ಕೋಮು ಪ್ರಚೋದನೆ ಸಂದೇಶ ರವಾನೆ ಆರೋಪ: ಓರ್ವನ ಸೆರೆ
Update: 2020-01-02 21:20 IST
ಮಂಗಳೂರು, ಜ.2: ಮಂಗಳೂರು ಗೋಲಿಬಾರ್-ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಸಂದೇಶ ರವಾನಿಸಿದ ಆರೋಪದಲ್ಲಿ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕೋಡಿ ಉಳ್ಳಾಲ ನಿವಾಸಿ ಅಬೂಬಕರ್ ಸಿದ್ದೀಕ್ (48) ಬಂಧಿತ ಆರೋಪಿ.
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದ ಹಲವರ ವಿರುದ್ಧ ಮಂಗಳೂರು ಪೊಲೀಸರು ಈಗಾಗಲೇ ನೋಟಿಸ್ ನೀಡಿ, ಎಫ್‌ಐಆರ್ ದಾಖಲು ಮಾಡಿ ಬಂಧನ ಕ್ರಮ ಕೈಗೊಂಡಿದ್ದಾರೆ.
ಡಿ.30ರಂದು ಪಾಂಡೇಶ್ವರದ ವ್ಯಕ್ತಿಯನ್ನು ಬಂಧಿಸಿ, ಕಾರಾಗೃಹಕ್ಕೆ ಕಳುಹಿಸಲಾಗಿದೆ. ಈ ಮೂಲಕ ಪ್ರಚೋದನಕಾರಿ ಸಂದೇಶ ರವಾನಿಸಿದ ಆರೋಪದಲ್ಲಿ ಇಲ್ಲಿಯವರೆಗೆ ಇಬ್ಬರನ್ನು ಬಂಧಿಸಿದಂತಾಗಿದೆ. ಬಂಧಿತ ಆರೋಪಿ ಅಬೂಬಕರ್ ಸಿದ್ದೀಕ್ ವಿರುದ್ಧ ಬಂದರ್‌ನ ಸೈಬರ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಡಿ.29ರಂದು ನೋಟಿಸ್ ನೀಡಲಾಗಿತ್ತು.
ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.