ಭಟ್ಕಳ: ಅಫ್ಫಾನ್ ಕೊಲೆ ಆರೋಪಿಗಳು ತಹಶೀಲ್ದಾರ್ ಮುಂದೆ ಹಾಜರು

Update: 2020-01-03 18:05 GMT

ಭಟ್ಕಳ: ಕಳೆದ 2019, ಅ.19ರಂದು ನಡೆದಿದ್ದ ಭಟ್ಕಳ ಪುರವರ್ಗದ ನಿವಾಸಿ ಅಫ್ಫಾನ್ ಜಬಾಲಿ (25) ಕೊಲೆ ಪ್ರಕರಣದ ಸಂಬಂಧ ಐವರು ಆರೋಪಿಗಳನ್ನು ಗುರುವಾರ ತಹಶೀಲ್ದಾರ್ ವಿ.ಪಿ.ಕೊಟ್ರಳ್ಳಿ ಇವರ ಮುಂದೆ ಹಾಜರುಪಡಿಸಿ ಗುರುತು ಪತ್ತೆ ಪರೇಡ್ ನಡೆಸಲಾಯಿತು.

ಆರೋಪಿಗಳಾದ ಮುಹಮ್ಮದ್ ಇಕ್ಬಾಲ್ (51) ಪುರವರ್ಗ, ಮಂಗಳೂರು ಬಂಟ್ವಾಳ ಪೊಟ್ಟೊಳಿಕೆ ನರಿಂಗಾನ ನಿವಾಸಿ ಮುಹಮ್ಮದ್ ಸಿರಾಜುದ್ದೀನ್, ನಜೀಮ್ (23), ಮಂಗಳೂರು ಬಂಟ್ವಾಳ ತೌಡಿಗೋಳಿಯ ಮುಹಮ್ಮದ್ ಮುಶ್ರಫ್ (19), ಮಂಗಳೂರು ತಲಪಾಡಿಯ ಮುಹಮ್ಮದ್ ಆಶ್ರಫ್ (28) ಇವರೊಂದಿಗೆ ಐವರು ಸಾಕ್ಷಿಗಳು ಹಾಜರಾಗಿ ಆರೋಪಿಗಳ ಗುರುತು ಪತ್ತೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಆರೋಪಿಗಳನ್ನು ಕಾರವಾರ ಜೈಲಿನಿಂದ ಗುರುವಾರ ಮುಂಜಾನೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಭಟ್ಕಳಕ್ಕೆ ಕರೆ ತರಲಾಗಿತ್ತು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಆರೋಪಿಗಳ ಪರೇಡ್ ನಡೆಸಿದ ನಂತರ ಬಾಡಿ ವಾರೆಂಟ್ ಹಿನ್ನೆಲೆಯಲ್ಲಿ ಸಂಜೆ ಭಟ್ಕಳ ಜೆಎಮ್‍ಎಫ್‍ಸಿ ಪ್ರಿನ್ಸಿಪಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಪ್ರಕರಣವನ್ನು ಜ.9ಕ್ಕೆ ಮುಂದೂಡಿದೆ.

ಅಫ್ಫಾನ್ ಕೊಲೆಯಲ್ಲಿ 6 ಜನರ ಪೈಕಿ ಐವರನ್ನು ಈಗಾಗಲೇ ಬಂಧಿಸಲಾಗಿದ್ದು, ತಲೆ ತಪ್ಪಿಸಿಕೊಂಡಿರುವ ಇನ್ನೋರ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News