2 ತಿಂಗಳಲ್ಲಿ ಭಾರತದಿಂದ 445 ಬಾಂಗ್ಲಾ ರಾಷ್ಟ್ರೀಯರು ಸ್ವದೇಶಕ್ಕೆ

Update: 2020-01-03 15:19 GMT

ಢಾಕಾ (ಬಾಂಗ್ಲಾದೇಶ), ಜ. 3: ಭಾರತ ಸರಕಾರ ಎರಡು ತಿಂಗಳ ಹಿಂದೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ಪ್ರಕಟಿಸಿದ ಬಳಿಕ ಒಟ್ಟು 445 ಬಾಂಗ್ಲಾದೇಶಿ ರಾಷ್ಟ್ರೀಯರು ಬಾಂಗ್ಲಾದೇಶಕ್ಕೆ ಮರಳಿದ್ದಾರೆ ಎಂದು ಬಾಂಗ್ಲಾದೇಶದ ಗಡಿ ರಕ್ಷಣಾ ಪಡೆ ಬೋರ್ಡರ್ ಗಾರ್ಡ್ ಬಾಂಗ್ಲಾದೇಶ್ (ಬಿಜಿಬಿ)ನ ಮಹಾ ನಿರ್ದೇಶಕ ಮೇಜರ್ ಜನರಲ್ ಮುಹಮ್ಮದ್ ಶಫೀನುಲ್ ಇಸ್ಲಾಮ್ ಹೇಳಿದ್ದಾರೆ.

‘‘ಭಾರತದಿಂದ ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಗಡಿ ದಾಟುತ್ತಿದ್ದ ಸುಮಾರು 1,000 ಜನರನ್ನು 2019ರಲ್ಲಿ ಬಂಧಿಸಲಾಗಿದೆ. ಅವರ ಪೈಕಿ 445 ಮಂದಿ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಿದವರು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದರು.

ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಅವರ ಗುರುತು ಪರಿಶೀಲನೆ ನಡೆಸಿದ ಬಳಿಕ, ಗಡಿ ನುಸುಳಿ ಬಂದ ಎಲ್ಲರೂ ಬಾಂಗ್ಲಾದೇಶಿಯರು ಎನ್ನುವುದು ಗೊತ್ತಾಗಿದೆ ಎಂದು ಇಸ್ಲಾಮ್ ನುಡಿದರು.

ಅತಿಕ್ರಮಣಕ್ಕಾಗಿ ಅವರ ವಿರುದ್ಧ 253 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಅವರ ಪೈಕಿ ಕನಿಷ್ಠ ಮೂವರು ಮಾನವ ಕಳ್ಳಸಾಗಣೆದಾರರು ಎಂದು ತಿಳಿದು ಬಂದಿದೆ ಎಂದು ಗಡಿ ಪಡೆ ಮುಖ್ಯಸ್ಥರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News