×
Ad

ಕಾಪು : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

Update: 2020-01-04 23:16 IST

ಕಾಪು : ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಪೌರತ್ವ ಕಾಯ್ದೆಯು ಭಾರತೀಯ ಪ್ರಜೆಗಳ ಒಗ್ಗಟ್ಟನ್ನು ಒಡೆಯುವ ಯತ್ನವಾಗಿದೆ ಎಂದು ಹಿರಿಯ ಚಿಂತಕ ಫಣಿರಾಜ್ ಹೇಳಿದರು.

ಜಾತ್ಯಾತೀತ ನಾಗರಿಕ ಸಮಿತಿ ಕಾಪು ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಶನಿವಾರ ಕಾಪು ಪೇಟೆಯಲ್ಲಿ ಎನ್.ಆರ್.ಸಿ, ಸಿ.ಎ.ಎ ಮತ್ತು ಎನ್.ಪಿ.ಆರ್ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಮೂಲಕವಾಗಿ ದೇಶದ ಹಿಂದೂಗಳನ್ನು ಒಡೆಯುವ ಮತ್ತು ಜನರೊಳಗಿನ ಐಕ್ಯತೆಯನ್ನು ಮುರಿಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದು ಕೇವಲ ಒಂದು ಕಾಯ್ದೆ ಅಲ್ಲ. ಬದಲಾಗಿ ದೇಶದ ಜನರನ್ನು ಮರಳುಗೊಳಿಸುವ ದೊಡ್ಡ ಅಜೆಂಡಾ ಆಗಿದೆ. ಹಿಂದುತ್ವದ ಸಂವಿಧಾನವನ್ನು ಜಾರಿಗೆ ತರಲು ಮಾಡುತ್ತಿರುವ ಪ್ರಯತ್ನವಾಗಿದೆ. ಈ ಕಾರಣದಿಂದ ನಾವೆಲ್ಲರೂ ಒಗ್ಗೂಡಿ ಕಾಯ್ದೆಯನ್ನು ವಿರೋಧಿಸುವ ಅಗತ್ಯತೆಯಿದೆ. ದೇಶದ ಪ್ರಜೆಗಳನ್ನು ಮತದ ಆಧಾರದ ಮೇಲೆ ವಿಂಗಡಿಸಿ ಪೌರತ್ವವನ್ನು ನೀಡದೇ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸಮುದಾಯದ ಜನರಿಗೆ ಪೌರತ್ವ ನೀಡುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು.

ಪತ್ರಕರ್ತ ಹರ್ಷ ಕುಮಾರ್ ಮಾತನಾಡಿ, ಸಿಎಎ ಹಾಗೂ ಎನ್‍ಆರ್‍ಸಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂದೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನಾವೂ ಕೂಡಾ ಈ ಕಾಯ್ದೆಯನ್ನು ವಾಪಾಸು ತೆಗೆದುಕೊಳ್ಳುವವರೆಗೆ ಪ್ರತಿಭಟನೆ ಹಿಂದೆಗೆದು ಕೊಳ್ಳುವುದಿಲ್ಲ. ಈ ಕಾಯ್ದೆಯನ್ನು ಹಿಂದೆಗೆದುಕೊಳ್ಳುವವೆಗೆ ಅಹಿಂಸಾತ್ಮಕವಾಗಿ ಹೋರಾಟಗಳನ್ನು ನಡೆಸುತ್ತೇವೆ ಎಂದು ಎಚ್ಚರಿಸಿದರು.

ಕ್ರೈಸ್ತ ಧರ್ಮಗುರು ಫಾ. ವಿಲಿಯಂ ಮಾರ್ಟಿಸ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆ ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದೆ. ಈ ಕಾಯ್ದೆ ಕೇವಲ ಮುಸಲ್ಮಾನರಿಗೆ ಮಾತ್ರ ಬಾಧಕವಲ್ಲ. ಬದಲಾಗಿ ಇದರಿಂದ ಎರಡನೇ ಹಂತದಲ್ಲಿ ಕ್ರಿಶ್ಚಿಯನ್ ಮತ್ತು ಮೂರನೇ ಹಂತದಲ್ಲಿ ಹಿಂದೂಗಳಿಗೂ ತೊಂದರೆಯಾಗಲಿದೆ. ಈ ಬಗ್ಗೆ ಜನ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ನಾವೆಲ್ಲಾ ಈ ಕಾಯ್ದೆಗೆ ಬಲಿಯಾಗುವುದು ಖಂಡಿತ ಎಂದರು.

ಉಡುಪಿ ಜಿಲ್ಲಾ ಉಲಮಾ ಒಕ್ಕೂಟದ ಅಶ್ರಫ್ ಸಖಾಫಿ ಕಣ್ಣಂಗಾರು ಮಾತನಾಡಿ, ದೇಶದ ಸ್ವಾತಂತ್ರಕ್ಕಾಗಿ ಎಲ್ಲಾ ಧರ್ಮೀಯರು ಹೋರಾಟ ನಡೆಸಿದ್ದಾರೆ. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಸೌಹಾರ್ದತೆಯಿಂದ ಬದುಕುತಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಸಾರಿದ ರಾಷ್ಟ್ರ ನಮ್ಮದಾಗಿದ್ದು ಇದನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಶಾಂತಿಯ ವಾತಾವರಣ ವನ್ನು ಮುಂದುವರೆಸಿಕೊಂಡು ಹೋಗಲು ಸರ್ವರ ಒಗ್ಗಟಿನ ಹೋರಾಟ ನಡೆಯಬೇಕಿದೆ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಶೇಖರ್ ಹೆಜಮಾಡಿ, ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಯು.ಆರ್. ಸಭಾಪತಿ, ಕಾಮ್ರೆಡ್ ವಿಶ್ವನಾಥ ರೈ, ಕಾಮ್ರೆಡ್ ಬಾಲಕೃಷ್ಣ ಶೆಟ್ಟಿ ಮೊದಲಾದವರು ಮಾತನಾಡಿದರು.

ಅಲ್‍ ಇಹ್ಸಾನ್ ಸಂಸ್ಥೆಯ ವಿದ್ಯಾರ್ಥಿಗಳು ಸೌಹಾರ್ದತೆಯ ಹಾಡು ಹಾಡಿದರು. ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಗಮನಸೆಳೆದರು. ವಿವಿಧ ಸಂಘಟನೆಗಳ ನಾಯಕರು, ಕಾರ್ಯಕರ್ತರು ಭಾಗವಹಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ವಿವಿಧ ಸಂಘಟನೆಗಳ ಪ್ರಮುಖರಾದ ಮುಸ್ತಫಾ ಸಅದಿ, ಎಂ.ಪಿ. ಮೊೈಯ್ದಿನಬ್ಬ, ಗುಲಾಂ ಮಹಮ್ಮದ್, ಸುಧಾಕರ ಕೋಟ್ಯಾನ್ ಕಾರ್ಕಳ, ಶಿವಾಜಿ ಸುವರ್ಣ, ಶಭಿ ಅಹಮದ್ ಖಾಜಿ, ವಾಸುದೇವ ಯಡಿಯಾಳ್, ವೆರೋನಿಕಾ ಕರ್ನೇಲಿಯೋ, ನೀರೆ ಕೃಷ್ಣ ಶೆಟ್ಟಿ, ಶಂಕರ ಕುಂದರ್, ಅಣ್ಣಯ್ಯ ಶೇರಿಗಾರ್, ಮಂಜುನಾಥ ಪೂಜಾರಿ, ವಿಕ್ರಂ ಕಾಪು, ಮಾಧವ ಆರ್. ಪಾಲನ್, ಸರಸು ಡಿ. ಬಂಗೇರ, ನಾಗೇಶ್ ಕುಮಾರ್ ಉದ್ಯಾವರ, ಮಹಮ್ಮದ್ ಫಾರೂಕ್ ಚಂದ್ರನಗರ, ದೀಪಕ್ ಕುಮಾರ್ ಎರ್ಮಾಳ್, ಅಬ್ದುಲ್ ಅಝೀಝ್ ಹೆಜಮಾಡಿ, ಎಚ್. ಅಬ್ದ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ಜಾತ್ಯಾತೀತ ನಾಗರಿಕ ಸಮಿತಿಯ ಅಧ್ಯಕ್ಷ  ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್ ಕಾರ್ಯಕ್ರಮ ನಿರೂಪಿಸಿದರು. ಸಂಘಟಕ ಕೆ. ಹರೀಶ್ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News