ರಣಜಿ ಟ್ರೋಫಿ: ಮುಂಬೈ ವಿರುದ್ಧ ಕರ್ನಾಟಕ ಮೇಲುಗೈ

Update: 2020-01-05 04:36 GMT

ಮುಂಬೈ, ಜ.4: ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅಲ್ಪ ಮುನ್ನಡೆ ಪಡೆದಿರುವ ಕರ್ನಾಟಕ ತಂಡ ಎರಡನೇ ಇನಿಂಗ್ಸ್ ಆರಂಭಿಸಿರುವ ಮುಂಬೈ ತಂಡಕ್ಕೆ ಆರಂಭಿಕ ಆಘಾತ ನೀಡುವುದರೊಂದಿಗೆ ಮೇಲುಗೈ ಸಾಧಿಸಿದೆ.

ಎರಡನೇ ದಿನವಾದ ಶನಿವಾರ 3 ವಿಕೆಟ್ ನಷ್ಟಕ್ಕೆ 79 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ ಆರಂಭಿಕ ಆಟಗಾರ ಆರ್.ಸಮರ್ಥ್(86, 139 ಎಸೆತ, 13 ಬೌಂಡರಿ), ವಿಕೆಟ್‌ಕೀಪರ್ ಶರತ್(46, 54 ಎಸೆತ, 7 ಬೌಂಡರಿ,1 ಸಿಕ್ಸರ್)ಹಾಗೂ ಎಸ್.ಗೋಪಾಲ್(31, 85 ಎಸೆತ) ಹೋರಾಟದ ಹೊರತಾಗಿಯೂ 68.5 ಓವರ್‌ಗಳಲ್ಲಿ 218 ರನ್ ಗಳಿಸಿ ಆಲೌಟಾಯಿತು. ಮೊದಲ ಇನಿಂಗ್ಸ್‌ನಲ್ಲಿ 24 ರನ್ ಮುನ್ನಡೆ ಪಡೆಯಿತು.

ದೊಡ್ಡ ಮೊತ್ತ ಗಳಿಸುವ ಹುಮ್ಮಸ್ಸಿನೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಮುಂಬೈ ದಿನದಾಟದಂತ್ಯಕ್ಕೆ 36 ಓವರ್‌ಗಳಲ್ಲಿ 109 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.

ಮುಂಬೈ 26 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಸರ್ಫರಾಝ್ ಖಾನ್(ಔಟಾಗದೆ 53, 92 ಎಸೆತ, 6 ಬೌಂಡರಿ,2 ಸಿಕ್ಸರ್)ಹಾಗೂ ಮುಲಾನಿ(31, 71 ಎಸೆತ, 5 ಬೌಂಡರಿ)5ನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿ ತಂಡವನ್ನು ಆಧರಿಸಿದರು. ದಿನದ ಕೊನೆಯ ಎಸೆತದಲ್ಲಿ ಮುಲಾನಿ ವಿಕೆಟ್ ಪಡೆದ ಕೌಶಿಕ್ ಮುಂಬೈಗೆ ಶಾಕ್ ನೀಡಿದರು.

4.4 ಓವರ್‌ಗಳಲ್ಲಿ ಭಾರತದ ಬ್ಯಾಟ್ಸ್ ಮನ್ ಹಾಗೂ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ವಿಕೆಟ್ ಒಪ್ಪಿಸಿದರು. ರಹಾನೆ ಕೇವಲ 1 ರನ್ ಗಳಿಸಿ ಅಭಿಮನ್ಯು ಮಿಥುನ್‌ಗೆ(3-52)ವಿಕೆಟ್ ಒಪ್ಪಿಸಿದರು. ಸಿದ್ಧೇಶ್ ಲಾಡ್(4) ಹಾಗೂ ಆದಿತ್ಯ ತಾರೆ(6)ಒಂದಂಕಿ ಸ್ಕೋರ್ ಗಳಿಸಿ ಔಟಾದರು. ಮೊದಲ ಇನಿಂಗ್ಸ್‌ನಲ್ಲಿ ಏಕಾಂಗಿ ಹೋರಾಟ ನೀಡಿದ್ದ ನಾಯಕ ಸೂರ್ಯ ಕುಮಾರ್ ಯಾದವ್ ಕೇವಲ 10 ರನ್ ಗಳಿಸಿ ವಿಕೆಟ್‌ಒಪ್ಪಿಸಿದರು.

ಕರ್ನಾಟಕದ ಪರ ಮಿಥುನ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಕೌಶಿಕ್(2-11)ಎರಡು ವಿಕೆಟ್ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್

► ಮುಂಬೈ ಮೊದಲ ಇನಿಂಗ್ಸ್: 194/10

ಕರ್ನಾಟಕ: ಮೊದಲ ಇನಿಂಗ್ಸ್: 218/10

(ಆರ್.ಸಮರ್ಥ್ 86, ಶರತ್ 46,ದೇವದತ್ತ ಪಡಿಕ್ಕಲ್ 32,ಎಸ್. ಗೋಪಾಲ್ 31, ಶಶಾಂಕ್ ಅಟ್ಟಾರ್ಡೆ 5-58, ಮುಲಾನಿ 3-55)

► ಮುಂಬೈ ಎರಡನೇ ಇನಿಂಗ್ಸ್: 36 ಓವರ್‌ಗಳಲ್ಲಿ 109/5

(ಸರ್ಫರಾಝ್ ಖಾನ್ ಔಟಾಗದೆ 53, ಮುಲಾನಿ 31, ಮಿಥುನ್ 3-52, ಕೌಶಿಕ್ 2-11)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News