×
Ad

ಗೃಹ ರಕ್ಷಕರಿಗೆ ಸೇವಾ ಭದ್ರತೆ ಅಗತ್ಯ: ಪ್ರದೀಪ್ ಕುರುಡೇಕರ್

Update: 2020-01-03 17:58 IST

ಉಡುಪಿ ಜ.3: ಗೃಹರಕ್ಷಕ ದಳ ಶಿಸ್ತು ಮತ್ತು ಕರ್ತವ್ಯಕ್ಕೆ ಹೆಸರುವಾಸಿಯಾಗಿರುವ ಸಂಸ್ಥೆ. ಮುಂದಿನ ದಿನಗಳಲ್ಲಾದರೂ ಗೃಹ ರಕ್ಷಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಸಿಗಬೇಕು ಎಂದು ಉಡುಪಿ ತಹಶೀಲ್ದಾರ ಪ್ರದೀಪ್ ಕುರುಡೇಕರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಗೃಹ ರಕ್ಷಕದಳ ಕಚೇರಿಯ ಆವರಣದಲ್ಲಿ ಶುಕ್ರವಾರ ಆಯೋಜಿಸಲಾದ ಅಖಿಲ ಭಾರತ ಗೃಹ ರಕ್ಷಕದಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಗೃಹ ರಕ್ಷಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲಾ ಸಂದರ್ಭಗಳಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗೆ ಸೂಕ್ತ ಗೌರವ ಸಿಗುವಂತಾಗಬೇಕು. ಗೃಹರಕ್ಷಕ ದಳದಿಂದ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ದೊರೆಯಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹ ರಕ್ಷಕದಳದ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಕೃಷ್ಣಾಷ್ಟಮಿ, ದಸರಾ, ಸಾಗರ ಕವಚ್ ಅಣುಕು ಕಾರ್ಯಾಚರಣೆ ಸೇರಿದಂತೆ ಅನೇಕ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿ ನೀಡಿದ ಸೇವೆ ಅನನ್ಯವಾದುದು ಎಂದು ತಿಳಿಸಿದರು.

ಕಾಪು ದಂಡತೀರ್ಥ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೋಡ್ರಿ ಗಸ್ ಮಾತನಾಡಿ, ರಸ್ತೆ ಅಪಘಾತ, ಕಟ್ಟಡ ಕುಸಿತ, ಗಲಭೆ ಸೇರಿದಂತೆ ಅನೇಕ ಸಂದರ್ಭದಲ್ಲಿ ಪೊಲೀಸರೊಂದಿಗೆ ಗೃಹರಕ್ಷಕ ದಳದ ಸಿಬ್ಬಂದಿಗಳು ಕೈ ಜೋಡಿಸಿ ಕಾರ್ಯನಿರ್ವಹಿಸುತ್ತಿದೆ. ಇವರಿಗೆ ಸೇವಾ ಭದ್ರತೆ ಇಲ್ಲದಿರುವುದು ವಿಷಾದನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಗೃಹರಕ್ಷಕದಳ ಕ್ರೀಡಾ ಕೂಟದಲ್ಲಿ ಸಾಧನೆಗೈದ ಸಿಬ್ಬಂದಿ, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ದ.ಕ. ಮತ್ತು ಉಡುಪಿ ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ಮೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಕಮಾಂಡೆಂಟ್ ಕಚೇರಿಯ ಅಧೀಕ್ಷಕಿ ಕವಿತಾ ಕೆ.ಸಿ., ಉಡುಪಿ ಘಟಕದ ಘಟಕಾಧಿಕಾರಿ ಕುಮಾರ್, ಮಣಿಪಾಲ ಘಟಕದ ಘಟಕಾಧಿಕಾರಿ ಸರಸ್ವತಿ, ಪಡುಬಿದ್ರಿ ಘಟಕದ ಘಟಕಾಧಿಕಾರಿ ನವೀನ್, ಕಾರ್ಕಳ ಘಟಕದ ಘಟಕಾಧಿಕಾರಿ ಪ್ರಭಾಕರ ಸುವರ್ಣ, ಕುಂದಾಪುರ ಘಟಕದ ಘಟಕಾಧಿಕಾರಿ ಭಾಸ್ಕರ್, ಬೈಂದೂರು ಘಟಕದ ಘಟಕಾಧಿಕಾರಿ ರಾಘವೇಂದ್ರ ಮೊದಲಾದ ವರು ಉಪಸ್ಥಿತರಿದ್ದರು.

ಜಿಲ್ಲಾ ಗೃಹ ರಕ್ಷಕದಳದ ಸೆಕೆಂಡ್ ಇನ್ ಕಮಾಂಡರ್ ಕೆ.ಸಿ.ರಾಜೇಶ್ ಸ್ವಾಗತಿಸಿದರು. ಉಡುಪಿ ಹೈಟೆಕ್ ಆಸ್ಪತ್ರೆಯ ಮ್ಯಾನೇಜರ್ ಸಾಯಿನಾಥ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಗೃಹ ರಕ್ಷಕದಳದ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News