ಮುಸ್ಲಿಂ ವಿದ್ಯಾರ್ಥಿಗೆ ಬೆದರಿಕೆ ಹಾಕಿ ವಿವಾದಕ್ಕೀಡಾದ ಕೇಂದ್ರ ಸಚಿವ

Update: 2020-01-04 05:41 GMT
ಬಬುಲ್ ಸುಪ್ರಿಯೊ

ಕೊಲ್ಕತ್ತಾ, ಜ. 4: ಬಿಜೆಪಿ ಸಂಸದನ ಶಿಕ್ಷಣ ಮಟ್ಟವನ್ನು ಕೇಳಿದ ಮುಸ್ಲಿಂ ವಿದ್ಯಾರ್ಥಿಯೊಬ್ಬರಿಗೆ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಿರುವ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.

ವಿದ್ಯಾರ್ಥಿ ಹಾಗೂ ಕೇಂದ್ರ ಸಚಿವರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ನಡೆದು ಒಂದು ಹಂತದಲ್ಲಿ ಸಚಿವರು, "ನಿನ್ನ ಸ್ವಂತ ದೇಶಕ್ಕೆ ಅಟ್ಟುತ್ತೇನೆ" ಎಂದು ಧಮಕಿ ಹಾಕಿದ್ದಾರೆ. ಸಚಿವರು ತಮ್ಮ ಹೇಳಿಕೆಗಾಗಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸುವಂತೆ ಮುಸ್ತಾಫಿಝುರ್ರಹ್ಮಾನ್ ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, "ರಹ್ಮಾನ್ ಸರಣಿ ಅಪರಾಧಿ; ಮೂರ್ಖರಿಗೆ ಕ್ಷಮೆ ಯಾಚಿಸುವ ಅಗತ್ಯ ಇಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ವಿದ್ಯಾರ್ಥಿಯ ವಿರುದ್ಧ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೂ ಆತನ ಧರ್ಮಕ್ಕೂ ಸಂಬಂಧ ಇಲ್ಲ ಎಂದು ಸುಪ್ರಿಯೊ ಸಬೂಬು ಹೇಳಿದ್ದಾರೆ.

ಡಿಸೆಂಬರ್ 24ರಂದು ಜೆಯು ವಿವಿ ವಿದ್ಯಾರ್ಥಿನಿ ಚಿನ್ನದ ಪದಕ ಸ್ವೀಕರಿಸುವ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆಯ ಮೊದಲ ಪುಟವನ್ನು ಹರಿದುಹಾಕಿ ಪ್ರತಿಭಟನೆ ವ್ಯಕ್ತಪಡಿಸಿದ್ದನ್ನು ಆಕ್ಷೇಪಿಸಿ ಡಿಸೆಂಬರ್ 26ರಂದು ಸುಪ್ರಿಯೊ ಟ್ವೀಟ್ ಮಾಡಿದಲ್ಲಿಂದ ವಿದ್ಯಾರ್ಥಿ ಹಾಗೂ ಸಚಿವರ ನಡುವೆ ಅಕ್ಷರ ಸಮರ ನಡೆಯುತ್ತಿತ್ತು. ಮರುದಿನ ರಹ್ಮಾನ್, ಸಚಿವರ ಫೇಸ್‌ಬುಕ್ ಪೋಸ್ಟ್‌ನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಸುಪ್ರಿಯೊ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ವಿದ್ಯಾರ್ಹತೆಯನ್ನು ಪ್ರಶ್ನಿಸಿದ್ದರು.

ಇದರಿಂದ ಕುಪಿತರಾದ ಸಚಿವರು, " ರಹ್ಮಾನ್ ನಿಮ್ಮನ್ನು ಮೊದಲು ನಿಮ್ಮ ದೇಶಕ್ಕೆ ಗಂಟುಮೂಟೆ ಕಟ್ಟಿಸುತ್ತೇನೆ. ಆ ಬಳಿಕ ಪೋಸ್ಟ್‌ಕಾರ್ಡ್‌ನಲ್ಲಿ ನನ್ನ ಉತ್ತರ ಕಳಿಸುತ್ತೇನೆ" ಎಂದು ಪ್ರತಿಕ್ರಿಯೆ ನೀಡಿದ್ದರು. ರಹ್ಮಾನ್ ಅವರು ಬಿರ್‌ಭುಂ ಜಿಲ್ಲೆ ಇಲಾಂಬಜಾರ್ ಕಾಲೇಜಿನ ಅಂತಿಮ ವರ್ಷದ ರಸಾಯನಶಾಸ್ತ್ರ ವಿದ್ಯಾರ್ಥಿ. "ನಾನು ಭಾರತೀಯ ಹಾಗೂ ಬಂಗಾಲಿ ಎಂದು ಸಾಬೀತುಪಡಿಸಲು ಅಗತ್ಯ ದಾಖಲೆಗಳು ನನ್ನಲ್ಲಿವೆ. ಬಂಗಾಳಿಗಳನ್ನು ಹೇಗೆ ಗೌರವಿಸಬೇಕು ಎನ್ನುವುದು ನಿಮಗೆ ತಿಳಿದಿಲ್ಲ. ಹಾಗಿದ್ದರೂ ನೀವು ರಾಜ್ಯದ ಸಂಸದರು. ನೀವು ದಿನಾ ಗೋಮೂತ್ರ ಸೇವಿಸುತ್ತಿದ್ದೀರಾ ?" ಎಂದು ರಹ್ಮಾನ್ ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗೆ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

ಬಂಗಾಲಿ ಸಮುದಾಯದವರ ಹಿತರಕ್ಷಣೆಗಾಗಿ ಇರುವ ಜಾತೀಯ ಬಾಂಗ್ಲಾ ಸಮ್ಮೇಳನ್ ಸಂಘಟನೆ, ಸಚಿವರ ಹೇಳಿಕೆ ವಿರುದ್ಧ ಜಾಧವಪುರದಲ್ಲಿ ಪ್ರತಿಭಟನೆ ನಡೆಸಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದೆ. ಸಚಿವರ ದ್ವೇಷಪೂರಿತ ಹೇಳಿಕೆ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆಯ ಸಿದ್ಧವ್ರತ ದಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News