48 ಗಂಟೆಗಳಲ್ಲಿ ಕರಾವಳಿ ಪಟ್ಟಣಗಳನ್ನು ತೊರೆಯಲು ಪ್ರವಾಸಿಗರಿಗೆ ಸೂಚನೆ

Update: 2020-01-02 15:47 GMT
ಫೈಲ್ ಚಿತ್ರ

ಸಿಡ್ನಿ (ಆಸ್ಟ್ರೇಲಿಯ), ಜ. 2: ವಾರಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ಉಷ್ಣ ಮಾರುತ ಬೀಸುವ ನಿರೀಕ್ಷೆಯಿದ್ದು, ಕಾಡ್ಗಿಚ್ಚು ಪೀಡಿತ ಕರಾವಳಿ ಪಟ್ಟಣಗಳಲ್ಲಿರುವ ಎಲ್ಲ ಪ್ರವಾಸಿಗರು ಅಲ್ಲಿಂದ ಹೊರಹೋಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ತಾವಿರುವ ಸ್ಥಳಗಳಿಂದ ತೆರಳಲು ಪ್ರವಾಸಿಗರಿಗೆ 48 ಗಂಟೆಗಳ ಅವಧಿಯನ್ನು ನೀಡಲಾಗಿದೆ.

ಹೊಸ ವರ್ಷದ ಮುನ್ನಾ ದಿನದಂದು ಭಯಾನಕ ಕಾಡ್ಗಿಚ್ಚು ಆಸ್ಟ್ರೇಲಿಯದ ಆಗ್ನೇಯ ಭಾಗವನ್ನು ಆವರಿಸಿದ್ದು ಕನಿಷ್ಠ 8 ಮಂದಿಯನ್ನು ಆಹುತಿ ಪಡೆದಿದೆ. ಕರಾವಳಿ ಪಟ್ಟಣಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದಾರೆ.

ನ್ಯೂಸೌತ್‌ವೇಲ್ಸ್ ರಾಜ್ಯದ ಮನೋಹರ ಕರಾವಳಿಯುದ್ದಕ್ಕೂ ಇರುವ ಬೇಟ್‌ಮನ್ಸ್ ಬೇ ಪ್ರವಾಸಿ ತಾಣದಿಂದ ನೆರೆಯ ವಿಕ್ಟೋರಿಯ ರಾಜ್ಯದವರೆಗಿನ ಸುಮಾರು 200 ಕಿ.ಮೀ. ವ್ಯಾಪ್ತಿಯು ‘ಪ್ರವಾಸಿ ಮುಕ್ತ ವಲಯ’ವಾಗಿದೆ ಎಂದು ನ್ಯೂಸೌತ್‌ವೇಲ್ಸ್ ಗ್ರಾಮೀಣ ಅಗ್ನಿಶಾಮಕ ಇಲಾಖೆ ಗುರುವಾರ ಬೆಳಗ್ಗೆ ಘೋಷಿಸಿದೆ.

ಆಸ್ಟ್ರೇಲಿಯದ ಅತ್ಯಂತ ವಿನಾಶಕಾರಿ ಕಾಡ್ಗಿಚ್ಚುಗಳ ಪೈಕಿ ಒಂದಾಗಿರುವ ಈ ಕಾಡ್ಗಿಚ್ಚು ಋತುವಿನಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಆದರೆ, ಈ ಸಂಖ್ಯೆ ನಾಟಕೀಯವಾಗಿ ಹೆಚ್ಚಬಹುದು ಎಂಬ ಭೀತಿಗಳಿವೆ. ವಿಕ್ಟೋರಿಯ ರಾಜ್ಯದಲ್ಲಿ 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಡ್ಗಿಚ್ಚು ಆವರಿಸಿರುವ ಪ್ರದೇಶವನ್ನು ಶನಿವಾರದ ಮುನ್ನ ತೊರೆಯುವಂತೆ ಪ್ರವಾಸಿಗರಿಗೆ ಸೂಚಿಸಲಾಗಿದೆ. ಶನಿವಾರದ ವೇಳೆಗೆ ಇನ್ನೊಂದು ಉಷ್ಣ ಮಾರುತ ದೇಶಾದ್ಯಂತ ಬೀಸುವ ಸಾಧ್ಯತೆಯಿದೆ. ಅಂದು ಉಷ್ಣತೆಯು 40 ಡಿಗ್ರಿ ಸೆಲ್ಸಿಯಸ್ ದಾಟಲಿದ್ದು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.

ನ್ಯೂಝಿಲ್ಯಾಂಡ್ ಹಿಮನದಿಗಳ ಬಣ್ಣ ಬದಲಿಸಿದ ಕಾಡ್ಗಿಚ್ಚು ಹೊಗೆ

ವೆಲಿಂಗ್ಟನ್ (ನ್ಯೂಝಿಲ್ಯಾಂಡ್) ಆಸ್ಟ್ರೇಲಿಯದ ಕಾಡ್ಗಿಚ್ಚು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ನ್ಯೂಝಿಲ್ಯಾಂಡ್‌ನ ಹಿಮನದಿಗಳ ಮೇಲೆಯೂ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಬಿಳಿ ಬಣ್ಣವನ್ನು ಹೊಂದಿರುವ ನ್ಯೂಝಿಲ್ಯಾಂಡ್‌ನ ಹಿಮನದಿಗಳು ನಸುಗಂದು ಬಣ್ಣಕ್ಕೆ ತಿರುಗಿವೆ ಎಂದು ಸಾಮಾಜಿಕ ಮಾಧ್ಯಮಗಳ ಸಂದೇಶಗಳು ಹೇಳಿವೆ.

ಘಾಟು ವಾಸನೆಯ ಹೊಗೆಯು ನ್ಯೂಝಿಲ್ಯಾಂಡ್‌ನಲ್ಲಿ ಬುಧವಾರ ಮೊದಲ ಬಾರಿ ಕಂಡುಬಂದಿದೆ. ಬುಧವಾರ ಹಲವು ಪ್ರದೇಶಗಳಲ್ಲಿ ಸೂರ್ಯ, ಹೊಗೆಯ ದಪ್ಪವನ್ನು ಆಧರಿಸಿ ಕೆಂಪು ಅಥವಾ ಚಿನ್ನದ ಬಣ್ಣದಲ್ಲಿ ಗೋಚರಿಸಿದೆ.

‘‘ಸುಮಾರು 2,000 ಕಿ.ಮೀ. ಉದ್ದದ ತಾಸ್ಮಾನ್ ಸಮುದ್ರವನ್ನು ದಾಟಿ ಬಂದ ಕಾಡ್ಗಿಚ್ಚಿನ ಹೊಗೆಯನ್ನು ಸ್ಪಷ್ಟವಾಗಿ ನೋಡಬಹುದಾಗಿದೆ’’ ಎಂದು ನ್ಯೂಝಿಲ್ಯಾಂಡ್‌ನ ಅಧಿಕೃತ ಹವಾಮಾನ ಸಂಸ್ಥೆ ಮೆಟ್‌ಸರ್ವಿಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News