‘ಕವಿ ಫೈಝ್‌ರ ಗೀತೆ ಹಿಂದು ವಿರೋಧಿಯೇ?’ ಎಂಬ ತನಿಖೆ ಕುರಿತು ಐಐಟಿ ಕಾನ್ಪುರ ಮರುಚಿಂತನೆ

Update: 2020-01-03 17:29 GMT

ಲಕ್ನೋ,ಜ.3: ದಶಕಗಳಿಂದಲೂ ಪ್ರತಿಭಟನಾ ಗೀತೆಯಾಗಿ ಬಳಕೆಯಾಗುತ್ತಿರುವ ಪಾಕಿಸ್ತಾನಿ ಕವಿ ಫೈಝ್ ಅಹ್ಮದ್ ಫೈಝ್ ಅವರ ಖ್ಯಾತ ಕವಿತೆ ‘ಹಮ್ ದೇಖೆಂಗೆ ’ ಹಿಂದು ವಿರೋಧಿ ಭಾವನೆಗಳನ್ನು ಪ್ರಚೋದಿಸುತ್ತಿದೆಯೇ ಎಂಬ ಕುರಿತು ತನ್ನ ತನಿಖೆಯಿಂದ ಐಐಟಿ-ಕಾನ್ಪುರ ಹಿಂದೆ ಸರಿಯುತ್ತಿರುವಂತಿದೆ.

 ಗೀತೆಯ ‘ಹಿಂದು ವಿರೋಧಿ’ ಸ್ವರೂಪವು ತನ್ನ ತನಿಖೆಯ ಕೇಂದ್ರಬಿಂದುವಾಗಿದೆ ಎಂದು ಈ ಮೊದಲು ಹೇಳಿದ್ದ ಸಂಸ್ಥೆಯು,ತನಿಖೆಯು ವಿಶಾಲ ವ್ಯಾಪ್ತಿಯನ್ನು ಹೊಂದಿದೆ ಮತ್ತು ವಿದ್ಯಾರ್ಥಿಗಳು ಕಳೆದ ತಿಂಗಳು ಕ್ಯಾಂಪಸ್‌ನಲ್ಲಿ ನಡೆಸಿದ್ದ ಪ್ರತಿಭಟನಾ ಜಾಥಾದ ಸುತ್ತ ಹಲವಾರು ಆರೋಪಗಳಿಗೆ ಸಂಬಂಧಿಸಿದೆ,ಫೈಝ್ ಅವರ ಗೀತೆ ಮತ್ತು ಅದರಲ್ಲಿಯ ವಿಷಯ ಈ ತನಿಖೆಯ ಒಂದು ಮಗ್ಗಲು ಮಾತ್ರವಾಗಿದೆ ಎಂದು ಈಗ ಹೇಳುತ್ತಿದೆ.

 ಉದ್ದೇಶಿತ ತನಿಖೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಐಐಟಿ-ಕಾನ್ಪುರದ ಆಡಳಿತ ವರ್ಗದ ನಿಲುವು ಮೃದುಗೊಂಡಂತಿದೆ. ಸಿಎಎ ವಿರುದ್ಧ ಪ್ರತಿಭಟನೆಗೆ ಸಂಬಂಧಿಸಿದಂತೆ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ತನ್ನ ವಿದ್ಯಾರ್ಥಿಗಳು ಡಿ.17ರಂದು ಕ್ಯಾಂಪಸ್‌ನಲ್ಲಿ ಜಾಥಾದಲ್ಲಿ ಫೈಝ್ ಗೀತೆಯನ್ನು ಹಾಡಿದ್ದರ ಕುರಿತು ದೂರುಗಳು ಬಂದ ಬಳಿಕ ಸಂಸ್ಥೆಯು ತನಿಖಾ ಸಮಿತಿಯೊಂದನ್ನು ರಚಿಸಿತ್ತು. ಡಿ.15ರಂದು ಜಾಮಿಯಾ ವಿದ್ಯಾರ್ಥಿಗಳ ಮೇಲೆ ನಡೆದಿದ್ದ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದರು.

ಕಮ್ಯುನಿಸ್ಟ್ ಮತ್ತು ನಾಸ್ತಿಕರಾಗಿರುವ ಪಾಕಿಸ್ತಾನದ ಸಿಯಾಲಕೋಟ್‌ನ ಉರ್ದು ಕವಿ ಫೈಝ್ 1963ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ಅವರು ವ್ಯವಸ್ಥೆಯ ವಿರುದ್ಧ ದಾಳಿಗಳನ್ನು ನಡೆಸಲು ತನ್ನ ಕವಿತೆಗಳಲ್ಲಿ ಧಾರ್ಮಿಕ ರೂಪಕಗಳನ್ನು ಬಳಸಿದ್ದರು.

 ತನ್ನ ಕ್ರಾಂತಿಕಾರಿ ಬರಹಗಳಿಗಾಗಿ ಫೈಝ್ ಹಲವಾರು ಬಾರಿ ಜೈಲು ಸೇರಿದ್ದರು. 1979ರಲ್ಲಿ ನ್ಯೂಯಾರ್ಕ್‌ನಲ್ಲಿ ಅವರು ‘ಹಮ್ ದೇಖೆಂಗೆ ’ಗೀತೆಯನ್ನು ರಚಿಸಿದ್ದರು. ಅದು ಝುಲ್ಫಿಕರ್ ಅಲಿ ಭುಟ್ಟೋ ಸರಕಾರವನ್ನು ಪದಚ್ಯುತಗೊಳಿಸಿ ತನ್ನನ್ನು ರಾಷ್ಟ್ರಾಧ್ಯಕ್ಷನೆಂದು ಘೋಷಿಸಿಕೊಂಡಿದ್ದ ಪಾಕಿಸ್ತಾನದ ಸರ್ವಾಧಿಕಾರಿ ಝಿಯಾವುಲ್ ಹಕ್ ಅವರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿತ್ತು. 1986ರಲ್ಲಿ ಪಾಕಿಸ್ತಾನಿ ಗಾಯಕಿ ಇಕ್ಬಾಲ್ ಬಾನೊ ಅವರು ಲಾಹೋರಿನಲ್ಲಿ 50,000ಕ್ಕೂ ಅಧಿಕ ಜನಸ್ತೋಮದ ಎದುರು ಮಿಲಿಟರಿ ಆಡಳಿತದ ವಿರುದ್ಧ ಧಿಕ್ಕಾರದ ಗೀತೆಯಾಗಿ ‘ಹಮ್ ದೇಖೆಂಗೆ’ಯನ್ನು ಹಾಡಿದಾಗಿನಿಂದ ಅದು ಮಾದರಿ ಪ್ರತಿಭಟನಾ ಗೀತೆಯಾಗಿ ಜನಪ್ರಿಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News