ರಾಷ್ಟ್ರನಾಯಕರಿಗೆ ಕಳಂಕಹಚ್ಚುವ ಯತ್ನ: ಕಾಂಗ್ರೆಸ್ ಕೈಪಿಡಿ ಬಗ್ಗೆ ಬಿಜೆಪಿ

Update: 2020-01-03 16:10 GMT
file photo

ಹೊಸದಿಲ್ಲಿ,ಜ.3: ನಾಥೂರಾಮ್ ಗೋಡ್ಸೆ ಜೊತೆಗೆ ಸಾವರ್ಕರ್ ಸಂಬಂಧವನ್ನು ಕಾಂಗ್ರೆಸ್ ಸೇವಾದಳ ಪ್ರಕಟಿಸಿದ ಕೈಪಿಡಿಯಲ್ಲಿ ಆಕ್ಷೇಪಕಾರಿಯಾಗಿ ಉಲ್ಲೇಖಿಸಿರುವುದನ್ನು ಬಿಜೆಪಿಯು ಖಂಡಿಸಿದೆ. ನೆಹರೂ-ಗಾಂಧಿ ಕುಟುಂಬದ ಹೊರತಾಗಿ, ಉಳಿದ ಎಲ್ಲಾ ನಾಯಕರಿಗೂ ಕಾಂಗ್ರೆಸ್ ಸೇವಾದಳ ಕಳಂಕ ಹಚ್ಚುತ್ತಿದೆ ಎಂದು ಟೀಕಿಸಿದೆ.

 ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಅವರು ಈ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದು, ‘‘ ಕಾಂಗ್ರೆಸ್ ನಾಯಕರು ಹೊಂದಿದ್ದ ವಿವಿಧ ಸಂಬಂಧಗಳ ಕುರಿತು ಇಡೀ ಜಗತ್ತಿಗೆ ಗೊತ್ತಿದೆ’’ ಎಂದರು.

 ಹಿಂದುತ್ವದ ಪ್ರತೀಕವಾಗಿರುವ ವೀರಸಾವರ್ಕರ್ ಅವರಂತೆ ಕಾಂಗ್ರೆಸ್ ಪಕ್ಷದವರ್ಯಾರೂ ಯಾತನೆ ಪಡಲಿಲ್ಲವೆಂದು ಜೈನ್ ಹೇಳಿದರು. ಸಾವರ್ಕರ್ ಅವರನ್ನು ದೂಷಿಸುವುದಕ್ಕಾಗಿ ಕಾಂಗ್ರೆಸ್ ಅತ್ಯಂತ ಕೆಳಮಟ್ಟಕ್ಕಿಳಿದಿದೆ ಎಂದರು. ಸಾವರ್ಕರ್ ಕುರಿತು ಅಸಹ್ಯಕರ ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ಕಾಂಗ್ರೆಸ್ ಉತ್ತರಿಸಬೇಕಾಗಿದೆ ಎಂದರು.

‘‘ ಕೇವಲ ಒಂದು ಕುಟುಂಬವನ್ನು ಹೊರತುಪಡಿಸಿ ಕಾಂಗ್ರೆಸ್‌ಗೆ ಮತ್ಯಾರೂ ಗೌರವಕ್ಕೆ ಅರ್ಹರಲ್ಲ’’ ಎಂದು ಜೈನ್ ಕಟಕಿಯಾಡಿದರು. ಕಾಂಗ್ರೆಸ್ ಪಕ್ಷವು ಸರ್ದಾರ್ ವಲ್ಲಭಬಾಯ್ ಪಟೇಲ್, ಭೀಮರಾವ್ ಅಂಬೇಡ್ಕರ್ ಹಾಗೂ ಸಾವರ್ಕರ್ ಅವರಂತಹ ನಾಯಕರಿಗೂ ಕಳಂಕಹಚ್ಚುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು..

ಕಾಂಗ್ರೆಸ್‌ಗೆ ನಿಷ್ಠವಾಗಿರುವ ಸೇವಾದಳವು ಪ್ರಕಟಿಸಿದ ಹಿಂದಿ ಕೈಪಿಡಿಯೊಂದರಲ್ಲಿ ವೀರ ಸಾವರ್ಕರ್ ಹಾಗೂ ನಾಥೂರಾಮ್ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತೆಂದು ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿದೆ.

 ರಾಜಸ್ಥಾನದ ಕೋಟಾದ ಸರಕಾರಿ ಆಸ್ಪತ್ರೆಯಲ್ಲಿ 100ಕ್ಕೂ ಅಧಿಕ ಮಂದಿ ಮಕ್ಕಳು ಮೃತಪಟ್ಟ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನ ಸರಕಾರವು ‘ಈ ಮೊದಲು ಕೂಡಾ ಕೋಟಾದ ಆಸ್ಪತ್ರೆಯಲ್ಲಿ ಮಕ್ಕಳು ಮೃತಪಟ್ಟಿದ್ದಾರೆಂದು’ ಹೇಳಿಕೆ ನೀಡಿದ್ದಕ್ಕೆ ಜೈನ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರಕಾರವು ಅಂಕಿಅಂಶಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಆಸ್ಪತ್ರೆಯ ಪರಿಸ್ಥಿತಿಯನ್ನು ಸುಧಾರಣೆಗೊಳಿಸಲಿ ಹಾಗೂ ಉತ್ತರದಾಯಿತ್ವವನ್ನು ನಿಗದಿಪಡಿಸಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News