ಎನ್‍ಆರ್ ಸಿ, ಸಿಎಎ ವಿರೋಧಿಸಿ ಜ.7ರಂದು ಉಪ್ಪಿನಂಗಡಿಯಲ್ಲಿ ಪ್ರತಿಭಟನೆ
ಉಪ್ಪಿನಂಗಡಿ: ಕೇಂದ್ರ ಸರಕಾರವು ಜಾರಿಗೆ ತಂದಿರುವ ಎನ್‍ಆರ್ ಸಿ, ಸಿಎಎ, ಎನ್‍ಪಿಆರ್ ಮತ್ತು ಇತರ ಸಂವಿಧಾನ ತಿದ್ದುಪಡಿ ಯೋಜನೆಗಳು ಜನ ವಿರೋಧಿ ಕಾರ್ಯಕ್ರಮಗಳಾಗಿದ್ದು, ಇವುಗಳು ದೇಶದ ಅಸ್ತಿತ್ವಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಆದ್ದರಿಂದ ಇದನ್ನು ವಿರೋಧಿಸಿ ಉಪ್ಪಿನಂಗಡಿಯ ನಾಗರಿಕ ಹಿತರಕ್ಷಣಾ ವೇದಿಕೆಯಡಿ ಜಾತಿ-ಧರ್ಮ ಹಾಗೂ ರಾಜಕೀಯ ರಹಿತವಾಗಿ ಜ.7ರಂದು ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಪೌರತ್ವ ಸಂರಕ್ಷಣೆಗಾಗಿ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಪಘಾನಿಸ್ತಾನದಿಂದ ನಿರಾಶ್ರಿತರಾಗಿ ಬಂದ ಹಿಂದೂಗಳಿಗೆ ಭಾರತದ ಪೌರತ್ವ ನೀಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಅದಕ್ಕಾಗಿ ನಮ್ಮ ಪ್ರತಿಭಟನೆಯೂ ಅಲ್ಲ. ಆದರೆ ಪೌರತ್ವ ಕಾಯ್ದೆಯನ್ನು ಮೂರು ಭಾಗ ಮಾಡಿ ಕೇಂದ್ರ ಸರಕಾರ ಎನ್‍ಆರ್ ಸಿ, ಸಿಎಎ, ಎನ್‍ಪಿಆರ್ ಕಾಯ್ದೆಗಳನ್ನು ಮಾಡಿದೆ. ಇದರಲ್ಲಿ ಒಂದು ಆಕರ್ಷಕವಾಗಿದ್ದರೆ, ಇನ್ನೊಂದನ್ನು ಗೊಂದಲಕಾರಿಯಾಗಿ ಇಡಲಾಗಿದೆ. ಮತ್ತೊಂದು ನಿಗೂಢವಾಗಿದೆ. ಆದ್ದರಿಂದ ಇದರೊಳಗಿರುವ ಗೊಂದಲ ಪರಿಹಾರವಾಗಬೇಕು. ನಿಗೂಢತೆ ಬಯಲಾಗಬೇಕು ಎಂಬ ಉದ್ದೇಶದಿಂದ ನಾವು ಹೋರಾಟಕ್ಕೆ ಇಳಿದಿದ್ದೇವೆ. ಈ ರೀತಿಯ ಕಾಯ್ದೆಗಳು ದೇಶದ ಅಸ್ತಿತ್ವಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ಆದ್ದರಿಂದ ಇದರ ವಿರುದ್ಧದ ಹೋರಾಟ ಅನಿವಾರ್ಯವಾಗಿದ್ದು, ಈ ಹೋರಾಟವು ಯಾವುದೇ ಧರ್ಮ, ಪಕ್ಷದ ವಿರುದ್ಧವಲ್ಲ. ಬದಲಾಗಿ ಸರ್ವರ ಹಿತಕ್ಕಾಗಿ. ಇದು ಹೋರಾಟದ ಅಂತ್ಯ ಅಲ್ಲ, ಆರಂಭ ಎಂದರು.
ಜ.7ರಂದು ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್‍ನ ಎದುರುಗಡೆ ಅಪರಾಹ್ನ 2:30ರಿಂದ 6ರವರೆಗೆ ಪ್ರತಿಭಟನೆ ನಡೆಯಲಿದ್ದು, ಪ್ರತಿಭಟನೆಯಲ್ಲಿ ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಪ್ರಗತಿಪರ ಚಿಂತಕ ಶಿವಸುಂದರ್ ಕೊಪ್ಪ, ಹೈಕೋರ್ಟ್ ನ್ಯಾಯವಾದಿಗಳಾದ ಬಾಲನ್, ಸುಧೀರ್ ಕುಮಾರ್ ಮುರೋಳ್ಳಿ, ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ. ಮೂರ್ತಿ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಡಬ ತಾಲೂಕು ಮಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಕ್ಸೇವಿಯರ್ ಬೇಬಿ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಅಡ್ವೋಕೇಟ್ ಹನೀಫ್ ಹುದವಿ, ಹಾಫಿಲ್ ಯಾಕುಬ್ ಸಅದಿ ನಾವೂರು, ಮುಹಮ್ಮದ್ ಕುಂಞಿ, ಇಕ್ಬಾಲ್ ಬೆಳ್ಳಾರೆ, ಇಬ್ರಾಹೀಂ ಖಲೀಲ್ ತಲಪಾಡಿ ಸೇರಿದಂತೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ಕಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹಾಜಿ ಮುಸ್ತಾಫ ಕೆಂಪಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಸಂಚಾಲಕ ಹಮೀದ್ ಹಾಜಿ ಮೆಜಿಸ್ಟಿಕ್, ಸದಸ್ಯರಾದ ಮಸೂದ್ ಸಅದಿ, ಜಲೀಲ್ ಮುಕ್ರಿ, ಮುಹಮ್ಮದ್ ಹಾಜಿ, ಯೂಸುಫ್ ಪೆದಮಲೆ, ಝಕಾರಿಯಾ ಕೊಡಿಪ್ಪಾಡಿ, ನಝೀರ್ ಮಠ, ಯು.ಟಿ. ತೌಸೀಫ್, ಶಬೀರ್ ಕೆಂಪಿ, ಮುಹಮ್ಮದ್ ಕೆಂಪಿ, ಇರ್ಷಾದ್ ಯು.ಟಿ., ಆಚಿ ಕೆಂಪಿ, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.