ಉಚ್ಚಿಲ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

Update: 2020-01-05 16:41 GMT

ಉಚ್ಚಿಲ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಎನ್‍ಆರ್‍ಸಿ ಮತ್ತು ಸಿಎಎ ದೇಶದ ಜನರಿಗೆ ಮಾರಕವಾಗಿದ್ದು, ಇದರ ದಾಖಲಾತಿಗೆ ಮನೆ ಬಾಗಿಲಿಗೆ ಬಂದರೆ ಯಾವುದೇ ಕಾರಣಕ್ಕೂ ದಾಖಲಾತಿ ನೀಡದೆ ಈ ಕಾಯ್ದೆಯನ್ನು ವಿರೋಧಿಸಬೇಕಾಗಿದೆ ಎಂದು ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮುಹ್ಸಿನ್ ಕರೆ ನೀಡಿದರು.

ಉಚ್ಚಿಲ ಪೇಟೆಯಲ್ಲಿ ರವಿವಾರ ಮುಸ್ಲಿಮ್ ಒಕ್ಕೂಟ ಉಚ್ಚಿಲ ಇದರ ವತಿಯಿಂದ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.

ದೇಶದಲ್ಲಿ ಈ ಕಾಯ್ದೆಯನ್ನು ಎಲ್ಲರೂ ವಿರೋಧಿಸಿದ್ದಾರೆ. ಪ್ರತಿಯೋರ್ವರು ಈ ಆಂದೋಲನದಲ್ಲಿ ಭಾಗವಹಿಸಬೇಕಾಗಿದ್ದು, ಈ ಕಾಯ್ದೆಯಿಂದ ಕೇವಲ ಮುಸ್ಲಿಮರು ಮಾತ್ರವಲ್ಲ ಎಲ್ಲರಿಗೂ ಅನ್ವಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಾನೂನು ಅನುಷ್ಠಾನಕ್ಕೆ ಬಂದರೆ ನಿರ್ಗತಿಕರು, ದಲಿತರು, ಹಿಂದುಳಿದ ವರ್ಗದವರು ಅಭದ್ರತೆಯಲ್ಲಿ ವಾಸಿಸುವ ಜನರು ಸಮಸ್ಯೆಗೊಳಪಡುತ್ತಾರೆ. ಈ ಕಾಯ್ದೆಯನ್ನು ತರುವ ಮೂಲಕ ದೇಶವನ್ನು ಛಿದ್ರಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸಮಾನತೆಯನ್ನು ಗೌರವಿಸುವಂತಹ ಕಾನೂನನ್ನು ಅಂಬೇಡ್ಕರ್ ರಚಿಸಿದ್ದಾರೆ. ಆದರೆ ಅವರ ಕಾನೂನನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಮಾರಕ ಕಾಯ್ದೆಯನ್ನು ರಚನೆ ಮಾಡಿದರೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ದೇಶದ ಅಭಿವೃದ್ಧಿಗೆ ಎಲ್ಲಾ ಸಮುದಾಯವನ್ನು ಒಗ್ಗೂಡಿಸುವ ಕೆಲಸ ವನ್ನು ಮಾಡಬೇಕು ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್‍ನ ಕಾರ್ಯದರ್ಶಿ ಕಿಶನ್ ಹೆಗ್ಡೆ ಮಾತನಾಡಿ, ಈ ಕಾಯ್ದೆಯ ವಿರುದ್ಧ ಗ್ರಾಮೀಣ ಪ್ರದೇಶದಲ್ಲೂ ನಡೆಯ ಬೇಕಾಗಿದ್ದು, ಜನರಲ್ಲಿ ಜನಜಾಗೃತಿ ಮೂಡಿಸಿ ಈ ಕಾಯ್ದೆಯ ವಿರುದ್ಧ ಅಸಹಾಕಾರ ಚಳುವಳಿ ನಡೆಸಬೇಕಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜನರನ್ನು ಮರಳು ಮಾಡುವ ಉದ್ದೇಶದಿಂದ ಇಂತಹ ಕಾಯ್ದೆಗಳನ್ನು ತಂದು ಜನರನ್ನು ಧರ್ಮಗಳ ಮೂಲಕ ಒಡೆಯಲು ಮುಂದಾಗಿದೆ ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ಮಸ್ಲಿಮ್ ಒಕ್ಕೂಟ ಉಚ್ಚಿಲ ಅಧ್ಯಕ್ಷ ಇಬ್ರಾಹಿಮ್ ತವಕ್ಕಲ್ ವಹಿಸಿದ್ದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ, ಎಂ.ಎ.ಗಫೂರ್, ಅಶ್ರಫ್ ರಝಾ ಅಂಜದಿ, ರಕೀಬ್ ಕನ್ನಂಗಾರ್, ಹಾಜಿ ಉಸ್ಮಾನ್ ಕಟ್ಟಿಂಗೇರಿ, ನಝೀರ್ ಅಹಮದ್, ಶಾಬಾನ್ ಶಾ, ದಿಲ್ಸಾದ್ ಆಲಿ, ಗುಲಾಂ ಮುಹಮ್ಮದ್, ಯು.ಸಿ. ಶೇಖಬ್ಬ, ಎ.ಕೆ. ಸುಲೈಮಾನ್, ಅಲೀ ಉಮರ್, ಎಸ್ಕೆಎಸ್ಸೆಸ್ಸೆಫ್ ಆಸೀಫ್ ಹನ್ನಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News