ಧರ್ಮಗಳ ನಡುವೆ ಗೋಡೆ ಕಟ್ಟುವವರು ದೇಶ ದ್ರೋಹಿಗಳು, ಸೇತುವೆ ಕಟ್ಟುವವರು ದೇಶಪ್ರೇಮಿಗಳು: ನಿಕೇತ್ ರಾಜ್ ಮೌರ್ಯ

Update: 2020-01-02 14:31 GMT

ಸುಳ್ಯ,ಜ.2:ಇಡೀ ಜಗತ್ತಿನಲ್ಲೇ ನಾಯಕನಿಲ್ಲದೆ, ವ್ಯಕ್ತಿ ಮುಖವಿಲ್ಲದೆ ರಾಷ್ಟ್ರ ಧ್ವಜದ ಅಡಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಂವಿಧಾನದ ಪಥದಲ್ಲೇ ಇಂತಹ ಪ್ರತಿಭಟನೆ ನಡೆಸಿ ಫಲ ಪಡೆಯೋಣ ಎಂದು ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಹೇಳಿದರು.

ಮುಸ್ಲಿಂ ಹಿತರಕ್ಷಣಾ ವೇದಿಕೆ ಸುಳ್ಯ ತಾಲೂಕು ನೇತೃತ್ವದಲ್ಲಿ ಕೇಂದ್ರದ ಬಿಜೆಪಿ ಸರಕಾರ ಜಾರಿಗೆ ತರಲು ಹೊರಟಿರುವ ಎನ್.ಆರ್.ಸಿ ಮತ್ತು ಸಿಎಎ ವಿರುದ್ದ ಸುಳ್ಯದ ಗಾಂಧಿನಗರದಲ್ಲಿ ಗುರುವಾರ ನಡೆದ ಬೃಹತ್ ಪ್ರತಿಭಟನೆ ಮತ್ತು ಜನಂದೋಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಧರ್ಮಗಳ ನಡುವೆ ಗೋಡೆ ಕಟ್ಟುವವರು ದೇಶ ದ್ರೋಹಿಗಳು, ಸೇತುವೆ ಕಟ್ಟುವವರು ದೇಶಪ್ರೇಮಿಗಳು. ಸಮಾಜದಲ್ಲಿ ವಿಷ ಬೀಜ ಬಿತ್ತುವವರ ಷಡ್ಯಂತ್ರ ಅರಿಯಬೇಕು ಎಂದು ಹೇಳಿದರು.

ಬೆಂಗಳೂರಿನ ಸಾಮಾಜಿಕ ಹೋರಾಟಗಾರ, ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಮಾತನಾಡಿ, ನಾಗರಿಕರು ನೀಡಿದ ವಿಡೀಯೋ ಮತ್ತು ಮಾಧ್ಯಮಗಳು ನೀಡಿದ ತೀರ್ಪಿನ ಆಧಾರದಲ್ಲಿ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪೊಲೀಸ್ ಇಲಾಖೆಯ ಪ್ರವೃತ್ತಿ ಕ್ರೌರ್ಯತನದ್ದು. ಈ ಎರಡೂ ಕಾಯಿದೆಗಳು ಮುಠಾಳತನದ್ದು. ದೇಶದ್ರೋಹಿಗಳು ಮಾತ್ರ ಇಂತಹ ಕಾನೂನು ತರಲು ಸಾಧ್ಯ ಎಂದು ಹೇಳಿದರು. 

ಮುಸ್ಲಿಂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ ಅಧ್ಯಕ್ಷತೆಯನ್ನು ವಹಿಸಿದರು. ದುಗಲಡ್ಕ ಮಸೀದಿ ಧರ್ಮಗುರು ಝೈನುಲ್ ಅಬೀದಿನ್ ತಂಙಳ್ ದುವಾಃ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ವೆಂಕಪ್ಪ ಗೌಡ, ಭರತ್ ಮುಂಡೋಡಿ, ಎಸ್‍ಡಿಪಿಐ ಜಿಲ್ಲಾ ಮುಖಂಡ ಇಕ್ಬಾಲ್ ಬೆಳ್ಳಾರೆ, ಕಾರ್ಮಿಕ ಸಂಘಟನೆ ಮುಖಂಡರಾದ ಕೆ.ಪಿ.ಜಾನಿ, ಜಿ.ಪಂ.ಮಾಜಿ ಸದಸ್ಯ ಧನಂಜಯ ಅಡ್ಪಂಗಾಯ, ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಎಡಮಲೆ, ಬೆಳ್ಳಾರೆ ಮಸೀದಿ ಧರ್ಮಗುರು ಯೂನುಸ್ ಸಖಾಫಿ, ಗಾಂಧಿನಗರ ಮಸೀದಿ ಧರ್ಮಗುರು ಅಶ್ರಫ್ ಶಾಮಿಲಾ ಸಖಾಫಿ, ನೂರುದ್ದೀನ್ ಸಾಲ್ಮರ ಮೊದಲಾದವರು ಮಾತನಾಡಿದರು.

ವೇದಿಕೆಯಲ್ಲಿ ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ಸಿಪಿಎಂ ಮುಖಂಡ ರಾಬರ್ಟ್ ಡಿಸೋಜ,, ಕೆಪಿಸಿಸಿ ಸದಸ್ಯ ಡಾ.ರಘು, ನ್ಯಾಯವಾದಿ ಕುಂಞಿಪಳ್ಳಿ, ಸಿದ್ದಿಕ್ ಕೊಕ್ಕೋ, ಮಹಮ್ಮದ್ ಕುಂಞಿ ಗೂನಡ್ಕ, ಜಿ.ಕೆ.ಹಮೀದ್, ಮಜೀದ್ ಅಡ್ಕಾರ್, ಅಝೀಝ್ ಬುಶ್ರಾ,  ಇಕ್ಬಾಲ್ ಎಲಿಮಲೆ, ಮಹಮ್ಮದ್ ಫವಾಝ್, ಅಬ್ದುಲ್ ಕಲಾಂ, ಹರಿಪ್ರಸಾದ್ ಕೆ.ಕೆ, ನಗರ ಪಂಚಾಯಿತಿ ಸದಸ್ಯರಾದ ಶರೀಫ್ ಕಂಠಿ, ಕೆ.ಎಸ್.ಉಮ್ಮರ್, ರಿಯಾಝ್ ಕಟ್ಟೆಕ್ಕಾರ್, ಕೆ.ಎಂ. ಮುಸ್ತಫ, ಅದಂಕುಂಞಿ ಕಮ್ಮಾಡಿ, ತಾ.ಪಂ. ಸದಸ್ಯ ಅಬ್ದುಲ್ ಗಫೂರ್ ಮೊದಲಾದವರು ಉಪಸ್ಥಿತರಿದ್ದರು.

ತಾಲೂಕಿನಾದ್ಯಂತ ಅಂಗಡಿ-ಮುಂಗಟ್ಟು ಬಂದ್: ಮುಸ್ಲಿಂ ಹಿತರಕ್ಷಣಾ ವೇದಿಕೆ ಸಂಘಟಕರು ಪ್ರತಿಭಟನೆಗೆ ಕರೆಕೊಟ್ಟು, ಮುಸ್ಲಿಂ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಕರೆ ನೀಡಿದ ಹಿನ್ನಲೆಯಲ್ಲಿ ಸುಳ್ಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಅಂಗಡಿಗಳನ್ನು  ಬೆಳಗ್ಗಿನಿಂದಲೇ ಬಂದ್ ಮಾಡಿ, ಸಂಜೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News