ ಮಕ್ಕಳಿಗೆ ಫ್ಲೋರ್‌ಬಾಲ್‌ನಲ್ಲಿ ರಾಷ್ಟ್ರೀಯ ತರಬೇತಿ ಶಿಬಿರವನ್ನು ಜ.6ರಿಂದ 11ರವರೆಗೆ ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿ ಆಯೋಜಿಸಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.

ಮಣಿಪಾಲ ಮಾಹೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರೊಂದಿಗೆ ವಿಶೇಷ ಮಕ್ಕಳ ಕ್ರಿಕೆಟ್ ಕೋಚ್‌ಗಳಿಗೆ ಅಡ್ವಾನ್ಸಡ್ ತರಬೇತಿ ಶಿಬಿರವನ್ನೂ ಇದೇ ಅವಧಿಯಲ್ಲಿ (ಜ.6ರಿಂದ 11ರವರೆಗೆ) ಆಯೋಜಿಸಲಾಗಿದ್ದು, ಇದರಲ್ಲಿ ವಿದೇಶದ ವಿವಿದೆಡೆಗಳಿಂದ ಬರುವ 55 ಕೋಚ್‌ಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಎರಡೂ ತರಬೇತಿ ಶಿಬಿರಗಳ ಉದ್ಘಾಟನಾ ಸಮಾರಂಭ ಜ.6ರ ಸಂಜೆ 5:00 ಗಂಟೆಗೆ ಎಂಐಟಿಯ ಬಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ನಡೆಯಲಿದೆ. ಸ್ಪೆಷಲ್ ಒಲಿಂಪಿಕ್ಸ್ ಭಾರತ್‌ನ ರಾಷ್ಟ್ರೀಯ ಕ್ರೀಡಾ ನಿರ್ದೇಶಕ ವಿಕ್ಟರ್ ವಾಝ್ ಹಾಗೂ ಉಡುಪಿಯ ಶಾಸಕ ಕೆ.ರಘುಪತಿ ಭಟ್ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ ಎಂದವರು ತಿಳಿಸಿದರು.

ಸ್ಪೆಷಲ್ ಒಲಿಂಪಿಕ್ಸ್ ಭಾರತ್, ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಆಗಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 14 ಲಕ್ಷಕ್ಕೂ ಅಧಿಕ ವಿಶೇಷ ಅಥ್ಲೀಟ್‌ಗಳು ಇದರ ಸದಸ್ಯರಾಗಿ ನೊಂದಾಯಿತರಾಗಿದ್ದಾರೆ. ಸ್ಪೆಷಲ್ ಒಲಿಂಪಿಕ್ಸ್‌ನ ಅಂತಾರಾಷ್ಟ್ರೀಯ ಸಂಘಟನೆಯ ಮಾನ್ಯತೆಯೂ ಇದಕ್ಕಿದ್ದು, ಇದು ದೇಶದ ಎಲ್ಲಾ ವಿಶೇಷ ಮಕ್ಕಳ ಕ್ರೀಡಾ ತರಬೇತಿ, ಕ್ರೀಡಾಕೂಟಗಳನ್ನು ಏರ್ಪಡಿಸುತ್ತಿದೆ.

ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುವ ಒಟ್ಟು 281 ಮಂದಿ ಪುರುಷ ವಿಶೇಷ ಮಕ್ಕಳು, ಅವರ ಕೋಚ್‌ಗಳು, ಅಧಿಕಾರಿಗಳಿಗೆ ಏಳು ದಿನಗಳ ಕಾಲ ಉಚಿತ ಊಟ ಮತ್ತು ವಸತಿ ಸೌಕರ್ಯವನ್ನು ಎಂಐಟಿ ಹಾಗೂ ಮಾಹೆ ವತಿಯಿಂದ ನೀಡಲಾಗುತ್ತಿದೆ ಎಂದೂ ಡಾ.ಬಲ್ಲಾಳ್ ಹೇಳಿದರು.
ಮುಂದಿನ ವರ್ಷ ನಡೆಯುವ ವಿಶೇಷ ಒಲಿಂಪಿಕ್ಸ್‌ಗೆ ಭಾರತದ ಫ್ಲೋರ್‌ಬಾಲ್ ತಂಡವನ್ನು ಆಯ್ಕೆ ಮಾಡಲು ನಡೆಯುವ ಮೊದಲ ಹಂತದ ತರಬೇತಿ ಶಿಬಿರ ಇದಾಗಿದ್ದು, ಇದರಲ್ಲಿ ಮುಂದಿನ ಹಂತದ ಶಿಬಿರಕ್ಕೆ ಅಥ್ಲೀ್ಗಳನ್ನು ಆಯ್ಕೆ ಮಾಡಲಾಗುತ್ತದೆ.

2020ರ ಅಂತಾರಾಷ್ಟ್ರೀಯ ಯುನಿಫೈಡ್ ಪುರುಷರ ಕ್ರಿಕೆಟ್ ಚಾಂಪಿಯನ್ ಷಿಪ್ ಮುಂದಿನ ಮಾರ್ಚ್ 20ರಿಂದ 23ರವರೆಗೆ ಮೈಸೂರಿನಲ್ಲಿ ನಡೆಯಲಿದ್ದು, ಇದರಲ್ಲಿ ಏಷ್ಯ ಫೆಸಿಪಿಕ್ ವಲಯದ ಒಟ್ಟು ಆರು ದೇಶಗಳು ಪಾಲ್ಗೊಳ್ಳಲಿವೆ. ಇದಕ್ಕಾಗಿ ಕೋಚ್‌ಗಳ ಆಯ್ಕೆ ಮಣಿಪಾಲ ಶಿಬಿರದ ಬಳಿಕ ನಡೆಯಲಿದೆ. ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕದ ಉಪಾಧ್ಯಕ್ಷರಾಗಿರುವ ಮಣಿಪಾಲ ಮಾಹೆಯ ಜೈ ವಿಸಲ್ ಅವರು ಈ ತರಬೇತಿ ಶಿಬಿರದ ಸಂಘಟಕರಾಗಿದ್ದಾರೆ.

ಮಾಹೆಯ ಆಶ್ರಯದಲ್ಲಿ ವಿಶೇಷ ಮಕ್ಕಳ ವಸತಿ ಹಾಗೂ ಉದ್ಯೋಗ ತರಬೇತಿ ಮತ್ತು ಪುನರ್ವಸತಿ ಕೇಂದ್ರ ‘ಆಸರೆ’ ಕಳೆದ ಒಂದು ದಶಕದಿಂದ ಮಣಿಪಾಲದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ಈ ಕೇಂದ್ರದಲ್ಲಿ 40ಕ್ಕೂ ಅಧಿಕ ವಿಶೇಷ ಮಕ್ಕಳಿದ್ದಾರೆ. ಇದೇ ಕೇಂದ್ರದ ಅರ್ಚನಾ ಜೈವಿಠಲ್, ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಈಜು ಸ್ಪರ್ಧೆಯಲ್ಲಿ ಪ್ರತಿನಿಧಿಸಿ ಪದಕವನ್ನು ಜಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್, ರಿಜಿಸ್ಟ್ರಾರ್ ಡಾ.ನಾರಾಯಣ್ ಸಭಾಹಿತ್, ಡಾ.ಪಿ.ಎಲ್.ಎನ್.ರಾವ್, ಡಾ.ವಿನೋದ್ ನಾಯಕ್, ಶೋಭಾ ನಾಯಕ್, ಸ್ಪೆಷಲ್ ಒಲಿಂಪಕ್ಸ್ ಭಾರತ್‌ನ ಪ್ರಾದೇಶಿಕ ಮುಖ್ಯಸ್ಥೆ ಮೀರಾ ಸತೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News