×
Ad

ಕರಾವಳಿ ಉತ್ಸವದ ಯಶಸ್ಸಿಗೆ ಸಿದ್ಧತಾ ಸಭೆ

Update: 2020-01-03 18:36 IST

ಮಂಗಳೂರು, ಜ.3: ನಗರದ ವಿವಿಧೆಡೆ ಜ.10ರಿಂದ ಆರಂಭಗೊಳ್ಳಲಿರುವ ಪ್ರಸಕ್ತ ಸಾಲಿನ ಕರಾವಳಿ ಉತ್ಸವದ ಯಶಸ್ಸಿಗೆ ಸಿದ್ಧತಾ ಸಭೆಯು ಶುಕ್ರವಾರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ರ ಅಧ್ಯಕ್ಷತೆಯಲ್ಲಿ ಜರುಗಿತು.

ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಆಕರ್ಷಕವಾಗಿರಬೇಕು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರ ಕಾರ್ಯಕ್ರಮಗಳನ್ನು ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್‌ನಲ್ಲಿ ಏರ್ಪಡಿಸಲು ನಿಗದಿಪಡಿಸಲಾಗಿದೆ. ಕಲಾವಿದರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಒದಗಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಕರಾವಳಿ ಉತ್ಸವದ ಆರಂಭದ ದಿನದಂದು ಸಾಂಸ್ಕೃತಿಕ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಶೌಚಾಲಯ ಸಹಿತ ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಸಜ್ಜುಗೊಳಿಸಲು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್, ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ನರೇಂದ್ರ ನಾಯಕ್, ಯತೀಶ್ ಬೈಕಂಪಾಡಿ, ಗೌರವ್ ಹೆಗ್ಡೆ, ನಿಸರ್ಗ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಬಾನಂಗಳದಲ್ಲಿ ಚಿತ್ತಾಕರ್ಷಕ ಗಾಳಿಪಟ ಹಾರಾಟ


ಪ್ರಸಕ್ತ ಸಾಲಿನ ಕರಾವಳಿ ಉತ್ಸವವು ಜ.10ರಿಂದ ಪ್ರಾರಂಭವಾಗಲಿದ್ದು, ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಕರಾವಳಿ ಉತ್ಸವದ ಕೊನೆಯ ಮೂರು ದಿನ ಅಂದರೆ ಜ.17ರಿಂದ 19ರವರೆಗೆ ಪಣಂಬೂರು ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ದೇಶದ ನುರಿತ ಗಾಳಿಪಟ ಕ್ರೀಡಾಳುಗಳೊಂದಿಗೆ ಹಲವು ವಿದೇಶಿ ರಾಷ್ಟ್ರಗಳ ಗಾಳಿಪಟ ಕ್ರೀಡಾಳುಗಳೂ ಭಾಗವಹಿಸಿ ಉತ್ಸವದ ಮೆರುಗು ಹೆಚ್ಚಿಸಲಿದ್ದಾರೆ.

ಸಿಂಗಾಪುರ, ಕಾಂಬೋಡಿಯಾ, ಇಂಡೋನೇಶ್ಯಾ, ಫಿಲಿಪೈನ್ಸ್, ಸ್ಕಾಟ್‌ಲ್ಯಾಂಡ್, ತುರ್ಕಿ, ಥಾಯ್ಲ್ಯಾಂಡ್, ನೆದರ್‌ಲ್ಯಾಂಡ್, ಹಾಲೆಂಡ್ ದೇಶದ ಗಾಳಿಪಟ ಹಾರಾಟಗಾರರು ಕರಾವಳಿ ಉತ್ಸವದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾ ಹಾಗೂ ಜೂರಿಚ್ ರಾಷ್ಟ್ರದ ಗಾಳಿಪಟ ಹಾರಾಟಗಾರರು ಭಾಗವಹಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ವಿದೇಶಿ ಗಾಳಿಪಟ ಹಾರಾಟಗಾರರು ಜಗತ್ತಿನ ವಿವಿಧೆಡೆ ನಡೆದ ಹಲವಾರು ಪ್ರಮುಖ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಂಡ ಅನುಭವ ಹೊಂದಿದ್ದು, ಗಾಳಿಪಟದ ವಿಷಯ ಆಯ್ಕೆ ಹಾಗೂ ವಿನ್ಯಾಸದಲ್ಲಿ ನುರಿತ ಪರಿಣತಿಯನ್ನು ಹೊಂದಿದ್ದಾರೆ.

ಜಿಲ್ಲಾಡಳಿತ ವತಿಯಿಂದ ಈಗಾಗಲೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಯಶಸ್ಸಿಗೆ ಉಪಸಮಿತಿ ರಚಿಸಲಾಗಿದೆ. ಕ್ರೀಡಾಳುಗಳ ಪ್ರಯಾಣ, ವಸತಿ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆಗಳು ನಡೆಯುತ್ತಿವೆ.

ಜಿಲ್ಲಾ ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆ
ಕರಾವಳಿ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತ, ಕರಾವಳಿ ಉತ್ಸವ ಕ್ರೀಡಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡೋತ್ಸವ ಜ.11 ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.

ನಗರದ ನೆಹರೂ ಮೈದಾನದಲ್ಲಿ ದ.ಕ. ಜಿಲ್ಲಾ ಪ್ರೌಢ ಶಾಲಾ ಬಾಲಕರಿಗೆ ಫುಟ್‌ಬಾಲ್ ಪಂದ್ಯಾಟ, ಮಂಗಳಾ ಕ್ರೀಡಾಂಗಣದಲ್ಲಿ ಜಿಲ್ಲಾ ಪದವಿ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ವಾಲಿಬಾಲ್ ಪಂದ್ಯಾಟ ಮತ್ತು ಜಿಲ್ಲಾ ಪ್ರೌಢ ಶಾಲಾ ಬಾಲಕಿಯರಿಗೆ ತ್ರೋಬಾಲ್ ಪಂದ್ಯಾಟ, ಯು. ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರಿಗೆ ಕುಸ್ತಿ ಪಂದ್ಯಾಟ, ಮಂಗಳಾ ಕ್ರೀಡಾಂಗಣ (ಹೊರಾಂಗಣ ಬಾಸ್ಕೆಟ್‌ಬಾಲ್ ಅಂಕಣ)ದಲ್ಲಿ ಜಿಲ್ಲೆಯ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಬಾಸ್ಕೆಟ್ಬಾಲ್ ಪಂದ್ಯಾಟ ನಡೆಯಲಿದೆ.

ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ ಕ್ರೀಡಾಪಟುಗಳು ಪ್ರವೇಶ ಪತ್ರವನ್ನು ಸಂಸ್ಥೆಯ ಮುಖ್ಯಸ್ಥರ ಮೂಲಕ ಜ.9ರೊಳಗೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ಮಂಗಳೂರು ಇವರಿಗೆ ಕಳುಹಿಸಿಕೊಡಬೇಕು. ಸ್ಪರ್ಧಾಳುಗಳು ಸ್ಪರ್ಧೆ ನಡೆಯುವ ದಿನದಂದು ಬೆಳಗ್ಗೆ 9 ಗಂಟೆಗೆ ಆಯಾಯ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಹಾಜರಿರಬೇಕು.

ಮಾಹಿತಿಗಾಗಿ ಕಚೇರಿ ದೂ.ಸಂ: 0824-2451264 ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸದಸ್ಯ ಕಾರ್ಯದರ್ಶಿ, ಕರಾವಳಿ ಉತ್ಸವ ಕ್ರೀಡಾ ಸಮಿತಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News