ಉಡುಪಿ ಜಿಲ್ಲಾ ನೂತನ ಎಸ್ಪಿಯಾಗಿ ವಿಷ್ಣುವರ್ಧನ್ ಅಧಿಕಾರ ಸ್ವೀಕಾರ
ಉಡುಪಿ, ಜ.3: ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ನೂತನ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಎಸ್ಪಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಜಿಲ್ಲೆಯ ಪ್ರಸ್ತುತ ವಿದ್ಯಾಮಾನ, ಪ್ರಕರಣಗಳು ಹಾಗೂ ಬಂದೋಬಸ್ತ್‌ಗಳ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಲಾಗುವುದು ಎಂದರು.
ಜಿಲ್ಲೆಯ ಅನುಭವಸ್ಥ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಯೋಜನೆ ಹಾಕಿಕೊಳ್ಳಲಾಗುವುದು. ಅದಕ್ಕೆ ಸ್ವಲ್ಪ ಕಾಲಾವಕಾಶಬೇಕಾಗುತ್ತದೆ ಎಂದ ಅವರು, ಉಡುಪಿ ಒಳ್ಳೆಯ ಜಿಲ್ಲೆ. ಇಲ್ಲಿನ ಜನರು ಕೂಡ ಒಳ್ಳೆಯವರು. ಅದೇ ರೀತಿ ಸಂಸ್ಕೃತಿ ಕೂಡ ವಿಶಿಷ್ಟವಾದುದು ಎಂದು ತಿಳಿಸಿದರು.
ಬೆಂಗಳೂರು ದೇವನಹಳ್ಳಿಯ ನಿವಾಸಿಯಾಗಿರುವ ಇವರು, ಎಂಬಿಎಯನ್ನು ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಮಾಡಿದ್ದರು. ಕೆಲವು ಸಮಯಗಳ ಕಾಲ ವಿಪ್ರೋದಲ್ಲಿ ಇಂಟರ್ ಶಿಪ್ ಮಾಡಿದ ಇವರು, 2005ರಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡರು. ಕೊಡಗು ವಿರಾಜಪೇಟೆಯಲ್ಲಿ ಡಿವೈಎಸ್ಪಿಯಾಗಿ ಸೇವೆ ಆರಂಭಿಸಿದ ಇವರು, ನಂತರ ಮೈಸೂರು ನಗರ ಡಿವೈಎಸ್ಪಿ, ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ, ಶಿವಮೊಗ್ಗ ಹೆಚ್ಚುವರಿ ಎಸ್ಪಿ, ಕಾರ್ಕಳ ಎಎನ್‌ಎಫ್ ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ, ಬೆಂಗಳೂರು ನಾಗರಿಕ ಹಕ್ಕು ನಿರ್ದೇಶನಾಲಯ ಹೆಚ್ಚುವರಿ ಎಸ್ಪಿ, ಮಂಗಳೂರು ಹೆಚ್ಚುವರಿ ಎಸ್ಪಿ, ಮೈಸೂರು ಡಿಸಿಪಿ, ಬೆಂಗಳೂರು ನಗರ ಡಿಸಿಪಿ(ಆಡಳಿತ)ಯಾಗಿ ಕರ್ತವ್ಯ ನಿರ್ವಹಿಸಿದ್ದರು.
2015ರ ಐಪಿಎಸ್ ಅಧಿಕಾರಿಯಾಗಿರುವ ಇವರು, 2016-17ರಲ್ಲಿ ಹೆಚ್ಚುವರಿ ಎಸ್ಪಿಯಾಗಿ ಒಂದೂವರೆ ವರ್ಷಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಜರಿದ್ದರು.