ಅಮೆರಿಕಾಗೆ 'ತೀವ್ರ ಪ್ರತೀಕಾರ'ದ ಎಚ್ಚರಿಕೆ ನೀಡಿದ ಇರಾನ್ ನಾಯಕ ಖಾಮಿನೈ

Update: 2020-01-03 15:13 GMT

ಟೆಹ್ರಾನ್: ಬಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಶುಕ್ರವಾರ  ನಡೆದ ವಾಯುದಾಳಿಗೆ ತೀವ್ರ ಪ್ರತೀಕಾರ ತೀರಿಸಲಾಗುವುದು ಎಂದು ಇರಾನ್ ದೇಶದ ಅಧಿನಾಯಕ ಆಯತೊಲ್ಲಾ ಅಲಿ ಖಾಮಿನೈ ಎಚ್ಚರಿಕೆ ನೀಡಿದ್ದಾರೆ.

ವಾಯುದಾಳಿಯಲ್ಲಿ ಇರಾನ್ ದೇಶದ ಖುದ್ಸ್ ಫೋರ್ಸ್ ಕಮಾಂಡರ್ ಖಾಸಿಂ ಸುಲೈಮಾನಿ ಸಹಿತ ಎಂಟು ಮಂದಿ ಬಲಿಯಾದ ಘಟನೆಯ ಪರಿಣಾಮಗಳನ್ನು ತನ್ನ ಕಡುವೈರಿ ಅಮೆರಿಕಾ  ಎದುರಿಸಬೇಕಾಗಿದೆ ಎಂದು ಇರಾನ್ ಹೇಳಿದೆ.

"ತಮ್ಮ ಕೆಟ್ಟ ಕೈಗಳನ್ನು ಖಾಸಿಂ ಸುಲೈಮಾನಿ ಅವರ ನೆತ್ತರಿನಿಂದ ರಕ್ತಮಯಗೊಳಿಸಿದ ಅಪರಾಧಿಗಳ ವಿರುದ್ಧ ಪ್ರತೀಕಾರ ತೀರಿಸಲಾಗುವುದು ಹಾಗೂ ದೇವರು ಅನುಗ್ರಹಿಸಿದರೆ ನಮ್ಮ ಕಾರ್ಯ ಹಾಗೂ ಹಾದಿಗೆ ಅಡ್ಡಿಯುಂಟಾಗಲಾರದು'' ಎಂದು ಖಾಮಿನೈ ಶಪಥ ಮಾಡಿದ್ದಾರೆ.

ಬಗ್ದಾದ್‍ ನಲ್ಲಿ ಅಮೆರಿಕಾದ ಪಡೆಗಳ ಕ್ಷಿಪಣಿ ದಾಳಿಯಲ್ಲಿ ಖುದ್ಸ್ ಫೋರ್ಸ್ ಕಮಾಂಡರ್ ಮೃತಪಟ್ಟಿದ್ದನ್ನು ರಿವೊಲ್ಯೂಶನರಿ ಗಾರ್ಡ್ಸ್ ದೃಢ ಪಡಿಸಿದೆ.

ಸ್ವತಂತ್ರ ದೇಶಗಳಿಂದ ಅಮೆರಿಕದ ವಿರುದ್ಧ ಪ್ರತೀಕಾರ: ಹಸನ್ ರೂಹಾನಿ ಘೋಷಣೆ

ಇರಾನ್‌ನ ರೆವಲೂಶನರಿ ಗಾರ್ಡ್ಸ್ ಕಮಾಂಡರ್ ಕಾಸಿಮ್ ಸುಲೈಮಾನಿಯ ಹತ್ಯೆಗೆ ಇರಾನ್ ಮತ್ತು ‘ವಲಯದ ಸ್ವತಂತ್ರ ದೇಶಗಳು’ ಅಮೆರಿಕದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುತ್ತವೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.

‘‘ಕ್ರಿಮಿನಲ್ ಅಮೆರಿಕ ನಡೆಸಿದ ಈ ಭೀಕರ ಕೃತ್ಯಕ್ಕಾಗಿ ಇರಾನ್ ಮತ್ತು ವಲಯದ ಸ್ವತಂತ್ರ ದೇಶಗಳು ಅಮೆರಿಕದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ’’ ಎಂದು ಮಧ್ಯಪ್ರಾಚ್ಯದಲ್ಲಿರುವ ಇರಾನ್‌ನ ಮಿತ್ರ ದೇಶಗಳನ್ನು ಪ್ರಸ್ತಾಪಿಸುತ್ತಾ ಅವರು ಹೇಳಿದರು.

‘‘ಆಕ್ರಮಣಶೀಲ ಮತ್ತು ಕ್ರಿಮಿನಲ್ ಅಮೆರಿಕದಿಂದ ಸುಲೈಮಾನಿಯ ಹತ್ಯೆಯು ಇರಾನ್ ದೇಶ ಮತ್ತು ವಲಯದ ಎಲ್ಲ ದೇಶಗಳ ಹೃದಯಗಳನ್ನು ನುಚ್ಚುನೂರು ಮಾಡಿದೆ’’ ಎಂದು ಇರಾನ್ ಸರಕಾರದ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News