ಮಹಿಳೆಗೆ ಪೆಟ್ಟು ಕೊಟ್ಟಿದ್ದಕ್ಕಾಗಿ ಕ್ಷಮೆ ಕೋರಿದ ಪೋಪ್ ಫ್ರಾನ್ಸಿಸ್
ವ್ಯಾಟಿಕನ್ ಸಿಟಿ, ಜ. 2: ಹೊಸ ವರ್ಷದ ಮುನ್ನಾ ದಿನದಂದು ಜನರನ್ನು ಅಭಿನಂದಿಸುತ್ತಿದ್ದ ವೇಳೆ, ತನ್ನ ಕೈಹಿಡಿದ ಭಕ್ತ ಮಹಿಳೆಯೊಬ್ಬರ ಕೈಗೆ ಪೆಟ್ಟು ಕೊಟ್ಟಿರುವುದಕ್ಕಾಗಿ ಪೋಪ್ ಫ್ರಾನ್ಸಿಸ್ ಬುಧವಾರ ಕ್ಷಮೆ ಕೋರಿದ್ದಾರೆ.
ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೆರೆದ ಧರ್ಮಾನುಯಾಯಿಗಳ ನಡುವೆ ಪೋಪ್ ನಡೆಯುತ್ತಿದ್ದಾಗ ಅಭಿಮಾನಿ ಮಹಿಳೆಯೊಬ್ಬರು ಅವರ ಕೈ ಹಿಡಿದುಕೊಂಡರು. ಆಗ ಮುಖದಲ್ಲಿ ಅಸಹನೆಯನ್ನು ತೋರ್ಪಡಿಸಿ ಮಹಿಳೆಯ ಕೈಗೆ ಪೆಟ್ಟು ಕೊಟ್ಟು ತನ್ನ ಕೈ ಬಿಡಿಸಿ ಪೋಪ್ ಮುಂದೆ ಸಾಗುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಬಳಿಕ ಪೋಪ್ ಅದಕ್ಕಾಗಿ ವೈಯಕ್ತಿಕ ಕ್ಷಮೆ ಕೋರಿದ್ದಾರೆ.
‘‘ನಾವು ಹಲವು ಸಂದರ್ಭಗಳಲ್ಲಿ ತಾಳ್ಮೆ ಕಳೆದುಕೊಳ್ಳುತ್ತೇವೆ’’ ಎಂದು 83 ವರ್ಷದ ಫ್ರಾನ್ಸಿಸ್ ತಪ್ಪೊಪ್ಪಿಕೊಂಡಿದ್ದಾರೆ.
‘‘ನನಗೂ ಹಾಗೆ ಆಯಿತು. ನಿನ್ನೆ ನೀಡಿದ ಕೆಟ್ಟ ಉದಾಹರಣೆಗಾಗಿ ನಾನು ಕ್ಷಮೆ ಕೋರುತ್ತೇನೆ’’ ಕೆಥೋಲಿಕ್ ಚರ್ಚ್‌ನ ಮುಖ್ಯಸ್ಥರು ವ್ಯಾಟಿಕನ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವ ಮುನ್ನ ಹೇಳಿದರು.
ಸೇಂಟ್ ಪೀಟರ್ ಚೌಕದಲ್ಲಿ ನೇಟಿವಿಟಿ ದೃಶ್ಯದ ಮೊದಲು ಪೋಪ್ ಫ್ರಾನ್ಸಿಸ್ ಮಕ್ಕಳನ್ನು ಅಭಿನಂದಿಸಿದರು. ಅಲ್ಲಿಂದ ಹೊರಟು ನಿಂತಾಗ ಮಹಿಳೆಯೊಬ್ಬರು ಜೋರಾಗಿ ಏನೋ ಹೇಳಿ ಪೋಪ್‌ರ ಕೈಯನ್ನು ಎಳೆದರು. ಆಗ ಪೋಪ್ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದರು.
ಆಗ ಪೋಪ್ ಮುಖದಲ್ಲಿ ಅಸಹನೆ ಕಂಡುಬಂತು. ಮಹಿಳೆಯ ಕೈಯನ್ನು ಬಿಡಿಸಿಕೊಂಡು, ಅವರ ಕೈಗೆ ಎರಡು ಪೆಟ್ಟು ಕೊಟ್ಟು ಪೋಪ್ ಮುಂದೆ ಸಾಗಿದರು. ಬಳಿಕ ಮುಂದೆ ಮಕ್ಕಳ ಗುಂಪೊಂದನ್ನು ಭೇಟಿ ಮಾಡಿದಾಗ ಶಾಂತರಾದರು.