×
Ad

ಮಾಸ್ಕ್ ಧರಿಸಿದ ದುಷ್ಕರ್ಮಿಗಳ ತಂಡದಿಂದ ಜೆಎನ್ ಯುನಲ್ಲಿ ದಾಂಧಲೆ: ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಹಲ್ಲೆ

Update: 2020-01-05 20:20 IST

ಹೊಸದಿಲ್ಲಿ, ಜ. 5: ಇಲ್ಲಿನ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿಗೆ ರವಿವಾರ ಮುಸುಕು ಹಾಕಿದ ರೌಡಿಗಳ ಗುಂಪೊಂದು ಪ್ರವೇಶಿಸಿ ದಾಂಧಲೆ ನಡೆಸಿದೆ. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಗುರಿಯಾಗಿರಿಸಿ ಹಲ್ಲೆ ನಡೆಸಿದೆ. ಸೊತ್ತುಗಳಿಗೆ ಹಾನಿ ಉಂಟು ಮಾಡಿದೆ.

ಘಟನೆಯಲ್ಲಿ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷೆ ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಇಷ್ಟೆಲ್ಲಾ ನಡೆದರೂ ವಿ.ವಿ. ಕ್ಯಾಂಪಸ್‌ನಲ್ಲಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಜೆಎನ್‌ಯುಎಸ್‌ಯು ಉಪಾಧ್ಯಕ್ಷ ಸಾಕೇತ್ ಮೂನ್ ಆರೋಪಿಸಿದ್ದಾರೆ. ಈ ದಾಳಿಯ ಹಿಂದೆ ಎಬಿವಿಪಿಯ ಕೈವಾಡ ಇದೆ ಎಂದು ಜೆಎನ್‌ಯುಎಸ್‌ಯು ಆರೋಪಿಸಿದೆ. ತಮ್ಮ ಸದಸ್ಯರಿಗೆ ಎಡಪಂಥೀಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ.

ಸುಮಾರು 50ಕ್ಕೂ ಅಧಿಕ ಸಂಖ್ಯೆಯಲ್ಲಿ ಗೂಂಡಾಗಳು ಸಂಜೆ 6.30ಕ್ಕೆ ಕ್ಯಾಂಪಸ್ ಪ್ರವೇಶಿಸಿದರು. ಭೀತಿಗೊಂಡ ವಿದ್ಯಾರ್ಥಿಗಳು ನೆರವು ಕೋರಿ ಅಧ್ಯಾಪಕರಿಗೆ ಕರೆ ಮಾಡಿದರು ಎಂದು ಅಧ್ಯಾಪಕರೊಬ್ಬರು ತಿಳಿಸಿದ್ದಾರೆ. ಗುಂಪು ಕಲ್ಲು ತೂರಾಟ ನಡೆಸಿತು ಹಾಗೂ ಹಾಸ್ಟೆಲ್‌ಗೆ ಪ್ರವೇಶಿಸಿತು ಎಂದು ಅಧ್ಯಾಪಕರು ತಿಳಿಸಿದ್ದಾರೆ.

ಹೊರಗಿನಿಂದ ಶಸ್ತ್ರಸಜ್ಜಿತವಾಗಿ ಕ್ಯಾಂಪಸ್ ಪ್ರವೇಶಿಸಿದವರೊಂದಿಗೆ ಎಬಿವಿಪಿ ಕಾರ್ಯಕರ್ತರು ಕೈಜೋಡಿಸಿದ್ದರು ಎಂದು ಆರೋಪಿಸಿದ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಸಾಕೇತ್ ಮೂನ್, ರೌಡಿಗಳ ಗುಂಪು ಪ್ರತಿಯೊಂದು ಕೊಠಡಿಗೆ ಕೂಡ ಪ್ರವೇಶಿಸಿತು. ವಿದ್ಯಾರ್ಥಿಗಳ ಮೇಲೆ ವಿವೇಚನಾ ರಹಿತವಾಗಿ ಹಲ್ಲೆ ನಡೆಸಿತು. ಆದರೆ, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು ಎಂದಿದ್ದಾರೆ.

ನಾವು ದೂರು ಸ್ವೀಕರಿಸಿದ್ದೇವೆ. ಆದರೆ, ಇದುವರೆಗೆ ಕ್ಯಾಂಪಸ್ ಪ್ರವೇಶಿಸಲು ಜೆಎನ್‌ಯು ಆಡಳಿತ ಅನುಮತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  ವಿದ್ಯಾರ್ಥಿಗಳ ಒಕ್ಕೂಟದ ಅಧಿಕೃತ ಹ್ಯಾಂಡಲ್‌ನಲ್ಲಿ ‘ಎಮರ್ಜೆನ್ಸಿ ಜೆಎನ್ ಯು’ ಹಾಗೂ ‘ಎಸ್‌ಒಎಸ್‌ಜೆಎನ್‌ಯು’ ಎಂದು ಹ್ಯಾಷ್‌ಟ್ಯಾಗ್ ಕಾಣಿಸಿಕೊಂಡಿದೆ. ಅಲ್ಲದೆ ಟ್ವೀಟ್‌ನಲ್ಲಿ ನಮ್ಮನ್ನು ರಕ್ಷಿಸಲು ಪ್ರಯತ್ನಿಸಿದ ಅಧ್ಯಾಪಕರಿಗೆ ಥಳಿಸಲಾಗಿದೆ. ಇವರು ಅಪರಿಚಿತ ಎಬಿವಿಪಿ ಗೂಂಡಾಗಳು. ಎಲ್ಲರೂ ವಿದ್ಯಾರ್ಥಿಗಳು ಅಲ್ಲ. ಅವರು ತಮ್ಮ ಮುಖ ಮುಚ್ಚಿಕೊಂಡಿದ್ದಾರೆ. ಅವರು ವೆಸ್ಟ್‌ಗೇಟ್ ಸಮೀಪ ಇರುವ ಹಾಸ್ಟೆಲ್‌ನತ್ತ ತೆರಳಿದರು. ಎಚ್ಚರದಿಂದಿರಿ. ಮಾನವ ಸರಪಳಿ ರಚಿಸಿ ಎಂದು ಹೇಳಲಾಗಿದೆ.

 ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಐಶೆ ಘೋಷ್ ಗಂಭೀರ ಗಾಯಗೊಂಡಿದ್ದು, ಏಮ್ಸ್‌ನಲ್ಲಿ ದಾಖಲಿಸಲಾಗಿದೆ. ‘‘ಮುಸುಕು ಹಾಕಿದ ಗೂಂಡಾಗಳು ನನಗೆ ಥಳಿಸಿದರು’’ ಎಂದು ಅವರು ಹೇಳಿದ್ದಾರೆ.

  ಇದಕ್ಕೆ ತದ್ವಿರುದ್ದವಾಗಿ ‘‘ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಎಡಪಂಥೀಯ ವಿದ್ಯಾರ್ಥಿಗಳ ಸಂಘಟನೆಯಾದ ಎಸ್‌ಎಫ್‌ಐ, ಎಐಎಸ್‌ಎ ಹಾಗೂ ಡಿಎಸ್‌ಎಫ್ ದಾಳಿ ನಡೆಸಿದೆ. ಸುಮಾರು 25 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. 11 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಹಾಸ್ಟೆಲ್‌ನಲ್ಲಿ ಹಲವು ಎಬಿವಿಪಿ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ಹಾಸ್ಟೆಲ್‌ನಲ್ಲಿ ಎಡಪಂಥೀಯ ಗೂಂಡಾಗಳು ದಾಂಧಲೆ ನಡೆಸಿದ್ದಾರೆ’’ ಎಂದು ಎಬಿವಿಪಿ ತನ್ನ ಅಧಿಕೃತ ಹ್ಯಾಂಡ್‌ನಿಂದ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News