×
Ad

​ಆನ್‌ಲೈನ್ ಚಾಯ್ ವಹಿವಾಟು ಕುದುರಲು ಕಾರಣವಾದ ಅಂಶ ಏನು ಗೊತ್ತೇ ?

Update: 2020-01-05 09:13 IST

ಹೊಸದಿಲ್ಲಿ: ಆನ್‌ಲೈನ್‌ನಲ್ಲಿ ಚಹಾ ಆರ್ಡರ್ ಮಾಡುವ ವ್ಯವಸ್ಥೆ ದೇಶದಲ್ಲಿ ಜನಪ್ರಿಯಗೊಳ್ಳುತ್ತಿದ್ದು, ಇದಕ್ಕೆ ಕಾರಣ ಬಿಸಿ ಉಳಿಯುವ, ಸರಳ ಕಾರ್ಡ್‌ಬೋರ್ಡ್ ಫ್ಲಾಸ್ಕ್‌ನ ಅನುಶೋಧನೆ. ಇದರಿಂದಾಗಿ ಹೋಟೆಲ್‌ಗಳು ತಾಜಾ ಚಹಾವನ್ನು ನಗರದ ಎಲ್ಲೆಡೆ ಗ್ರಾಹಕರಿಗೆ ಪೂರೈಸುವುದು ಸಾಧ್ಯವಾಗಲಿದೆ.

ಈ ಹೊಸ ವ್ಯವಸ್ಥೆಯಿಂದಾಗಿ ತಾಜಾ ಚಹಾಗೆ ಬೇಡಿಕೆ ಹೆಚ್ಚಿದೆ. "ಪ್ರತಿ ವರ್ಷದಿಂದ ವರ್ಷಕ್ಕೆ ನಮ್ಮ ಚಹಾ ಸರಬರಾಜು ವಹಿವಾಟು ದುಪ್ಪಟ್ಟಾಗುತ್ತಿದೆ" ಎಂದು ಚಾಯ್ ಪಾಯಿಂಟ್ ಕೆಫೆ ಜಾಲದ ಮಾಲಕರು ಹೇಳುತ್ತಾರೆ.

ಒಟ್ಟು ಚಹಾ ಬೇಡಿಕೆಯಲ್ಲಿ ಶೇಕಡ 25ರಷ್ಟು ಬೇಡಿಕೆ ಇದೀಗ ಆನ್‌ಲೈನ್ ಮೂಲಕ ಬರುತ್ತಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡ 50ರಷ್ಟು ಹೆಚ್ಚುತ್ತಿದೆ. ಚಾಯ್‌ಪಾಯಿಂಟ್ ಹಾಗೂ ಚಾಯೋಸ್ 2014ರಿಂದ ಆನ್‌ಲೈನ್ ಚಹಾ ವಿತರಣೆ ವ್ಯವಸ್ಥೆ ಆರಂಭಿಸಿವೆ.

ಇಟ್ಟಿಗೆ ಮತ್ತು ಗಾರೆಯವರಿಗೆ ಚಹಾ ಪೂರೈಸುವ ವಹಿವಾಟು ಆರಂಭಿಸಿದ್ದೆವು. ಆದರೆ ಇದೀಗ ಕಾರ್ಡ್‌ಬೋರ್ಡ್ ಫ್ಲಾಸ್ಕ್‌ಗಳು ನಮ್ಮ ವಹಿವಾಟನ್ನು ಗೌರವಯುತಗೊಳಿಸಿವೆ" ಎಂದು ಚಾಯ್ ಪಾಯಿಂಟ್ ಸಹಸಂಸ್ಥಾಪಕ ಅಮುಲೀಕ್ ಸಿಂಗ್ ಹೇಳುತ್ತಾರೆ.

ಇದನ್ನು ಆರಂಭಿಸಿದ ಬಳಿಕ ಚಹಾ ವಿತರಣೆ ವ್ಯವಹಾರ ಶೇಕಡ 50ರಷ್ಟು ಹೆಚ್ಚಿದೆ ಎಂದು ಅವರು ವಿವರಿಸುತ್ತಾರೆ. ಈ ಕಾರ್ಡ್‌ಬೋರ್ಡ್ ಫ್ಲಾಸ್ಕ್‌ನಲ್ಲಿ 90 ನಿಮಿಷ ಕಾಲ ಚಹಾ ತಾಜಾ ಹಾಗೂ ಬಿಸಿಯಾಗಿ ಉಳಿಯುತ್ತದೆ. ಭಾರತದಲ್ಲಿ ಸಿದ್ಧವಾಗುವ ಕಾರ್ಡ್‌ಬೋರ್ಡ್ ಫ್ಲಾಸ್ಕ್ ಬೆಲೆ 30 ರೂ. ಇದ್ದರೆ, ಆಮದು ಫ್ಲಾಸ್ಕ್ ಬೆಲೆ 350 ರೂ.

ಕಚೇರಿಗಳಲ್ಲಿ ಬಹುತೇಕ ಉದ್ಯೋಗಿಗಳು ಚಹಾ ಸೇವನೆಗೆ ಪಕ್ಕದ ಚಹಾ ಅಂಗಡಿ ಅಥವಾ ವೆಂಡಿಂಗ್ ಮೆಷಿನ್‌ಗಳತ್ತ ನಡೆದು ಹೋಗಬೇಕಿತ್ತು. ಅವರ ಆಯ್ಕೆಗಳು ಸೀಮಿತವಾಗಿದ್ದವು. ಆದರೆ ಚಾಯ್ ಪಾಯಿಂಟ್ ಹಾಗೂ ಚಾಯೋಸ್ ಇದೀಗ ಶಾಹಿ ಚಹಾ, ಪಹದಿ ಚಾಯ್, ಆಮ್ ಪಪಡ್ ಚಾಯ್, ಜಿಂಜರ್ ಚಾಯ್, ಬೆಲ್ಲದ ಚಹಾ, ಸುಲೆಮಾನಿ ಚಾಯ್ ಹೀಗೆ ವಿಭಿನ್ನ ರುಚಿ ವೈವಿಧ್ಯ ನೀಡುತ್ತಿವೆ.

ಇಂಥ ಬಳಸಿ ಬಿಸಾಕುವ ಫ್ಲಾಸ್ಕ್‌ಗಳನ್ನು ದೇಶದಲ್ಲಿ ಪರಿಚಯಿಸಿದ ಮೊಟ್ಟಮೊದಲ ಸಂಸ್ಥೆ ನಮ್ಮದು ಎಂದು ಸಿಂಗ್ ಹೇಳುತ್ತಾರೆ. ಜನ ಚಹಾಗಾಗಿ ಫ್ಲಾಸ್ಕ್ ಒಯ್ಯಬೇಕಾದ ಸ್ಥಿತಿಯನ್ನು ಕಂಡು ಕಾರ್ಡ್‌ಬೋರ್ಡ್ ಫ್ಲಾಸ್ಕ್ ಆರಂಭಿಸುವ ಯೋಚನೆ ಬಂದಿದ್ದಾಗಿ ಅವರು ಹೇಳುತ್ತಾರೆ.

"ಮೊದಲು ಸಾಂಪ್ರದಾಯಿಕ ಫ್ಲಾಸ್ಕ್ ಸೌಲಭ್ಯ ಆರಂಭಿಸಿದೆವು. ಆದರೆ ಅವುಗಳನ್ನು ಮತ್ತೆ ಸಂಗ್ರಹಿಸಿ ಶುಚಿಗೊಳಿಸುವುದು ಸಮಸ್ಯೆಯಾಯಿತು. ಆಗ ಜಾಗತಿಕ ಕಾರ್ಡ್‌ಬೋರ್ಡ್ ಫ್ಲಾಸ್ಕ್ ಉತ್ಪಾದಿಸುವ ಜಾಗತಿಕ ಉತ್ಪಾದಕರನ್ನು ಸಂಪರ್ಕಿಸಿದೆವು" ಎಂದು ಹಾರ್ವರ್ಡ್ ಬ್ಯುನಿನೆಸ್ ಸ್ಕೂಲ್ ದಿನಗಳಲ್ಲಿ ಡಂಕಿನ್ ದಂಟಸ್ ಸಂಸ್ಥೆ ಇಂಥ ಫ್ಲಾಸ್ಕ್‌ಗಳಲ್ಲಿ ಪೂರೈಸುತ್ತಿದ್ದ ಚಹಾ ನೆನಪಿಸಿಕೊಂಡು ಸಿಂಗ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News