×
Ad

ಸಮಾನತೆಗಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜು: ಶಿವಸುಂದರ್

Update: 2020-01-06 19:05 IST

ಕುಂದಾಪುರ, ಜ. 6: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜ. 22ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ಈ ದೇಶದ ಸಂವಿಧಾನ, ಕಾನೂನು, ಸಾಕ್ಷಿ, ಪುರಾವೆಗಳ ಆಧಾರದಲ್ಲಿ ಕೆಲಸ ಮಾಡಬೇಕು. ಒಂದು ವೇಳೆ ಅದರಂತೆ ನಡೆದುಕೊಳ್ಳದಿದ್ದರೆ ಈ ದೇಶದ ಜನ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ದಲಿತರು, ಆದಿವಾಸಿಗಳು, ಮಹಿಳೆಯರು ದೇಶದಲ್ಲಿ ಸಮಾನತೆಗಾಗಿ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜಾಗಬೇಕು ಎಂದು ಪ್ರಗತಿಪರ ಹೋರಾಟಗಾರ, ಅಂಕಣಕಾರ ಶಿವಸುಂದರ್ ಅವರು ಕರೆ ನೀಡಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಸಮಿತಿ ಕುಂದಾಪುರ ಇದರ ವತಿಯಿಂದ ಕುಂದಾಪುರ ಶಾಸ್ತ್ರೀ ಸರ್ಕಲ್ ಸಮೀಪ ಸೋಮವಾರ ಹಮ್ಮಿಕೊಳ್ಳಲಾದ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಇವೆಲ್ಲವೂ ಒಂದೇ ಆಗಿದೆ. ಕಾಗದ ಪತ್ರ ಇಲ್ಲದ ಎಲ್ಲರ ನಾಗರಿಕತ್ವ ಕಸಿದು ಕೊಳ್ಳುವುದೇ ಇದರ ಉದ್ದೇಶವಾಗಿದೆ. ಇದು ಕೇವಲ ಮುಸ್ಲಿಮರ ಹೋರಾಟ ಅಲ್ಲ. ಈ ದೇಶ ನನ್ನದು ಎಂಬ ನಿಜವಾದ ದೇಶಾಭಿಮಾನ ಇರುವ ಪ್ರತಿಯೊಬ್ಬರ ಹೋರಾಟವಾಗಿದೆ. ಕಾಗದ ಪತ್ರ ಇಲ್ಲದ ಪ್ರತಿಯೊಬ್ಬರಿಗೂ ಇದರಿಂದ ಅನ್ಯಾಯ ಆಗಲಿದೆ ಎಂದರು.

ಜಗತ್ತಿನಲ್ಲಿ ಯಾರಿಗಾದರೂ ಆಶ್ರಯ ಬೇಕಾದರೆ ನನ್ನ ದೇಶದ ಬಾಗಿಲು ತೆರೆದಿದೆ ಎಂದು ಸ್ವಾಮಿ ವಿವೇಕಾನಂದ ಚಿಕಾಗೋದಲ್ಲಿ ಭಾಷಣ ಮಾಡಿದರು. ಅತಂಹ ಔದರ್ಯ ನಮ್ಮ ದೇಶದ್ದು. 1947ರಿಂದ ಪಾಕಿಸ್ತಾನ, ಬಾಂಗ್ಲಾ, ಟಿಬೆಟ್, ಉಗಾಂಡ, ಶ್ರೀಲಂಕಾ ದೇಶಗಳಿಂದ ವಲಸೆ ಬಂದ ಎಲ್ಲ ಧರ್ಮದ ಕೋಟ್ಯಂತರ ಮಂದಿಗೆ ಈ ದೇಶ ಪೌರತ್ವ ನೀಡಿದೆ. ಆಗ ಎಲ್ಲಿಯೂ ಮುಸ್ಲಿಮ ರನ್ನು ಹೊರಗಡೆ ಇಡಲಿಲ್ಲ ಎಂದು ಅವರು ತಿಳಿಸಿದರು.

ಪಾಕಿಸ್ತಾನ, ಅಪಘಾನಿಸ್ತಾನಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅಂದರೆ ಕೇವಲ ಹಿಂದುಗಳು ಮಾತ್ರವಲ್ಲ, ಅಹಮದಿಯ, ಶಿಯಾ ಕೂಡ ಧಾರ್ಮಿಕ ಅಲ್ಪಸಂಖ್ಯಾತರೇ ಆಗಿದ್ದಾರೆ. ಇವರು ಕೂಡ ಈ ದೇಶಗಳಲ್ಲಿ ಧಾರ್ಮಿಕ ಧಮನಕ್ಕೆ ತುತ್ತಾಗಿದ್ದಾರೆ. ಆದರೆ ಭಾರತದ ಆಶ್ರಯ ಕೇಳಿಕೊಂಡು ಬಂದ ಇವರನ್ನು ಮಾತ್ರ ಯಾಕೆ ಹೊರಗಡೆ ಇಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಭಾರತ ಧರ್ಮ ಆಧಾರಿತವಾಗಿ ವಿಭಜನೆ ಆಗಬೇಕೆಂಬುದು ಮೊದಲು ಹೇಳಿರುವುದು ಸಾರ್ವಕರ್. ಆದರೆ ಪಾಕಿಸ್ತಾನ ಧರ್ಮ ಆಧಾರಿತ ದೇಶ ಆಯಿತೇ ಹೊರತು ಭಾರತ ಎಂದಿಗೂ ಆಗಲಿಲ್ಲ. ಯಾವುದೇ ಧರ್ಮದವರಿಗೂ ತಾರತಮ್ಯ ಮಾಡಲ್ಲ ಮತ್ತು ಇಲ್ಲಿ ಹುಟ್ಟಿರುವವ ಎಲ್ಲರು ಕೂಡ ಭಾರತೀಯರೆ ಎಂಬ ಉದಾತ್ತ ಧ್ಯೇಯದ ಮೇಲೆ ಕಟ್ಟಲಾದ ಭಾರತವನ್ನು ಇಂದು ಈ ಕಾಯ್ದೆ ತರುವ ಮೂಲಕ ಪರೋಕ್ಷವಾಗಿ ಇಲ್ಲದ ಹಾಗೆ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.

ಮಹೇಂದ್ರ ಕುಮಾರ್ ಮಾತನಾಡಿ, ಎನ್‌ಆರ್‌ಸಿಯ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಇದರ ವಿರುದ್ಧ ಜನರನ್ನು ಕಟ್ಟಿಕೊಂಡು ಹೋಗುವ ಚಳವಳಿ ಮಾಡಬೇಕಾಗಿದೆ. ದೇಶದ ಒಗ್ಗಟ್ಟು, ನೆಲದ ಉಳಿವಿಗಾಗಿ ಎಲ್ಲರೂ ಬೀದಿಗೆ ಇಳಿದು ಹೋರಾಟ ಮಾಡಬೇಕು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಎನ್‌ಆರ್‌ಸಿಗೆ ದಾಖಲೆಗಳನ್ನು ಕೊಡುವುದಿಲ್ಲ ಮತ್ತು ಅದನ್ನು ತಿರಸ್ಕರಿಸುತ್ತೇವೆ. ಬಡವರ, ಆದಿವಾಸಿ, ದಲಿತರ ಸೇರಿದಂತೆ ಎಲ್ಲ ಸಮುದಾಯದಲ್ಲಿ ದಾಖಲೆಗಳಿಲ್ಲದ ಬಡವರ ಪರವಾಗಿ ನಾವು ದಾಖಲೆ ಗಳನ್ನು ಕೊಡದೆ ಇದನ್ನು ಬಹಿಷ್ಕರಿಸಲಾಗುವುದು. ಮುಸ್ಲಿಮರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಎಂದಿಗೂ ಈ ಎನ್‌ಆರ್‌ಸಿ ಬರಲು ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದರು.

ಚಿಂತಕ ಹಾಗೂ ಹೋರಾಟಗಾರ ಸುಧೀರ್ ಕುಮಾರ್ ಮುರೋಳಿ, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಎ.ಕೆ.ಅಶ್ರಫ್, ಉಡುಪಿ ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್, ದಲಿತ ಮುಖಂಡ ಸುಂದರ್ ಮಾಸ್ತರ್, ಕೆಥೋಲಿಕ್ ಸಭಾದ ಕುಂದಾಪುರ ವಲಯ ಅಧ್ಯಕ್ಷ ಎರಿಕ್ ಗೋನ್ಸಾಲಿಸ್ ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ಆಸೀಮ್ ಕುಂದಾಪುರ ವಂದಿಸಿದರು. ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಿಕರೊಂದಿಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಲೇಖಕ ವಸಂತ ಬನ್ನಾಡಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಅಲ್‌ ಹಾಜ್ ಜಾಫರ್ ತಂಙಳ್ ಕೋಟೇಶ್ವರ ಭಾಗವಹಿಸಿದ್ದರು.

'ಹುಚ್ಚುತನ, ಅವೇಕಿತನದ ಕಾಯ್ದೆ'

ಈ ದೇಶದಲ್ಲಿ ಕೇವಲ 40ಸಾವಿರದಷ್ಟು ಇದ್ದ ನಕಲಿ ನೋಟುಗಳನ್ನು ಪತ್ತೆ ಹಚ್ಚಲು, ಚಲಾವಣೆಯಲ್ಲಿದ್ದ 16ಲಕ್ಷ ಕೋಟಿ ರೂ. ನೋಟುಗಳನ್ನು ಕೂಡ ನಿಷೇಧ ಮಾಡಲಾಯಿತು. ಅದರ ಪರಿಣಾಮ ನಾವು ಇಂದಿಗೂ ಅನುಭವಿಸುತ್ತಿದ್ದೇವೆ. ಈ ಹುಚ್ಚುತನ ಹಾಗೂ ಅವೇಕಿತನವನ್ನು ಇದೀಗ ನಾಗರಿಕತ್ವಕ್ಕೂ ಅನ್ವಯಿಸುವಂತೆ ಮಾಡಲಾಗುತ್ತಿದೆ. ಈ ದೇಶದಲ್ಲಿರುವ ಅಕ್ರಮ ನುಸುಳಿಕೋರರನ್ನು ಪತ್ತೆ ಹಚ್ಚಲು, ಎಲ್ಲ 130 ಕೋಟಿ ಜನ ಕೂಡ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಲಾಗುತ್ತಿದೆ ಎಂದು ಶಿವಸುಂದರ್ ದೂರಿದರು.

ಈ ಕಾಯ್ದೆಯಲ್ಲಿ ಕೇವಲ ಈ ಮೂರು ದೇಶಗಳು ಮಾತ್ರ ಪಟ್ಟಿಯಲ್ಲಿವೆ. ರೋಹಿಂಗ್ಯಾ ಮುಸ್ಲಿಮರ ನರಮೇಧ ನಡೆಸಲಾಗುತ್ತಿರುವ ಬರ್ಮಾ, ಕ್ರಿಶ್ಚಿಯನ್ನರು ಅನ್ಯಾಯಕ್ಕೆ ಒಳಗಾಗುತ್ತಿರುವ ಬೂತಾನ್, ತಮಿಳರ ನರಮೇಧ ಮುಂದುವರೆಸುತ್ತಿರುವ ಶ್ರೀಲಂಕಾ ಯಾಕೆ ಈ ಪಟ್ಟಿಯಲ್ಲಿ ಇಲ್ಲ. ಇದರ ಅರ್ಥ ಇವರಿಗೆ ಧಾರ್ಮಿಕ ಧಮನಕ್ಕೆ ತುತ್ತಾದವರಿಗೆ ಆಶ್ರಯ ಕೊಡಬೇಕೆಂಬ ಉದಾತ್ತ ಧ್ಯೇಯ ಇಲ್ಲ ಎಂಬುದು. ಇವರ ಉದ್ದೇಶ ಮುಸ್ಲಿಮ್ ದೇಶಗಳು ಕ್ರೂರಿ ಮತ್ತು ಮುಸ್ಲಿಮರು ಎಂದಿಗೂ ಧಾರ್ಮಿಕವಾಗಿ ಧಮನಕ್ಕೆ ತುತ್ತಾಗುವುದಿಲ್ಲ ಎಂಬುದನ್ನು ಬಿಂಬಿಸುವುದಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News