×
Ad

ಉಡುಪಿ: ವಾರಸುದಾರರು ಇಲ್ಲದ ಮೂರು ಶವಗಳ ಅಂತ್ಯಸಂಸ್ಕಾರ

Update: 2020-01-03 18:10 IST

ಉಡುಪಿ, ಜ.3: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶೀತಲಿಕೃತ ಶವಗಾರದಲ್ಲಿ ಹಲವು ದಿನಗಳಿಂದ ರಕ್ಷಿಸಿ ಇಡಲಾಗಿದ್ದ ವಾರಸುದಾರರು ಇಲ್ಲದ ಮೂವರು ಅಪರಿಚಿತ ವ್ಯಕ್ತಿಗಳ ಮೃತದೇಹದ ಅಂತ್ಯಸಂಸ್ಕಾರವನ್ನು ಗುರುವಾರ ಪೊಲೀಸರು ಮತ್ತು ಉಡುಪಿಯ ಸಮಾಜ ಸೇವಕರು ನೆರವೇರಿಸಿದರು.

ಕಳೆದ ಡಿ.3ರಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಪತ್ತೆಯಾಗಿದ್ದ ಸುಮಾರು 60ವರ್ಷ ಪ್ರಾಯದ ಅಪರಿಚಿತ ವೃದ್ಧರೊಬ್ಬರು ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು. ಅದೇ ರೀತಿ ನ.19ರಂದು ಅಂಬಾಗಿಲಿನ ಪರಿಸರದಲ್ಲಿ ಅಸ್ವಸ್ಥಗೊಂಡು ಬಿದ್ದುಕೊಂಡಿದ್ದ 35 ವರ್ಷದ ಅಪರಿಚಿತ ಯುವಕ ನ.21ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಡಿ.21ರಂದು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರಿಕುದ್ರು ಗ್ರಾಮದ ಹಾಲಾಡಿ ಹೊಳೆಯ ದಡದಲ್ಲಿ ಸುಮಾರು 45 ವರ್ಷದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿತ್ತು.

ಈ ಮೂವರು ಮೃತರ ವಾರಸುದಾರರ ಪತ್ತೆಗಾಗಿ ಪ್ರಕಟಣೆಗಳನ್ನು ನೀಡಲಾಗಿತ್ತು. ಆದರೆ ಕಾಲಮಿತಿ ಕಳೆದರೂ ಈವರೆಗೆ ಈ ಮೃತರ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಶವ ಮಹಜರು ಕಾನೂನು ಪ್ರಕ್ರಿಯೆಗಳನ್ನು ಉಡುಪಿ ನಗರ ಮತ್ತು ಕುಂದಾಪುರ ಪೊಲೀಸರು ನಡೆಸಿದರು. ನಂತರ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ರಾಜೇಶ್ ಕಾಪು ಸಹಕಾರದಿಂದ ಬೀಡಿನಗುಡ್ಡೆ ಹಿಂದು ರುಧ್ರಭೂಮಿಯಲ್ಲಿ ದಫನ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ವಿಶ್ವನಾಥ್ ಶೆಟ್ಟಿ, ಕುಂದಾಪುರ ಪೊಲೀಸ್ ಠಾಣೆಯ ಎ.ಎಸ್.ಐ. ಸುಧಾಕರ್, ಸಿಬ್ಬಂದಿ ಶಾಂತ ರಾಮ ಶೆಟ್ಟಿ, ವಿಜಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News