×
Ad

ಜ.8ರ ಮುಷ್ಕರ ಬೆಂಬಲಿಸುವಂತೆ ಕಾರ್ಮಿಕರಿಂದ ಪಾದಯಾತ್ರೆ

Update: 2020-01-05 18:25 IST

ಕುಂದಾಪುರ, ಜ.5: ಜನವರಿ 8ರಂದು ನಡೆಯುವ ಕಾರ್ಮಿಕರ ಅಖಿಲ ಭಾರತ ಮುಷ್ಕರವನ್ನು ಸಾರ್ವಜನಿಕರು ಬೆಂಬಲಿಸುವಂತೆ ಗಂಗೊಳ್ಳಿ ಕಟ್ಟಡ ಕಾರ್ಮಿಕರು ಗಂಗೊಳ್ಳಿ ಪೇಟೆಯಲ್ಲಿ ಇಂದು ಪಾದಯಾತ್ರೆ ನಡೆಸಿ ಮನವಿ ಮಾಡಿದರು.

 ಸರಕಾರ ಮರಳು ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶ ಮಾಡಬೇಕು ಮತ್ತು ಕಟ್ಟಡ ಕಾರ್ಮಿಕ ಕಾನೂನು ತಿದ್ಧುಪಡಿ ಕೈಬಿಡಬೇಕು ಎಂದು ಒತ್ತಾಯಿಸಿ ಈ ಮುಷ್ಕರ ನಡೆಯಲಿದೆ ಎಂದು ಕಾರ್ಮಿಕರು ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಗಂಗೊಳ್ಳಿ ಘಟಕ ಅಧ್ಯಕ್ಷ ಚಿಕ್ಕ ಮೊಗವೀರ, ಕಾರ್ಯದರ್ಶಿ ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಅದೇ ರೀತಿ ಕಾರ್ಮಿಕರ, ಜನಸಾಮಾನ್ಯರ ರಾಷ್ಟ್ರೀಯ ಬೇಡಿಕೆಗಳ ಜೊತೆ ಜಿಲ್ಲೆಯ ಸಮಸ್ಯೆಗಳಾದ ಮರಳು ಸಮಸ್ಯೆ ಪರಿಹರಿಸಲು, ರಾಷ್ಟ್ರೀಯ ಹೆದ್ದಾರಿ ಶೀಘ್ರ ಪೂರ್ಣಗೊಳಿಸಲು, ಕುಂದಾಪುರ ಪ್ಲೈಓವರ್ ಕಾಮಗಾರಿ ತ್ವರಿತವಾಗಿ ಮುಗಿಸಲು ಆಗ್ರಹಿಸಿ ಜ.8ರ ಮುಷ್ಕರವನ್ನು ಬೆಂಬಲಿಸುವಂತೆ ಒತ್ತಾಯಿಸಿ ಜ.4ರಂದು ಕುಂದಾಪುರ ನಗರದಲ್ಲಿ ಕಾರ್ಮಿಕ ಸಂಘಟನೆಗಳು ಪಾದಯಾತ್ರೆ ನಡೆಸಿದವು.

ಮುಷ್ಕರ ಪ್ರಯುಕ್ತ ಜ.8ರಂದು ಬೆಳಿಗ್ಗೆ ಕುಂದಾಪುರ ಶಾಸ್ತ್ರಿ ವೃತ್ತದಿಂದ ಮೆರವಣಿಗೆ ಹೊರಟು ಶಾಸ್ತ್ರಿ ವೃತ್ತದಲ್ಲಿ ಸಮಾಪ್ತಿಗೊಳ್ಳಲಿದೆ. ಎಲ್ಲಾ ಸಂಘಟನೆ ಗಳ ಕಾರ್ಮಿಕರು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೆಸಿಟಿಯು ತಿಳಿಸಿದೆ. ಈ ಪಾದಯಾತ್ರೆಯಲ್ಲಿ ಜೆಸಿಟಿಯು ಮುಖಂಡರಾದ ಎಚ್. ನರಸಿಂಹ, ಮಹಾಬಲ ವಡೇರಹೋಬಳಿ, ಸುರೇಶ್ ಕಲ್ಲಾಗರ, ಮಾಣಿ ಉದಯ ಮೊದಲಾದವರು ಉಪಸ್ಥಿತರಿದ್ದರು.

ಸಂಘಟನೆಗಳ ಬೆಂಬಲ: ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಜನವಾದಿ ಮಹಿಳಾ ಸಂಘಟನೆ, ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಕುಂದಾಪುರ ಬೀಡಿ ವರ್ಕಸ್ ಯೂನಿಯನ್, ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘ ಬೆಂಬಲಿಸಿ ಭಾಗವಹಿಸಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News