ಔಟ್ ನೀಡಿದ ಅಂಪೈರ್‌ರನ್ನು ನಿಂದಿಸಿದ ಶುಭಮನ್ ಗಿಲ್?
ಹೊಸದಿಲ್ಲಿ, ಜ.3: ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭವಾದ ಪಂಜಾಬ್ ಹಾಗೂ ದಿಲ್ಲಿ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ದೊಡ್ಡ ವಿವಾದವೊಂದು ಸೃಷ್ಟಿಯಾಯಿತು.
‘ಎ’ ಗುಂಪಿನ ಪಂದ್ಯದ ಮೊದಲ ದಿನದಾಟದಲ್ಲಿ ಪಂಜಾಬ್ ಆರಂಭಿಕ ಆಟಗಾರ ಶುಭಮನ್ ಗಿಲ್‌ಗೆ ಮಧ್ಯಮ ವೇಗದ ಬೌಲರ್ ಸುಬೋತ್ ಭಾಟಿ ಬೌಲಿಂಗ್‌ನಲ್ಲಿ ಅಂಪೈರ್ ಔಟ್ ತೀರ್ಪು ನೀಡಿದ್ದರು. ಆಗ ದಿಲ್ಲಿ ಆಟಗಾರರು ಸಂಭ್ರಮಿಸತೊಡಗಿದರೆ, ಭಾರತದ ಪರ ಈ ತನಕ 2 ಏಕದಿನ ಪಂದ್ಯಗಳಲ್ಲಿ ಆಡಿರುವ ಗಿಲ್ ಕ್ರೀಸ್ ತೊರೆಯಲು ನಿರಾಕರಿಸಿದರು. ರಣಜಿ ಟ್ರೋಫಿಯಲ್ಲಿ ಮೊದಲ ಬಾರಿ ಅಂಪೈರ್ ಆಗಿದ್ದ ಮುಹಮ್ಮದ್ ರಫಿ ಅವರ ತೀರ್ಪಿಗೆ ಗಿಲ್ ಅಸಮಾಧಾನ ವ್ಯಕ್ತಪಡಿಸಿದರು. ಗಿಲ್ ಅಂಪೈರ್ ರಫಿ ಬಳಿಗೆ ತೆರಳಿ ಅವರೊಂದಿಗೆ ಮಾತನಾಡಿದರು. ರಫಿ ಇನ್ನೋರ್ವ ಅಂಪೈರ್‌ರೊಂದಿಗೆ ಮಾತನಾಡಿ ತನ್ನ ನಿರ್ಧಾರವನ್ನು ಹಿಂಪಡೆದರು.
ದಿಲ್ಲಿ ಕ್ರಿಕೆಟ್ ತಂಡ ಗಿಲ್ ಅವರ ಈ ನಡವಳಿಕೆಗೆ ಬೇಸರ ವ್ಯಕ್ತಪಡಿಸಿತು. ಮಾತ್ರವಲ್ಲ ಪಂದ್ಯ ಆಡುವುದನ್ನು ಮುಂದುವರಿಸಲು ನಿರಾಕರಿಸಿ ಮೈದಾನದಿಂದ ಹೊರ ನಡೆಯಿತು. ಹೀಗಾಗಿ ಪಂದ್ಯ 15 ನಿಮಿಷಗಳ ಸ್ಥಗಿತಗೊಂಡಿತು. ಶುಭಮನ್ ಗಿಲ್ ಅಂಪೈರ್‌ಗೆ ನಿಂದಿಸಿದ್ದಾರೆಂದು ದಿಲ್ಲಿ ಆಟಗಾರರು ಆರೋಪಿಸಿದರು. ಮ್ಯಾಚ್ ರೆಫರಿ ಮಧ್ಯಪ್ರವೇಶಿಸಿದ ಬಳಿಕ ಪಂದ್ಯ ಪುನರಾರಂಭವಾಯಿತು. ಶುಭಮನ್ ಮತ್ತೆ ಬ್ಯಾಟಿಂಗ್ ಮುಂದುವರಿಸಿದರು. 20ರ ಹರೆಯದ ಶುಭಮನ್ ಗಿಲ್ 41 ಎಸೆತಗಳಲ್ಲಿ 23 ರನ್ ಗಳಿಸಿ ಸಿಮಾರ್‌ಜೀತ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.