ಮಂಗಳೂರು ಹಿಂಸಾಚಾರ, ಗೋಲಿಬಾರ್ ರಾಜ್ಯ ಸರಕಾರ ಪ್ರಾಯೋಜಿತ ಹತ್ಯೆ: ಡಿವೈಎಫ್‌ಐ

Update: 2020-01-03 13:21 GMT

ಮಂಗಳೂರು, ಜ.3: ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ ಕರ್ನಾಟಕ ರಾಜ್ಯ ಸರಕಾರ ಪ್ರಾಯೋಜಿತ ಹತ್ಯೆ ಎಂದು ಡಿವೈಎಫ್‌ಐ ಆರೋಪಿಸಿದೆ.

ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟವರ ಮನೆ ಹಾಗೂ ಘಟನಾ ಪ್ರದೇಶಕ್ಕೆ ಭೇಟಿ ನೀಡಿದ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಹಾಗೂ ನ್ಯಾಯವಾದಿ ಮುಹಮ್ಮದ್ ರಿಯಾಝ್ ನೇತೃತ್ವದ ತಂಡ ಈ ಆರೋಪ ಮಾಡಿದೆ.

ಭೇಟಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ರಿಯಾಝ್, ಪೊಲೀಸ್ ಗೋಲಿಬಾರ್‌ಗೆ ಬಲಿಯಾಗಿರುವವರು ಅಮಾಯಕರು. ಪೊಲೀಸ್ ಆಯುಕ್ತರು ಆರೆಸ್ಸೆಸ್ ಹಾಗೂ ಬಿಜೆಪಿ ಮುಖಂಡರ ಜತೆ ಸಖ್ಯ ಹೊಂದಿರುವುದರಿಂದಲೇ ಈ ರಾಜ್ಯ ಸರಕಾರ ಪ್ರಾಯೋಜಿತ ಹತ್ಯೆಯ ಏಜೆಂಟರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದೂ ಆರೋಪಿಸಿದರು.

ಪೊಲೀಸರು ತಮ್ಮ ಎಫ್‌ಐಆರ್‌ನಲ್ಲಿ ಅಪರಿಚಿತ ಮುಸ್ಲಿಮ್ ಯುವಕರು ಎಂದು ದಾಖಲಿಸಿರುವುದು ದೇಶದ ಇತಿಹಾಸದಲ್ಲೇ ಪ್ರಥಮ. ಧರ್ಮದ ಆಧಾರದಲ್ಲಿ ಯುವಕರನ್ನು ಗುರಿಯಾಗಿಸಿಕೊಂಡು ಪೊಲೀಸರು ಹಾಗೂ ಸರಕಾರ ಯುವ ಶಕ್ತಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಹಕ್ಕು ಇದೆ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಆಡಳಿತದಲ್ಲಿ ಇಂತಹ ಕ್ರೂರ ಕೃತ್ಯಗಳನ್ನು ನಡೆಸುತ್ತಿದ್ದು, ಕರ್ನಾಟಕ ರಾಜ್ಯ ಕೂಡಾ ಉತ್ತರ ಪ್ರದೇಶವನ್ನು ಮಾದರಿಯಾಗಿಸಿಕೊಂಡು ಈ ಕೃತ್ಯ ನಡೆಸಿದೆ. ರಾಜ್ಯದ ಮುಖ್ಯಮಂತ್ರಿ ಘಟನೆಗೆ ಸಂಬಂಧಿಸಿ ಬಿಜೆಪಿಯ ಮುಖ್ಯಮಂತ್ರಿಯಂತೆ ವರ್ತಿಸಿದ್ದಾರೆ ಎಂದು ಮೃತರಿಗೆ ಘೋಷಿಸಲಾದ ಪರಿಹಾರವನ್ನು ಹಿಂಪಡೆದಿರುವುದನ್ನು ಉಲ್ಲೇಖಿಸಿ ಮುಹಮ್ಮದ್ ರಿಯಾಝ್ ಪ್ರತಿಕ್ರಿಯಿಸಿದರು.

ಪೊಲೀಸರು ಗೋಲಿಬಾರ್ ಮಾಡಿರುವ ಪ್ರಕರಣದ ಸಿಒಡಿ ತನಿಖೆಯಿಂದ ನ್ಯಾಯ ದೊರಕದು. ಹಾಗಾಗಿ ನ್ಯಾಯಾಂಗ ತನಿಖೆ ಆಗಬೇಕೆಂಬುದು ನಮ್ಮ ಬೇಡಿಕೆ. ಮಾತ್ರವಲ್ಲದೆ ಮೃತರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಪೊಲೀಸ್ ಆಯುಕ್ತರ ವಿರುದ್ಧ ಕ್ರಮ ಆಗಬೇಕು. ಅಮಾಯಕರ ಮೇಲಿನ ಪ್ರಕರಣವನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಫ್‌ಐ ಕೇರಳ ರಾಜ್ಯ ಅಧ್ಯಕ್ಷ ಎ. ಸತೀಶ್, ಕಾರ್ಯದರ್ಶಿ ಎ.ಎ.ರಹಿಂ, ಕೇಂದ್ರ ಸಮಿತಿ ಸದಸ್ಯರಾದ ಎಸ್.ಕೆ. ಸಾಜಿಶ್, ಕೆ.ಯು.ಜ್ಞಾನೇಶ್ ಕುಮಾರ್, ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾಸರಗೋಡು ಅಧ್ಯಕ್ಷ ವಿ.ಕೆ. ಸನೋಜ್, ಕಾರ್ಯದರ್ಶಿ ನಿಶಾಂತ್, ದ.ಕ. ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ಉಪಸ್ಥಿತರಿದ್ದರು.


ಹಿಂದೂ ರಾಷ್ಟ್ರ ಸ್ಥಾಪನೆಯ ಆರೆಸ್ಸೆಸ್ ಅಜೆಂಡಾ ಈಡೇರಿಸುವ ಯತ್ನ

ಕೇಂದ್ರದ ಬಿಜೆಪಿ ಸರಕಾರದ ಮೂಲಕ ಆರೆಸ್ಸೆಸ್, ಹಿಂದೂಗಳು ಮಾತ್ರ ದೇಶದ ಪ್ರಥಮ ಪ್ರಜೆಗಳು ಇತರರು ದ್ವಿತೀಯ ಪ್ರಜೆಗಳು ಎಂಬ ಹಿಂದೂ ರಾಷ್ಟ್ರ ಸ್ಥಾಪನೆಯ ತನ್ನ ಅಜೆಂಡಾವನ್ನು ಈಡೇರಿಸುವ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಸಂಸತ್ತಿನಲ್ಲಿ ಬಿಜೆಪಿ ಬಹುಮತದ ಲಾಭವನ್ನು ಪಡೆದು ಸಂವಿಧಾನ ವಿರೋಧಿ ಕಾಯಿದೆ ಜಾರಿಗೆ ಮುಂದಾಗಿದೆ. ಆದರೆ ಆದರೆ ಬಿಜೆಪಿಯ ಬಹುಸಂಖ್ಯಾತರು ಕೂಡಾ ಸಂವಿಧಾನ ವಿರೋಧಿ ಕೃತ್ಯಕ್ಕೆ ವಿರುದ್ಧವಾಗಿದ್ದಾರೆ ಎಂಬುದು ದೇಶದಲ್ಲಿ ನಡೆಯುತ್ತಿರುವ ಹೋರಾಟದ ಮೂಲಕ ಸಾಬೀತಾಗುತ್ತಿದೆ ಎಂದು ಮುಹಮ್ಮದ್ ರಿಯಾಝ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News