ಅಮೆರಿಕದ ದಾಳಿಯು ಇರಾಕ್ ಮೇಲಿನ ‘ಅತಿಕ್ರಮಣ’: ಪ್ರಧಾನಿ ಮಹದಿ

Update: 2020-01-03 18:04 GMT

ಬಗ್ದಾದ್, ಜ. 3: ಬಗ್ದಾದ್‌ನ ವಿಮಾನ ನಿಲ್ದಾಣದ ಮೇಲೆ ಅಮೆರಿಕ ನಡೆಸಿರುವ ವಾಯು ದಾಳಿಯು ‘ಅತಿಕ್ರಮಣವಾಗಿದೆ’ ಹಾಗೂ ಅದು ‘ವಿನಾಶಕಾರಿ ಯುದ್ಧವೊಂದಕ್ಕೆ ಕಾರಣವಾಗುತ್ತದೆ’ ಎಂದು ಇರಾಕ್‌ನ ಉಸ್ತುವಾರಿ ಪ್ರಧಾನಿ ಆದಿಲ್ ಅಬ್ದುಲ್ ಮಹದಿ ಶುಕ್ರವಾರ ಹೇಳಿದ್ದಾರೆ.

 ಶುಕ್ರವಾರ ಮುಂಜಾನೆ ನಡೆದ ದಾಳಿಯಲ್ಲಿ ಇರಾನ್ ಮತ್ತು ಇರಾಕ್ ಸೇನಾಧಿಕಾರಿಗಳು ಸಾವಿಗೀಡಾಗಿದ್ದಾರೆ. ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಮುಖ್ಯಸ್ಥ ಕಾಸಿಮ್ ಸುಲೈಮಾನಿ ಮತ್ತು ಇರಾಕ್‌ನ ಪ್ರಭಾವಿ ಹಾಶಿದ್-ಶಾಬಿ ಅರೆ ಸೇನಾ ಪಡೆಯ ಉಪ ಮುಖ್ಯಸ್ಥ ಅಬು ಮಹದಿ ಅಲ್-ಮುಹಾಂದಿಸ್ ಸೇರಿದಂತೆ ಹಲವು ಸೇನಾಧಿಕಾರಿಗಳು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ.

‘‘ಅಧಿಕೃತ ನೆಲೆಯಲ್ಲಿ ಇರಾಕ್ ಸೇನಾಧಿಕಾರಿಯೊಬ್ಬರನ್ನು ಹತ್ಯೆ ಮಾಡುವುದು ಇರಾಕ್, ಅದರ ಸರಕಾರ ಮತ್ತು ಜನರ ವಿರುದ್ಧ ನಡೆಸಿದ ಅತಿಕ್ರಮಣವಾಗಿದೆ’’ ಎಂದು ಅಬ್ದುಲ್ ಮಹದಿ ಹೇಳಿಕೆಯೊಂದರಲ್ಲಿ ತಿಳಿಸಿದರು.

ದಾಳಿಯು ಇರಾಕಿ ನೆಲದಲ್ಲಿ ಅಮೆರಿಕ ಸೈನಿಕರ ಉಪಸ್ಥಿತಿಗೆ ವಿಧಿಸಲಾದ ಶರತ್ತುಗಳ ಉಲ್ಲಂಘನೆಯಾಗಿದೆ ಎಂದು ಇರಾಕ್ ಪ್ರಧಾನಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News