ಮೋದಿ ಸರಕಾರ ಭಾರತೀಯರನ್ನೇ ನಿಮ್ಮ ದೇಶ ಯಾವುದು ಎಂದು ಪ್ರಶ್ನಿಸಲು ಹೊರಟಿದೆ : ಶಶಿಕಾಂತ್ ಸೆಂಥಿಲ್
ಉಳ್ಳಾಲ : ಮೋದಿ ಸರಕಾರ ಎಲ್ಲರಲ್ಲಿ ದೇಶದ ಬಗ್ಗೆ ಪ್ರಶ್ನಿಸಿ ಈಗ ಭಾರತೀಯರಲ್ಲೇ ನಿಮ್ಮ ದೇಶ ಯಾವುದು ಎಂದು ಪ್ರಶ್ನಿಸಲು ಹೊರಟಿದೆ. ಎನ್ ಆರ್ ಸಿ ತಿದ್ದುಪಡಿ ಕಾಯ್ದೆ ಘೋಷಿಸಿ ಭಾರತೀಯರನ್ನು ವಿಂಗಡಣೆ ಮಾಡಲು ಹೊರಟಿದೆ. ಇದಕ್ಕೆ ಸಾವಿರ ವರ್ಷವಾದರೂ ಅವಕಾಶ ನೀಡುವುದಿಲ್ಲ ಎಂದು ದ.ಕ.ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.
ಅವರು ಉಳ್ಳಾಲ ಮುಸ್ಲಿಂ ಒಕ್ಕೂಟ ಇದರ ಆಶ್ರಯ ದಲ್ಲಿ ಉಳ್ಳಾಲ ಹಝ್ರತ್ ಶಾಲೆ ಬಳಿಯ ಮೈದಾನದಲ್ಲಿ ರವಿವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು.
ಎನ್ ಆರ್ ಸಿ, ಸಿಎಎ ಮೂಲಕ ಜನರ ಮೇಲೆ ಸವಾರಿ ಮಾಡಲು ಸರ್ಕಾರದ ಚಿಂತನೆ ಇರಬಹುದು. ಆದರೆ ಜನರನ್ನು ವಿಂಗಡಿಸಿ ಸಂಘರ್ಷ ಸೃಷ್ಟಿ ಮಾಡಲು ಸಾಧ್ಯವಿಲ್ಲ. ನಾವು ಎನ್ ಆರ್ ಸಿಗೆ ಬದ್ಧರಾಗಲು ತಯಾರಿಲ್ಲ. ಇದರಲ್ಲಿ ಅವರಿಗೆ ಯಶಸ್ವಿ ಆಗಲು ಸಾಧ್ಯವಿಲ್ಲ. ನಾನಂತೂ ಇದಕ್ಕೆ ತಯಾರಿಲ್ಲ. ಜೈಲಿಗೆ ನನ್ನನ್ನು ಕಳುಹಿಸುವುದಾದರೆ ಮೊದಲು ಮಾಹಿತಿ ನೀಡಿ ಕಳುಹಿಸಲಿ. ಇದನ್ನು ಎದುರಿಸಲು ಸಿದ್ಧ ಎಂದು ಅವರು ಹೇಳಿದರು.
ದಲಿತ ಮುಖಂಡ ಅಶೋಕ್ ಕೊಂಚಾಡಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನೀಡುವುದಿಲ್ಲ. ಪ್ರತಿಭಟನೆಗೆ ಅನುಮತಿ ನೀಡದ ದಿನದಂದು ಮಂಗಳೂರಿನಲ್ಲಿ ಏಳು ಸಾವಿರ ಜನ ಸೇರಿದ್ದರು ಎಂದು ಪೊಲೀಸ್ ಕಮಿಷನರ್ ಹರ್ಷ ಹೇಳಿದ್ದಾರೆ. ಇಷ್ಟ ಜನ ಎಲ್ಲಿಂದ ಬಂದಿದ್ದಾರೆ ಎಂದು ಪೊಲೀಸ್ ಇಲಾಖೆ ಹೇಳಬೇಕು. ಆ ದಿನದಂದು ಸೇರಿದ್ದ ಸುಮಾರ 200 ಜನರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎನ್ನುವುದು ಅವರ ವೈಫಲ್ಯವನ್ನು ತೋರಿಸುತ್ತದೆ. ಗುಂಡು ಹಾರಿಸಲು ಪೊಲೀಸರಿಗೆ ಕೇಂದ್ರದ ಆದೇಶ ಇದೆ. ಮುಖ್ಯಮಂತ್ರಿಗೆ ಸ್ವಂತಿಕೆ ಇಲ್ಲ. ಗುಂಡಿನ ದಾಳಿಗೆ ಬಲಿಯಾದ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ಕೊಡುವಷ್ಟು ಅರ್ಹತೆ ಇಲ್ಲದ ಮುಖ್ಯಮಂತ್ರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ದಿನೇಶ್ ಹೆಗ್ಡೆ ಉಳೇಪಾಡಿ, ಶಾಸಕ ಯು.ಟಿ. ಖಾದರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸೆಸೆಫ್ ರಾಜ್ಯಾಧ್ಯಕ್ಷ ಯಾಕೂಬ್ ಸಅದಿ, ಎಸ್ಕೆಎಸ್ಸೆಸೆಫ್ ನ ಅನೀಶ್ ಕೌಸರಿ, ದಲಿತ ಮುಖಂಡ ಅಶೋಕ್ ಕೊಂಚಾಡಿ, ಮಹಮ್ಮದ್ ಕುಂಞಿ, ಫಾದರ್ ಫ್ರಾನ್ಸಿಸ್ ಅಸಿಸ್ ಮರಿಯ, ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ, ರಫೀವುದ್ದೀನ್ ಕುದ್ರೋಳಿ, ಅಶ್ರಫ್ ಮಾಚಾರ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ, ಕಣಚೂರು ಮೋನು, ಅತ್ತಾವುಲ್ಲ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಸೈಫುದ್ದೀನ್ ಕಿರಾಅತ್ ಪಠಿಸಿದರು. ಹಫೀಝ್ ಸಲಾಹಿ ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾಕೀರ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.