×
Ad

ಸಿಎಎ, ಎನ್‌ ಆರ್ ಸಿ, ಎನ್‌ಪಿಆರ್ ಕಾಯ್ದೆ ವಿರೋಧಿ ಬೃಹತ್ ಸಮಾವೇಶ ತಾತ್ಕಾಲಿಕ ರದ್ದು

Update: 2020-01-02 19:28 IST

ಮಂಗಳೂರು, ಜ.2: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ ಆರ್ ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಯಂತಹ ಸಂವಿಧಾನ ವಿರೋಧಿ ನೀತಿಗಳ ವಿರುದ್ಧ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸಲು ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಜ.4ರಂದು ನಗರದಲ್ಲಿ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ದ.ಕ. ಜಿಲ್ಲೆಯ 28 ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದ ಸಮಾವೇಶಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅನುಮತಿ ನಿರಾಕರಿಸಿದ್ದಾರೆ. ಈ ಬಗ್ಗೆ ಸಂಘಟನೆಗಳ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಹೇಳಿದರು.

‘ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೂಚನೆ ಮೇರೆಗೆ ಸಮಾವೇಶವನ್ನು ನಗರದ ನೆಹರೂ ಮೈದಾನದಲ್ಲಿ ಆಯೋಜನೆಗೆ ಅವಕಾಶವಿಲ್ಲ. ಮೈದಾನ ಹೊರತುಪಡಿಸಿ ಬೇರೆಡೆ ಆಯೋಜಿಸಲು ಪೊಲೀಸ್ ಆಯುಕ್ತರು ಸೂಚಿಸಿದ್ದರು. ಇದಕ್ಕೆ ನಮ್ಮ ಸಹಮತವಿಲ್ಲ. ತಡವಾದರೂ ಚಿಂತೆಯಿಲ್ಲ. ನೆಹರೂ ಮೈದಾನದಲ್ಲೇ ಸಮಾವೇಶ ಆಯೋಜಿಸಲಿದ್ದೇವೆ’ ಎಂದು ಮಸೂದ್ ಸ್ಪಷ್ಟಪಡಿಸಿದರು.

‘ಗೋಲಿಬಾರ್‌ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ಮತ್ತು ನೌಶೀನ್ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಇದಾದ ಎರಡು ದಿನಗಳ ಬಳಿಕ ಪರಿಹಾರ ರದ್ದುಗೊಳಿಸಿರುವ ನಿರ್ಧಾರ ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದಲೇ ಹೇಳಿಕೆ ನೀಡಬೇಕು. ತೀರ್ಮಾನ ಕೈಗೊಳ್ಳುವ ಮೊದಲೇ ಆಲೋಚಿಸಬೇಕಿತ್ತು. ಪೊಲೀಸ್ ಇಲಾಖೆಯ ವರದಿ ತರಿಸಿಕೊಂಡೇ ಮುಂದಿನ ಪ್ರಕ್ರಿಯೆ ನಡೆಸಬೇಕಿತ್ತು. ಏಕಾಏಕಿ ಪರಿಹಾರ ಘೋಷಿಸಿ ವಾಪಸ್ ಪಡೆಯುವುದು ಮುಖ್ಯಮಂತ್ರಿ ಸ್ಥಾನಕ್ಕೆ ಭೂಷಣವಲ್ಲ ಎಂದು ಟೀಕಿಸಿದರು.

ಜನಪ್ರತಿನಿಧಿಗಳು ಪರಿಹಾರ ಧನ ಘೋಷಿಸಿ ವಾಪಸ್ ಪಡೆಯುವುದು ರಾಜಕೀಯ ನೀತಿಗೆ ವಿರುದ್ಧವಾದುದು. ಮುಸ್ಲಿಂ ಸೆಂಟಲ್ ಕಮಿಟಿ ಇದನ್ನು ಖಂಡಿಸುತ್ತದೆ. ಇದಕ್ಕೆ ಎಲ್ಲ ಮುಸ್ಲಿಂ ಸಂಘಟನೆಗಳ ಸಹಮತವಿದೆ ಎಂದೂ ಅವರು ಹೇಳಿದರು.

‘ನೆಹರೂ ಮೈದಾನದಲ್ಲಿ ಸಮಾವೇಶ ಖಚಿತವಾಗಿ ನಡೆಯಲಿದೆ. ಇದನ್ನು ಯಾರ ಕೈಯಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಕಾನೂನನ್ನು ಕೈಗೆತ್ತಿಕೊಳ್ಳದೇ ಶಾಂತಿಯುತವಾಗಿ ಸಮಾವೇಶ ನಡೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದರೂ ಅನುಮತಿ ನೀಡಿಲ್ಲ. ಆದರೂ ಪೊಲೀಸ್ ಆಯುಕ್ತರ ಮಾತಿಗೆ ಗೌರವ ನೀಡಲಿದ್ದೇವೆ. ಇಂದಿನಿಂದ 15 ದಿನಗಳ ವರೆಗೆ ಕಾಯಲಿದ್ದೇವೆ. ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಹೇಳಿದರು.

ಅನುಮತಿ ನಿರಾಕರಣೆ: ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹೀಂ ಕೊಡಿಜಾಲ್ ಮಾತನಾಡಿ, ನಗರದ ಕ್ಲಾಕ್ ಟವರ್ ಸಮೀಪ ಮಂಗಳೂರು ಮಹಾನಗರ ಪಾಲಿಕೆಯಿಂದ ಬೃಹತ್ ಗುಂಡಿ ತೆರೆದು ಕಾಮಗಾರಿ ಪ್ರಗತಿಯಲ್ಲಿದೆ. ನೆಹರೂ ಮೈದಾನದಲ್ಲಿ ಸಮಾವೇಶ ಹಮ್ಮಿಕೊಂಡಲ್ಲಿ, ಸಮಾವೇಶದಲ್ಲಿ ಭಾಗವಹಿಸುವವರ ವಾಹನಗಳ ಪಾರ್ಕಿಂಗ್, ಸಂಚಾರ ಅಸ್ತವ್ತಸ್ಥ ಸೇರಿದಂತೆ ಹಲವು ಸಮಸ್ಯೆಗಳು ಬಿಡಗಾಯಿಸುವ ಸಾಧ್ಯತೆ ಇದೆ ಎನ್ನುವ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಿದ್ದೇವೆ ಎಂದು ಪೊಲೀಸ್ ಆಯುಕ್ತರು ಸಬೂಬು ನೀಡಿದ್ದಾರೆ. 15 ದಿನಗಳ ನಂತರ ಮತ್ತೆ ಪೊಲೀಸರಿಗೆ ಸಮಾವೇಶ ಆಯೋಜನೆಯ ಅನುಮತಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಹಾಜಿ ವೈ. ಅಬ್ದುಲ್ಲಾ ಕುಂಞಿ, ಹಾಜಿ ಎಸ್.ಎಂ. ರಶೀದ್, ಕಾಶಿಂ ಎಚ್.ಕೆ., ಹಾಜಿ ಮನ್ಸೂರ್ ಅಹ್ಮದ್ ಅಝಾದ್ ಮತ್ತಿತರರು ಉಪಸ್ಥಿತರಿದ್ದರು.

‘2 ಕೋ.ರೂ. ಮೌಲ್ಯದ ಬಾಂಡ್ ನೀಡಲಿದ್ದೇವೆ’
ಸಿಸಿಎ, ಎನ್‌ಸಿಆರ್, ಎನ್‌ಪಿಆರ್ ವಿರೋಧಿಸಿ ನಡೆಯುತ್ತಿದ್ದ ಬೃಹತ್ ಸಮಾವೇಶವು ತಾತ್ಕಾಲಿಕವಾಗಿ ರದ್ದುಗೊಂಡಿದೆ. ಮುಂದಿನ ದಿನಗಳಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಿದ್ದೇವೆ. ಪೊಲೀಸ್ ಆಯುಕ್ತರು ಬಾಂಡ್ ನೀಡಲು ಸೂಚಿಸಿದ್ದಾರೆ. ಶಾಂತಿ-ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಎರಡು ಕೋಟಿ ರೂ. ಮೌಲ್ಯದ ಬಾಂಡ್ ನೀಡಲಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ 28 ಸಂಘಟನೆಗಳಿಂದ ಈ ಬಾಂಡ್ ನೀಡಲಿದ್ದೇವೆ ಎಂದು ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ ಮಸೂದ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News