×
Ad

ಮಿಸ್ಬಾಹ್ ಮಹಿಳಾ ಪದವಿ ಕಾಲೇಜಿನ ಸಭಾಭವನ, ಗ್ರಂಥಾಲಯ ಉದ್ಘಾಟನೆ

Update: 2020-01-03 20:41 IST

ಮಂಗಳೂರು, ಜ.3: ಕಾಟಿಪಳ್ಳದ ಮಿಸ್ಬಾಹ್ ನಾಲೆಡ್ಜ್ ಫೌಂಡೇಶನ್ ಅಧೀನದಲ್ಲಿ ಮಿಸ್ಬಾಹ್ ಮಹಿಳಾ ಪದವಿ ಕಾಲೇಜು, ಮಿಸ್ಬಾಹ್ ಮಹಿಳಾ ಶರಿಯಾ ಕಾಲೇಜು ಮತ್ತು ಮಿಸ್ಬಾಹ್ ಝಹ್ರತುಲ್ ಕುರ್‌ಆನ್ ನರ್ಸರಿ ಶಾಲೆಯ ಆವರಣದಲ್ಲಿ ಸಭಾಭವನ ಉದ್ಘಾಟನೆ, ಗ್ರಂಥಾಲಯ ಅನಾವರಣ ಹಾಗೂ 'ಅಲ್-ಮಾಹಿರ' ಪದವಿ ಪ್ರದಾನ ಸಮಾರಂಭ ಶುಕ್ರವಾರ ಜರುಗಿತು.

ನೂತನ ಆಡಿಟೋರಿಯಂನ್ನು ಭಾರತದ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟಿಸಿದರು. ತರಗತಿ ಕೋಣೆಯನ್ನು ಮಾಜಿ ಸಚಿವ ಕೆ.ರಹ್ಮಾನ್ ಖಾನ್, ಗ್ರಂಥಾಲಯವನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಎ.ಪಿ.ಉಸ್ತಾದ್, ಶಿಕ್ಷಣದಿಂದ ಮಾತ್ರ ಯಾವುದೇ ಒಂದು ಸಮುದಾಯದ ಪ್ರಗತಿ ಸಾಧ್ಯ. ಒಂದು ಸಮುದಾಯ ಶಿಕ್ಷಣವನ್ನು ಪಡೆಯಬೇಕಾದರೆ ತಾಯಂದಿರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಇಂತಹ ಮಹಿಳಾ ಕಾಲೇಜುಗಳು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕಾರ್ಯಕ್ರಮಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು.

ಮಾಜಿ ಸಚಿವ ಕೆ.ರಹ್ಮಾನ್ ಖಾನ್ ಮಾತನಾಡಿ, ಶಿಕ್ಷಣ ಅತ್ಯಂತ ಪ್ರಬಲವಾದ ಒಂದು ಅಸ್ತ್ರವಾಗಿದೆ. ಶಿಕ್ಷಣದಿಂದ ಸಮಾಜದ ಸುಧಾರಣೆ ಸಾಧ್ಯ ಎಂದರು.

ಈ ಸಂದರ್ಭದಲ್ಲಿ 3 ವರ್ಷದ ಶರೀಅತ್ ಕೋರ್ಸನ್ನು ಪೂರೈಸಿದ ವಿದ್ಯಾರ್ಥಿನಿಯರಿಗೆ ಅಲ್‌ಮಾಹಿರ ಪದವಿಯನ್ನು ಹಾಗೂ ಬಿಎ, ಬಿ.ಕಾಂ ಜೊತೆ ಇಸ್ಲಾಮೀ ಶರಿಯಾ ಕೋರ್ಸ್ ಮುಗಿಸಿದವರಿಗೆ ಡಿಪ್ಲೋಮಾ ಪದವಿ ಪ್ರದಾನ ಜರುಗಿತು.

ಸಂಸ್ಥೆಯ ಅಧ್ಯಕ್ಷ ಬಿ.ಎಂ ಮುಮ್ತಾಝ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸೌದಿ ಅರೇಬಿಯಾದ ಸಬ್‌ಸಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಲಾಹುದ್ದೀನ್ ಸಲ್ಮಾನ್, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ದುಬೈಯ ಬ್ಯಾರೀಸ್ ಕಲ್ಚರಲ್ ಫೋರಂ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಮತ್ತು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಯ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಉಪಸ್ಥಿತರಿದ್ದರು.

ಕಾರ್ಕಳದ ತ್ವೈಬಾ ಎಜುಕೇಶನ್ ಗಾರ್ಡನ್ ಅಧ್ಯಕ್ಷ ಸೈಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್, ಕಾವಳಕಟ್ಟೆ ಅಲ್‌ಖಾದಿಸ ಎಜುಕೇಶನ್ ಅಕಾಡಮಿಯ ಅಧ್ಯಕ್ಷ ಡಾ.ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ, ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿ ಮುಸ್ಲಿಂ ಜಮಾಅತ್ ನ ಸಂಯುಕ್ತ ಖಾಝಿ ಇ.ಕೆ ಇಬ್ರಾಹಿಂ ಮುಸ್ಲಿಯಾರ್, ಕೆ.ಎಸ್.ಸಯ್ಯದ್ ಕರ್ನಿರೆ, ಅಬ್ದುಸ್ಸಮದ್, ಎನ್‌ಆರ್‌ಐ ಉದ್ಯಮಿ ಝಕರಿಯಾ ಜೋಕಟ್ಟೆ, ಉದ್ಯಮಿ ಅಬ್ದುರ್ರವೂಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News