ಮಂಗಳೂರು ಮಾರುಕಟ್ಟೆಗೆ ನುಗ್ಗಿ ದಾಂಧಲೆ, ಕಲ್ಲು ತೂರಾಟಗೈದ ದುಷ್ಕರ್ಮಿಗಳು: ಸಿಸಿಟಿವಿಯಲ್ಲಿ ಸ್ಫೋಟಕ ಸತ್ಯ

Update: 2020-01-02 18:01 GMT

►ಹೊಸ ವಿಡಿಯೋ ವೈರಲ್

ಮಂಗಳೂರು: ಇತ್ತೀಚೆಗೆ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭ ಮಂಗಳೂರು ಪೊಲೀಸರು ನಡೆಸಿದ ಗೋಲಿಬಾರ್ ಮತ್ತು ಲಾಠಿ ಚಾರ್ಜ್ ಭಾರೀ ವಿವಾದ ಸೃಷ್ಟಿಸಿದ್ದು, ದೇಶಾದ್ಯಂತ ಟೀಕೆಗೊಳಗಾಗಿದೆ. ಈ ನಡುವೆ ತಮ್ಮ ಸಮ್ಮುಖದಲ್ಲೇ ಕೆಲ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸುತ್ತಿದ್ದರೂ ಪೊಲೀಸರು ಸುಮ್ಮನಿದ್ದರು ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದೀಗ ಈ ಆರೋಪಗಳಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ವೈರಲ್ ಆಗಿದೆ.

ಮಂಗಳೂರು ಮಾರುಕಟ್ಟೆಗೆ ನುಗ್ಗುವ ದುಷ್ಕರ್ಮಿಗಳ ತಂಡವೊಂದು ಇಡೀ ಮಾರುಕಟ್ಟೆಯಲ್ಲಿ ದಾಂಧಲೆ ನಡೆಸಿ, ಆಸ್ತಿಪಾಸ್ತಿ ಹಾನಿಗೈಯುತ್ತಿರುವ ವಿಡಿಯೋ ಇದಾಗಿದೆ. ಈ ದೃಶ್ಯಗಳು ಮಾರುಕಟ್ಟೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಕಾಣುವಂತೆ ಸ್ಟೇಟ್ ಬ್ಯಾಂಕ್ ಬಳಿ ಪ್ರತಿಭಟನೆ ನಡೆಯುತ್ತಿದ್ದರೂ ಮಾರ್ಕೆಟ್ ನೊಳಗಡೆ ಯಾವುದೇ ಗೊಂದಲ ಇರುವುದಿಲ್ಲ. ಎಲ್ಲವೂ ಸಾಮಾನ್ಯವಾಗಿರುತ್ತದೆ. ಆದರೆ ಈ ಸಂದರ್ಭ ದುಷ್ಕರ್ಮಿಗಳ ಗುಂಪೊಂದು ಮಾರುಕಟ್ಟೆಯ ಮೇಲೆ ಕಲ್ಲುತೂರಾಟ ನಡೆಸುತ್ತದೆ. ವ್ಯಾಪಾರಿಗಳು ತಮ್ಮ ರಕ್ಷಣೆಗಾಗಿ ಶಟರ್ ಎಳೆಯುತ್ತಾರೆ. ಆದರೆ ಶಟರ್ ಎತ್ತಿ ಒಳನುಗ್ಗುವ ಗುಂಪು ಮಾರುಕಟ್ಟೆಗೆ ತರಕಾರಿ, ಹಣ್ಣುಹಂಪಲುಗಳನ್ನು ಖರೀದಿಸಲು ಬಂದನ ಸಾಮಾನ್ಯ ಜನರ ಮೇಲೆ, ವ್ಯಾಪಾರಸ್ಥರ ಮೇಲೆ ಕಲ್ಲುತೂರಾಟ ನಡೆಸುತ್ತದೆ. ನಂತರ ಮಾರುಕಟ್ಟೆಯಲ್ಲಿದ್ದ ಹಣ್ಣುಹಂಪಲುಗಳನ್ನು ನೆಲಕ್ಕೆಸೆಯುತ್ತದೆ.

ಇದೇ ದುಷ್ಕರ್ಮಿಗಳ ವಿಡಿಯೋ ಈ ಹಿಂದೆಯೂ ವೈರಲ್: ಪೊಲೀಸ್ ಇಲಾಖೆ ಮಾತ್ರ ಮೌನ

ಮಾರುಕಟ್ಟೆಯ ಮೇಲೆ ದಾಳಿ ನಡೆಸಿದ ಇದೇ ದುಷ್ಕರ್ಮಿಗಳ ತಂಡದ ಇತರ ವಿಡಿಯೋಗಳು ಮಂಗಳೂರು ಹಿಂಸಾಚಾರ ನಡೆದಂದಿನಿಂದ ವೈರಲ್ ಆಗುತ್ತಿವೆ. ಮಂಗಳೂರು ಪೊಲೀಸರು ಕಲ್ಲುತೂರಾಟಗಾರರ ವಿಡಿಯೋಗಳನ್ನು ಪೋಸ್ಟ್ ಮಾಡಿದಾಗ, ಪೊಲೀಸ್ ಕಮಿಷನರ್ ಹರ್ಷ ಅವರು ಮಂಗಳೂರು ಘಟನೆಯ ವಿಡಿಯೋಗಳನ್ನು ಇ ಮೇಲ್ ಮಾಡುವಂತೆ ಹೇಳಿದಾಗ ಹಲವರು ಈ ದುಷ್ಕರ್ಮಿಗಳ ವಿಡಿಯೋ ಪೋಸ್ಟ್ ಮಾಡಿ ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದರು. ಆದರೆ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡ ಮಾಹಿತಿಯಿಲ್ಲ.

ಪೊಲೀಸರ ಮುಂದೆಯೇ ಕಲ್ಲುತೂರಾಟ

ಇದಕ್ಕೂ ಮೊದಲು ವೈರಲ್ ಆಗಿದ್ದ ವಿಡಿಯೋಗಳಲ್ಲಿ ಇದೇ ಗುಂಪು ಪೊಲೀಸರ ಮುಂದೆಯೇ ಕಟ್ಟಡಗಳ ಮೇಲೆ, ಜನರ ಮೇಲೆ ಕಲ್ಲುತೂರಾಟ ನಡೆಸಿತ್ತು. ಪೊಲೀಸರು ಈ ಕಲ್ಲುತೂರಾಟಕ್ಕೆ ಸಾಕ್ಷಿಯಾಗಿದ್ದರೂ ಈ ದುಷ್ಕರ್ಮಿಗಳ ಮೇಲೆ ಲಾಠಿ ಬೀಸಲಿಲ್ಲ. ಇನ್ನೊಂದು ವಿಡಿಯೋದಲ್ಲಿ ಪೊಲೀಸರ ಹಿಂದೆಯೇ ಈ ದುಷ್ಕರ್ಮಿಗಳು ನಡೆದುಕೊಂಡು ಬರುತ್ತಾರೆ ಮತ್ತು ಕಲ್ಲುತೂರಾಟ ನಡೆಸುತ್ತಾರೆ. ಆದರೆ ಪೊಲೀಸರು ಸ್ಥಳದಲ್ಲಿದ್ದರೂ ಏನೂ ಮಾಡುವುದಿಲ್ಲ. ಸ್ಟೇಟ್ ಬ್ಯಾಂಕ್ ಬಳಿ ಪ್ರತಿಭಟನೆ ನಡೆದಾಗ ಬಸ್ ಕಾಯುತ್ತಿದ್ದವರು, ಮಕ್ಕಳನ್ನು ಕಾದು ನಿಂತವರು, ವಿಕಲಚೇತನರು, ವಿದ್ಯಾರ್ಥಿಗಳು, ಕುಟುಂಬದ ಜೊತೆ ಬಂದವರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಪೊಲೀಸರು ಮತ್ತೊಂದೆಡೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸುತ್ತಿದ್ದಾಗ ಕೈಕಟ್ಟಿ ನಿಂತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಇದೀಗ ವೈರಲ್ ಆಗುತ್ತಿರುವ ಮಾರ್ಕೆಟ್ ನಲ್ಲಿ ದಾಂಧಲೆ ದೃಶ್ಯಗಳ ಹಿನ್ನೆಲೆಯಲ್ಲಿ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿ ಖರೀದಿಗಾಗಿ ಬಂದವರ, ವ್ಯಾಪಾರಿಗಳ ಮೇಲೆ ಕಲ್ಲುತೂರಾಟ ನಡೆಸಿ, ಸೊತ್ತು ಹಾನಿಗೈದ ಈ ತಂಡದ ಸದಸ್ಯರನ್ನು ಪೊಲೀಸರು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News