ಇಂದು ದೇಶ ಆಳುತ್ತಿರುವವರು ಎಂದೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲ: ಶಿವಸುಂದರ್

Update: 2020-01-03 16:36 GMT

ಪುತ್ತೂರು: ಭಾರತವು ಕೇವಲ ಒಂದು ಧರ್ಮಕ್ಕೆ ಸೀಮಿತವಾದ ದೇಶವಲ್ಲ. ಇದು ಎಲ್ಲರಿಗೂ ಸೇರಿದ ಜಾತ್ಯಾತೀತ ದೇಶವಾಗಿದ್ದು, ಎನ್‍ಆರ್ ಸಿ ಮತ್ತು ಸಿಎಎ ಇಲ್ಲಿನ ಮುಸ್ಲಿಮರ ಎದೆಗೆ ಚೂರಿ ಇರಿದರೆ ಹಿಂದೂಗಳಿಗೆ ಬೆನ್ನಲ್ಲಿ ಚೂರಿ ಇರಿಯುವ ಅಪಾಯಕಾರಿ ಕಾಯ್ದೆಯಾಗಿದೆ. ಪೌರತ್ವ ಕಾಯ್ದೆಯ ವಿರುದ್ದದ ಹೋರಾಟ ಕೇವಲ ಮುಸ್ಲಿಮರ ಮಾತ್ರ ಹೋರಾಟವಲ್ಲ. ಇದು ದೇಶದ ಎಲ್ಲರ ಹೋರಾಟವಾಗಿದೆ. ಪೌರತ್ವ ಸಮೀಕ್ಷೆಯು ಧರ್ಮಾಧಾರಯುತವಾಗಿ ನಡೆಯುವುದಲ್ಲ ಧಮನಾಧಾರಿತವಾಗಿ ನಡೆಯಬೇಕಾಗಿದೆ ಎಂದು ಖ್ಯಾತ ಚಿಂತಕ ಅಂಕಣಕಾರ ಶಿವಸುಂದರ ಹೇಳಿದರು.

ಅವರು ಪುತ್ತೂರು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಅಪರಾಹ್ನ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆದ ಪೌರತ್ವ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದರು. ಇಂದು ದೇಶ ಆಳುತ್ತಿರುವವರು ಎಂದೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲ. ಇಲ್ಲಿನ ಹಿಂದೂಗಳು ಮತ್ತು ಮುಸ್ಲಿಮರ ಐಕ್ಯತೆಯ ಕಾರಣದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತ್ತು. ಇವರಿಗೆ ದೇಶದ ಸ್ವಾತಂತ್ರ್ಯ ಹೋರಾಟದ ಅಸ್ಮಿತತೆಯ ಅರಿವಿಲ್ಲ. ದೇಶ ಕಂಡ ಅತ್ಯಂತ  ಅಪ್ರಾಮಾಣಿಕ ಪ್ರಧಾನಿ ಮತ್ತು ಗೃಹ ಸಚಿವರು ಭಾರತದ ಅಭಿವೃದ್ಧಿಯ ವಿಚಾರ ಬಿಟ್ಟು ಪಾಕಿಸ್ಥಾನದ ಭಜನೆ ಮಾಡುತ್ತಿದ್ದಾರೆ. ಧೇಶವನ್ನು ಅರ್ಥಮಾಡಿಕೊಳ್ಳದ ಇಂತಹ ವ್ಯಕ್ತಿಗಳು ಎನ್‍ಆರ್ ಸಿ, ಸಿಎಎ ಕಾಯ್ದೆಗಳನ್ನು ದೇಶದಲ್ಲಿ ಜಾರಿಗೊಳಿಸುತ್ತಿದ್ದಾರೆ. ಸಿಎಎ ಕಾಯ್ದೆಯಲ್ಲಿ ಮುಸ್ಲಿಮರನ್ನು ಹೊರಗಿಟ್ಟಿರುವುದು ಪ್ರಶ್ನಾರ್ಹವಾಗಿದೆ. ಈ ಕಾಯ್ದೆಯ ಮೂಲಕ ಮುಸ್ಲಿಮರ ವಿರುದ್ದ ಗೂಬೆ ಕೂರಿಸುವುದು ಇವರ ಮೂಲ ಉದ್ದೇಶವಾಗಿದೆ. ಕಾಯ್ದೆಯ ಹಿಂದೆ ನಿರಾಶ್ರಿತರಿಗೆ ಪೌರತ್ವ ನೀಡುವ ಉದಾತ್ತ ಉದ್ದೇಶವಿಲ್ಲದೆ ಮುಸ್ಲಿಮರನ್ನು ಓಡಿಸುವ ಸ್ಪಷ್ಟ ಉದ್ದೇಶವಿದೆ ಎಂದರು. 

ಪೌರತ್ವ ಕಾಯಿದೆ ಹಿಂದೆ ದೊಡ್ಡದೊಂದು ಹಿಡನ್ ಅಜೆಂಡಾ ಅಡಗಿದೆ. ಬ್ರಾಹ್ಮಣಶಾಹಿ ಅಲ್ಲದವರನ್ನು ದೇಶದ ಎರಡನೇ ದರ್ಜೆ ಪ್ರಜೆಗಳನ್ನು ಮಾಡುವ ಹುನ್ನಾರ ಈ ಕಾಯಿದೆ ಮೂಲಕ ನಡೆಯುತ್ತಿದೆ. ಇದನ್ನು ದೇಶ ರಕ್ಷಣೆ ಮಾಡುವ ಜನತೆ ನಮ್ಮ ಬೀದಿ ಸಂಸತ್ತಿನಲ್ಲಿ ಪ್ರಶ್ನೆ ಮಾಡಬೇಕಾಗಿದೆ. ಈ ಪ್ರಶ್ನೆ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಈ ದೇಶದ ಬಡಜನತೆ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದ ಜನತೆಯ ನಾಗರಿಕತ್ವವನ್ನು ಕಿತ್ತುಕೊಳ್ಳುವ ಕಾಯಿದೆಯಾಗಿದೆ. ದೇಶದ ಪಾಲಿಗೆ ಮಾರಕವಾಗಲಿದೆ. ಇಂದು ಸಾಕ್ಷಿ ಪುರಾವೆ ಆಧಾರದಲ್ಲಿ ದೇಶದ ನ್ಯಾಯಾಲಯಗಳು ಕೆಲಸ ನಿರ್ವಹಿಸುತ್ತಿಲ್ಲ. ಹಾಗಾಗಿ ನಾವು ಬೀದಿ ಸಂಸತ್ತಿನಲ್ಲಿ ಉತ್ತರ ಕೊಡಬೇಕಾಗಿದೆ. ದೇಶದಲ್ಲಿ ಇದಕ್ಕಾಗಿ 2ನೇ ದೊಡ್ಡ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಾಗಿದೆ. ಇಲ್ಲದಿದ್ದರೆ  ನಮಗೆ ದೇಶ ದಕ್ಕುವುದು ಕಷ್ಟ ಎಂದು ಅವರು ಹೇಳಿದರು. 

ದೇಶದಲ್ಲಿ ವಲಸಿಗರ ಸಂಖ್ಯೆ ಜಾಸ್ತಿಯಾಗಿದ್ದರೆ ಅದಕ್ಕಾಗಿ ಕಾಯಿದೆ ಮಾಡುವುದಾದರೆ ವಲಸಿಗರ ಪಟ್ಟಿ ತಯಾರಿಸಬೇಕಾಗಿತ್ತು. ಅದರ ಬದಲು ನಾಗರಿಕ ಪಟ್ಟಿ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದ ಅವರು ಈ ದೇಶದಲ್ಲಿ ಹುಟ್ಟಿದವರೆಲ್ಲರೂ ಈ ದೇಶದ ನಾಗರಿಕರಾಗಿದ್ದಾರೆ. ಆದರೆ ಶೇ.40 ಮಂದಿಗೆ ಈ ದೇಶದಲ್ಲಿ ಹುಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಇದು ಕೇವಲ ಮುಸ್ಲಿಂ ಸಮುದಾಯದ ಮಾತ್ರ ಪ್ರಶ್ನೆಯಲ್ಲ. ಎಲ್ಲರ ಪ್ರಶ್ನೆಯಾಗಿದೆ ಎಂದರು. 

ನಮ್ಮ ದೇಶ ಎಲ್ಲಾ ಧರ್ಮಿಯರಿಗೆ ಸೇರಿದೆ. ಹಾಗಾಗಿ ಪೌರತ್ವ ಕಾಯಿದೆಯನ್ನು ಧರ್ಮಾಧಾರಿತವಲ್ಲದೆ ದಮನಿತ ಆಧಾರಿತವಾಗಿ ನಡೆಸಬೇಕು ಎಂದ ಅವರು, 2003ರಲ್ಲಿ ವಾಜಪೇಯಿ ಸರ್ಕಾರವಿದ್ದಾಗ ಈ ಕಾಯಿದೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದು ನಂತರ ಬಂದ ಸರ್ಕಾರಗಳು ಕೂಡಾ ಈ ಕಾಯಿದೆಯನ್ನು ರದ್ದು ಪಡಿಸಲಿಲ್ಲ ಎಂದ ಅವರು ಈ ಕಾಯ್ದೆಯಲ್ಲಿ ಬಡವರು, ದಲಿತರು, ಆದಿವಾಸಿಗಳು ಸೇರಿಂತೆ ಕಾಗದ ಪತ್ರಗಳಿಲ್ಲದ ಮುಸ್ಲಿಮರನ್ನು 2ನೇ ದರ್ಜೆಗೆ ದೂಡುವ ದುರುದ್ದೇಶವಿದೆ ಎಂದು ಆರೋಪಿಸಿದರು.

ಚಿಂತಕ ಮಹೇಂದ್ರ ಕುಮಾರ್ ಕೊಪ್ಪ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯಿದೆ ಕೇವಲ ಮುಸ್ಲಿಮರಿಗೆ ಮಾತ್ರ ಅಪಾಯಕಾರಿಯಲ್ಲ. ಇದು ಇಲ್ಲಿನ ಹಿಂದುಗಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ಕರಾವಳಿಯ ಬಂಟ, ಬಿಲ್ಲವ, ಒಕ್ಕಲಿಗರು ಸೇರಿದಂತೆ ಹಿಂದೂ ಸಮುದಾಯದ ಬಡವರು, ಅನಾಥರು, ಗಿರಿಜನರು ಈ ಕಾಯಿದೆಗೆ ಹೆಚ್ಚು ಬಲಿಯಾಗಲಿದ್ದಾರೆ. ಬಾಂಗ್ಲಾ ವಲಸಿಗರನ್ನು ಮುಂದಿಟ್ಟುಕೊಂಡು ಇಲ್ಲಿನವರಿಗೆ ತೊಂದರೆ ನೀಡುವುದು. ಅವರ ಮತದಾನದ ಹಕ್ಕು ಮತ್ತು ನಾಗರಿಕ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ವಂಚಿತರಾಗಿಸುವ ಈ ಕಾಯಿದೆ ವಿರುದ್ಧ ಹಿಂದುಗಳು ಪ್ರತಿಭಟಿಸುವುದು ಅನಿವಾರ್ಯವಾಗಿದೆ. ಪೌರತ್ವದ ನೈಜ ವಿರೋಧಿಗಳು ಇದೀಗ ಅದಕ್ಕಾಗಿ ಕಾಯ್ದೆ ತಂದು ಧರ್ಮದ ಹೆಸರಿನಲ್ಲಿ ಹಿಂದೂಗಳನ್ನೇ ಬಲಿ ಪಡೆಯುತ್ತಿದ್ದಾರೆ ಎಂಬ ಅರಿವು ನಮಗಿರಬೇಕು. ಅಖಂಡತೆ, ದೇಶಭಕ್ತಿ, ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಾ ಜನರಲ್ಲಿ ಭ್ರಮೆ ಸೃಷ್ಠಿಸಿ ಮನಸ್ಸುಗಳನ್ನು ಛಿದ್ರಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಒಡಕು ಸೃಷ್ಠಿ ಮತ್ತು ಧ್ವೇಷ ಸೃಷ್ಠಿಯ ಮೂಲಕ ದೇಶ ಕಟ್ಟಲು ಸಾಧ್ಯವಿಲ್ಲ. ಶಾಂತಿ, ಪ್ರೀತಿ ಮತ್ತು ಸಾಮರಸ್ಯದಿಂದ ದೇಶವನ್ನು ಕಟ್ಟಬಹುದು. ಬಿಜೆಪಿ ದೇಶವನ್ನು ಒಡೆದು ಹಾಳು ಮಾಡುತ್ತಿದೆ. ವಿರೋಧ ಪಕ್ಷಗಳು ಅದನ್ನು ಕಟ್ಟುವ ಕೆಲಸವನ್ನು ಈ ತನಕ ಮಾಡಿಲ್ಲ. ಇನ್ನಾದರೂ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು. 

ಎಸ್ಕೆಎಸ್ಸೆಫ್ ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮಾತನಾಡಿ ಪೌರತ್ವ ಕಾಯಿದೆ ಒಂದು ಕೋಮಿಗೆ ಸೀಮಿತ ವಿಚಾರವಲ್ಲ. ಸಂವಿಧಾನ ಪರ ಚಿಂತನೆಗಳನ್ನು ನಾಶಪಡಿಸುವ, ದೇಶವನ್ನು ವಿಭಜಿಸುವ ಹುನ್ನಾರ ಕಾಯ್ದೆಯಲ್ಲಿ ಅಡಗಿದೆ. ಹೀಗಾಗಲು ದೇಶಪ್ರೇಮಿಗಳು ಬಿಡಬಾರದು. ಪಾಕಿಸ್ಥಾನದ ಜಿನ್ನಾ ವಿಚಾರವನ್ನು ಜಾತ್ಯಾತೀತವಾಗಿರುವ ಭಾರತದ ಮೇಲೆ ಹೇರುವ ಪ್ರಯತ್ನವನ್ನು ಎಲ್ಲರೂ ಒಟ್ಟಾಗಿ ತಡೆಯುವ ಕೆಲಸ ಮಾಡಬೇಕು ಎಂದರು.

ಧಾರ್ಮಿಕ ಮುಖಂಡ ಅಬೂ ಸುಫ್ಯಾನ್ ಮದನಿ, ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ಕಾಂಗ್ರೇಸ್ ಮುಖಂಡ ಕಾವು ಹೇಮನಾಥ್ ಶೆಟ್ಟಿ, ಪಿಎಫ್‍ಐ ಮುಖಂಡರಾದ ಸಿ.ಎಂ.ನಾಸರ್,  ಶಾಫಿ ಬೆಳ್ಳಾರೆ ಮತ್ತಿತರರು ಮಾತನಾಡಿದರು. 

ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಸಯ್ಯದ್ ಅಹಮ್ಮದ್ ಪೂಕೋಯ ತಂಙಳ್ ಅವರು ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ತಾಲೂಕು ಸಂಯುಕ್ತ ಜಮಾತ್ ಅಧ್ಯಕ್ಷ ಹಾಜಿ ಎಸ್.ಇಬ್ರಾಹಿ ಕಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮುಸ್ಲಿಂ ಜಮಾತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ,  ಕುಂಬ್ರ ಕೆಐಸಿ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ, ಎಸ್ಕೆಎಸ್ಸೆಎಫ್ ಅಧ್ಯಕ್ಷ ತಾಜುದ್ದೀನ್ ರಹ್ಮಾನ್, ವಿವಿಧ ಸಂಘಟನೆಗಳ ಮುಖಂಡರಾದ ಕೆ.ಎಚ್.ಖಾಸಿಂ ಹಾಜಿ ಕೂರ್ನಡ್ಕ, ಮಹಮ್ಮದ್ ಬಡಗನ್ನೂರು, ಬಿ.ಕೆ.ಅಬ್ದುಲ್ ರಝಾಕ್ ಹಾಜಿ, ಯುನಿಟಿ ಹಸನ್ ಹಾಜಿ, ಇಬ್ರಾಹಿಂ ಗೋಳಿಕಟ್ಟೆ, ಅಬ್ದುಲ್ ಅಝೀಝ್ ಕಾವು, ಡಾ.ಸುಕುಮಾರ ಗೌಡ, ಎಂಎಸ್ ಮಹಮ್ಮದ್, ವೆಂಕಪ್ಪ ಗೌಡ ಸುಳ್ಯ, ಬಿ.ಎಸ್.ಶಕೂರ್ ಹಾಜಿ, ಜಾಬೀರ್ ಅರಿಯಡ್ಕ, ನಿರ್ಮಲ್ ಕುಮಾರ್ ಜೈನ್, ಎಚ್.ಮಹಮ್ಮದಾಲಿ, ರಿಜಾಝ್ ಅರೂನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಸ್ಲಿಂ ಒಕ್ಕೂಟದ ಸಂಚಾಲಕ ಅಶ್ರಫ್ ಕಲ್ಲೇಗ ಸ್ವಾಗತಿಸಿದರು. ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್. ಟಿ. ಅಬ್ದುಲ್ ರಝಾಕ್ ಹಾಜಿ ವಂದಿಸಿದರು. ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News